
ಶಿವಮೊಗ್ಗ: ನಗರದ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಕುವೆಂಪು ನಗರ ಬಡಾವಣೆಗೆ ನಗರ ಶಾಸಕರಾದ ಚೆನ್ನಬಸಪ್ಪ ಚೆನ್ನಿ ಭೇಟಿ ನೀಡಿ ಮುಂಬರುವ ಮಳೆಗಾಲಕ್ಕೆ ಆಗುವ ಅಪಾಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಸಂಭವಿಸುವ ನೆರೆ ಹಾಗೂ ಕೆರೆಯ ಹೆಚ್ಚುವರಿ ನೀರು ಬಡಾವಣೆಗೆ ಹರಿದು ಬರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಪರಿಶೀಲನೆ ನಡೆಸಿದರು.
ಈ ಸಮಸ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ, ವಿವಿಧ ತಾಂತ್ರಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕುರಿತು ಸಮಾಲೋಚನೆಯನ್ನು ನಡೆಸಿ, ನಗರದ ಎಲ್ಲಾ ಭಾಗಗಳಲ್ಲಿ ಮಳೆಗಾಲದ ಮುನ್ನ ಜಾಗೃತಿ ಕ್ರಮಗಳನ್ನು ಶಿಸ್ತಿನಿಂದ ಅನುಷ್ಠಾನಗೊಳಿಸುವ ಮೂಲಕ, ನಾಗರಿಕರಿಗೆ ತೊಂದರೆ ಉಂಟಾಗದಂತೆ ಪಾಲಿಕೆ ಬದ್ಧವಾಗಿ ಇರಬೇಕೆಂದು ತಿಳಿಸಿದರು.

ಶಾಸಕರ ಭೇಟಿಯ ವೇಳೆ ಬಡಾವಣೆಯ ನಿವಾಸಿಗಳು ಉಪಸ್ಥಿತರಿದ್ದು ತಮಗಾಗುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನಕ್ಕೆ ತಂದರು ಈ ಸಂದರ್ಭದಲ್ಲಿ ಪಾಲಿಕೆ ಅಧಿಕಾರಿಗಳಾದ ಲಕ್ಷ್ಮಿ ,ತ್ರಿವೇಣಿ, ಉಪಸ್ಥಿತರಿದ್ದು ಶೀಘ್ರದಲ್ಲಿ ಬಡಾವಣೆಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಶಾಸಕರಿಗೆ ತಿಳಿಸಿದರು.
