
ತೀರ್ಥಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ತೀರ್ಥಹಳ್ಳಿ ತಾಲೂಕು ಅಗುಂಬೆ ವಲಯದ ವತಿಯಿಂದ ಕುಂದಾ ಕುಂದಾ ೧೦೦೮ ತೀರ್ಥಂಕರ ತಪೋಭೂಮಿ ಕುಂದಾದ್ರಿ ಬೆಟ್ಟದ ದೇವಸ್ಥಾನ ಮತ್ತು ಸುತ್ತಮುತ್ತ ಪರಿಸರದ ಬೆಟ್ಟಕ್ಕೆ ಹೋಗುವ ರಸ್ತೆಯ ಎರಡೂ ಕಡೆಗಳಲ್ಲಿ ಗಿಡಗಂಟೆಗಳನ್ನು ತೆಗೆದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡಿದ್ದರು.
ಹೊಂಬುಜ ಜೈನ ಮಠದ ಸುಪರ್ದಿಯಲ್ಲಿರುವ ಈ ಪುರಾತನ ಪುಣ್ಯ ಕ್ಷೇತ್ರ ಕುಂದಾದ್ರಿ ಬೆಟ್ಟದಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ವಾರ್ಷಿಕ ಜಾತ್ರೆ ನಡೆಯುತ್ತಿದ್ದು ಕಳೆದ ಹತ್ತು ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯುತ್ತಿದ್ದು ಈ ಬಾರಿಯು ಸ್ವಚ್ಛತಾ ಅಭಿಯಾನವನ್ನು ಆಯೋಜನೆ ಮಾಡಿದ್ದರು.
ಹೊಂಬುಜ ಜೈನ ಮಠದ ಟ್ರಸ್ಟಿಗಳಾದ ಪಟ್ಟಣದ ಪೂಜ್ಯಪಾದ ಚಿಕಿತ್ಸಾಲಯದ ವೈದ್ಯರಾದ ಡಾ. ಜೀವಂಧರ್ ಜೈನ್‌ರವರ ಸರ್ವ ಸಹಕಾರದೊಂದಿಗೆ ಯೋಜನಾಧಿಕಾರಿ ಹೇಮಲತಾರವರ ಮಾರ್ಗದರ್ಶನದಲ್ಲಿ ಆಗುಂಬೆ ವಲಯದ ಮೇಲ್ವಿಚಾರಕರಾದ ಅಶೋಕ, ವಲಯದ ಸೇವಾ ಪ್ರತಿನಿಧಿಗಳಾದ ನೇತ್ರಾವತಿ, ಮೈತ್ರಿ, ಶಕುಂತಲಾ, ಶೈಲಜಾ, ರಾಮು ಉಳಿದ ಕಾರ್ಯಕರ್ತರೊಡನೆ ಆಗುಂಬೆ ಗ್ರಾಮ ಪಂಚಾಯತಿ ಸದಸ್ಯ ಗುಡ್ಡೇಕೇರಿ ಶಶಾಂಕ್ ಹೆಗ್ಡೆ, ನಿತ್ಯಾನಂದ ಕೆಂದಾಳಬೈಲು, ಶಿವಪ್ಪ ಹೆಗ್ಡೆ, ಅರಣ್ಯ ಇಲಾಖೆಯ ಪಾಂಡುರಂಗ, ಪುರೋಹಿತರಾದ ಶಾಂತಿನಾಥ ಜೈನ್ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಅರವತ್ತು ಜನ ಸ್ವಯಂ ಸೇವಕರು ಈ ಸ್ವಚ್ಚತಾ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು.
ಅರ್ಪಣಾ ಮನೋಭಾವದಿಂದ ಈ ಧಾರ್ಮಿಕ ಕ್ಷೇತ್ರ ಹಾಗೂ ಪರಿಸರದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರಿಗೂ ಅಭಿನಂದನೆಗಳನ್ನು ಈ ಸಂದರ್ಭದಲ್ಲಿ ಡಾ. ಜೀವಂಧರ್ ಜೈನ್‌ರವರು ತಿಳಿಸಿದರು.
ಜನಸೇವೆ ಜನಾರ್ಧನ ಸೇವೆ ಎಂಬಂತೆ ಧಾರ್ಮಿಕ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ತಮ್ಮ ಸಾಮಾಜಿಕ ಕಳಕಳಿ ವ್ಯಕ್ತಪಡಿಸಿದ್ದೀರಿ ನಿಮಗೆ ಹೊಂಬುಜ ಜೈನ ಮಠದ ಪರವಾಗಿ ಅಭಿನಂದಿಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ವರದಿ: ರಶ್ಮಿ ಶ್ರೀಕಾಂತ್ ನಾಯಕ್…