
ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ-ಕರ್ನಾಟಕ, ಪಡಿ ಸಂಸ್ಥೆ ಮಂಗಳೂರು, ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (RLHP) ಮೈಸೂರು, ಕೆ.ಸಿ.ಆರ್.ಓ ಬೆಂಗಳೂರು ಮತ್ತು ಚೈಲ್ಡ್ ಫಂಡ್ ಇಂಟರ್ನ್ಯಾಷನಲ್ ಇವರ ಸಂಯುಕ್ತ ಆಶ್ರಯದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ ಕುರಿತ ರಾಜ್ಯಮಟ್ಟದ ಸಮಾಲೋಚನಾ ಸಭೆ ಯನ್ನೂ ಬೆಂಗಳೂರಿನ ಎಸ್.ಸಿ.ಎಂ. ಹೌಸ್ ನಲ್ಲಿ ನಡೆಸಲಾಯಿತು.
ಉದ್ಘಾಟನೆ ಮಾಡಿ ಮಾತನಾಡಿದ ನಾಗಣ್ಣಗೌಡ , ಅಧ್ಯಕ್ಷರು, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಬೆಂಗಳೂರು, ಪ್ರಸ್ತುತ ಬಾಲಗರ್ಭಿಣಿಯರ ಸಂಖ್ಯೆ ಯಥೇಚ್ಛವಾಗುತ್ತಿದ್ದು ಅದು ಇಲಾಖೆಯಿಂದಲೇ ಅಧಿಕೃತವಾಗಿ ಹೊರಬಂದಿದೆ.
ಮುಖ್ಯಮಂತ್ರಿಗಳು ಬಾಲ್ಯ ವಿವಾಹ ಸಂಪೂರ್ಣವಾಗಿ ತೊಡದು ಹಾಕಲು ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಸಭೆಗಳನ್ನು ನಡೆಸುತ್ತಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಪರಿಶೀಲನಾ ಸಭೆಗಳನ್ನು ನಡೆಸಲು ಜಿಲ್ಲೆಯ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ.
ಇಂದಿನ ದಿನಮಾನಗಳಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಚರ್ಚಿಸುವ ಅವಶ್ಯಕತೆ ತುಂಬಾ ಇದೆ ತಾವೆಲ್ಲರೂ ಮಕ್ಕಳ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಇಂದು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿ, ಪಟ್ಟಿಯನ್ನು ಮಾಡಿ ಹಕ್ಕೊತಾಯಗಳನ್ನು ನೀಡಲು ತಯಾರಿ ಮಾಡಿ ಸರ್ಕಾರದ ಗಮನಕ್ಕೆ ತರುತ್ತಿರುವುದು ಶ್ಲಾಘನೀಯ. ಮುಂದಿನ ದಿನದಲ್ಲಿ ಮಕ್ಕಳ ರಕ್ಷಣೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಜೊತೆ ನಮ್ಮ ಆಯೋಗ ಸದಾ ಇರುತ್ತದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ವಾಸುದೇವ ಶರ್ಮ ಏನ್ ವಿ ನಿರ್ದೇಶಕರು ಚೈಲ್ಡ್ ರೈಟ್ ಟ್ರಸ್ಟ್ ಬೆಂಗಳೂರು ಇತ್ತೀಚೆಗೆ ಬಿಡುಗಡೆಯಾದ ಭಾರತದ ಮಾನವ ಅಭಿವೃದ್ಧಿ 2024ರ ವರದಿಯ ಕುರಿತು ಮಾತನಾಡುತ್ತಾ ಭಾರತ ಸುಧಾರಣೆ ಕಂಡಿರುವುದು ಸಂತೋಷದ ವಿಚಾರ ಆದರೆ ಇನ್ನೂ ಅಪೌಷ್ಟಿಕತೆ, ತಾಯಿ ಮತ್ತು ಮಕ್ಕಳ ಮರಣ, ಐದು ವರ್ಷದ ಒಳಗಿನ ಮಕ್ಕಳ ಸಾವು ಇವುಗಳು ಇನ್ನೂ ಕಡಿಮೆಯಾಗಬೇಕು. ಬಾಲ್ಯ ವಿವಾಹ, ಬಾಲ ಗರ್ಭಿಣಿಯರು, ಬಾಲಕಾರ್ಮಿಕರು, ಲೈಂಗಿಕ ದೌರ್ಜನ್ಯ ಕ್ಕೆ ಒಳಗಾದ ಮಕ್ಕಳು ಮತ್ತು ಶಾಲೆ ಬಿಡುತ್ತಿರುವ ಮಕ್ಕಳ ಸಮಸ್ಯೆಗಳು ನೇರವಾಗಿ ನಮ್ಮ ದೇಶದ ಅಭಿವೃದ್ಧಿ ಸೂಚಾಂಕಕ್ಕೆ ಪರಿಣಾಮವನ್ನು ಬೀರುತ್ತವೆ. ಇಂದು ದೇಶದ ಅಭಿವೃದ್ಧಿ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಗುರುತಿಸಿಕೊಳ್ಳಬೇಕಾದರೆ ಮಕ್ಕಳ ಮತ್ತು ಮಹಿಳೆಯರ ಮೇಲಿನ ಸಮಸ್ಯೆಗಳು ನಿಯಂತ್ರಣಕ್ಕೆ ಬರಬೇಕು ಮಕ್ಕಳಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು, ಯೋಜನೆಗಳು ಸರಿಯಾಗಿ ಸಿಕ್ಕಲ್ಲಿ ಇದನ್ನು ಸಾಧಿಸಲು ಸಾಧ್ಯ ಹಾಗಾಗಿ ಮಕ್ಕಳ ರಕ್ಷಣೆಯ ಕಡೆಗೆ ಸರಕಾರ, ಸಂಘ ಸಂಸ್ಥೆಗಳು ಮತ್ತು ಇಲಾಖೆ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕಾಗಿದೆ.
ಕಾನೂನು ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕಾಗಿದೆ. ಈ ಕುರಿತು ಸರಕಾರಕ್ಕೆ ಮನವಿಗಳನ್ನು ಶಿಫಾರಸ್ಸುಗಳನ್ನು ಸಲ್ಲಿಸುವುದು ಈ ಸಮಾಲೋಚನ ಸಭೆಯ ಧ್ಯೇಯ ಉದ್ದೇಶ ಎಂದು ತಿಳಿಸಿದರು.ಶ್ರೀ ವೆಂಕಟೇಶ್ , ಸದಸ್ಯರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಇವರು ಮಾತನಾಡುತ್ತಾ ಪ್ರಸ್ತುತ ದಿನಗಳಲ್ಲಿ ಮಕ್ಕಳ ಹಕ್ಕುಗಳು ಗುಣಮಟ್ಟದ ಶಿಕ್ಷಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಕಾಯ್ದೆಗಳ ಕುರಿತು ಚರ್ಚಿಸುವುದು ತುಂಬಾ ಅವಶ್ಯಕವಾಗಿದೆ ಇವತ್ತು ಮಕ್ಕಳು ಸಮಾಜದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳಿಂದ ಅವರನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಈ ರೀತಿ ಸೇರಿ ಸಭೆಗಳನ್ನು ಮಾಡಿ ಸರಕಾರಕ್ಕೆ ಮನವಿಗಳನ್ನು ಸಲ್ಲಿಸುವುದು ತುಂಬಾ ಅವಶ್ಯಕವಾಗಿದೆ ಎಂದರು.
ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ – ಕರ್ನಾಟಕ (CACL-K) ರಾಜ್ಯ ಸಂಚಾಲಕರಾದ ಶ್ರೀಮತಿ ಸರಸ್ವತಿ ಇವರು ಸ್ವಾಗತಿಸಿ ಪಡಿ ಸಂಸ್ಥೆ ಮಂಗಳೂರು ಇದರ ನಿರ್ದೇಶಕರಾದ ಶ್ರೀ ರೆನ್ನಿ ಡಿಸೋಜಾ ಇವರು ವಂದಿಸಿದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ರಾಘವೇಂದ್ರ ಭಟ್ ಪ್ರಾದೇಶಿಕ ಸಂಯೋಜಕರು ಯುನಿಸೆಫ್, ಕೊಪ್ಪಳ ಉಪಸ್ಥಿತರಿದ್ದರು.
30 ಜಿಲ್ಲೆಗಳಿಂದ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ 70 ಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಕರ್ತರು ಭಾಗವಹಿಸಿದ್ದರು.