ಶುಭ ಮುಹೂರ್ತದ ಸಾಮೂಹಿಕ, ವೈಯಕ್ತಿಕ ವಿವಾಹಗಳ ಮೇಲೆ ನಿಗಾ ಇಡಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸೂಚನೆ.
ಅಕ್ಷಯ ತೃತೀಯಕ್ಕೆ ಬಂಗಾರವಲ್ಲ, ಬಾಲ್ಯ ವಿವಾಹದ ಆತಂಕ
ಶಿವಮೊಗ್ಗ: ಅಕ್ಷಯ ತೃತೀಯ ಎಂದರೆ ಬಂಗಾರ ಖರೀದಿಗೆ, ಗೃಹ ಪ್ರವೇಶ, ಭೂಮಿ ಪೂಜೆ, ಮದುವೆ ಇತರೆ ಯಾವುದೇ ಶುಭ ಕಾರ್ಯಗಳಿಗೆ ಪ್ರಾಶಸ್ತö್ಯವಾದ ದಿನ. ಆದರೆ ಇದು ಆತಂಕಪಡುವ ದಿನವೂ ಹೌದು. ಶುಭಮುಹೂರ್ತದ ಕಾರಣ ಬಹುತೇಕ ಬಾಲ್ಯವಿವಾಹಗಳು ಇದೇ ದಿನ ನಡೆಯುತ್ತಿವೆ. ಇದನ್ನೆ ತಡೆಗಟ್ಟಲೆಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಏ.30ರ ಅಕ್ಷಯ ತೃತೀಯ ದಿನದಂದು ಹೆಚ್ಚಿನ ನಿಗಾ ವಹಿಸಲು ಸೂಚಿಸಿದೆ.
ನಾಲ್ಕು ದಿನದ ಹಿಂದೆ ಶಿವಮೊಗ್ಗದ ಮಕ್ಕಳ ಸಹಾಯವಾಣಿಗೆ ದೂರವಾಣಿ ಕರೆಯಲ್ಲಿ ಪ್ರಥಮ ಪಿಯು ಪರೀಕ್ಷೆಯಲ್ಲಿ ಶೇ.81ರಷ್ಟು ಫಲಿತಾಂಶವನ್ನು ಪಡೆದು ಉತ್ತೀರ್ಣಳಾದ ಬಾಲಕಿಯು “ಸರ್ ದಯಮಾಡಿ ನನ್ನನ್ನ ರಕ್ಷಿಸಿ ನಾನು ಮುಂದೆ ಓದಬೇಕು ನಮ್ಮ ಅಜ್ಜಿ ನನ್ನನ್ನು ಇದೇ ತಿಂಗಳ 30 ರಂದು ಮದುವೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ನನಗೆ ಸದ್ಯಕ್ಕೆ ಮದುವೆ ಬೇಡ ಶಿಕ್ಷಣ ಮುಗಿದ ನಂತರ ನೀವು ಹೇಳಿದವರನ್ನೇ ಮದುವೆ ಆಗುತ್ತೇನೆ ಎಂದರು ಕೇಳುತ್ತಿಲ್ಲ. “ಹೆಣ್ಣಿಗೆ ಎಂದಾದರೂ ಮದುವೆ ಆಗಲೇಬೇಕು” ಅಕ್ಷಯ ತೃತೀಯ ತುಂಬಾ ಒಳ್ಳೆಯ ಮುಹೂರ್ತ ಈ ದಿನ ಮದುವೆಯಾದರೆ ಮುಂದೆ ನಿನ್ನ ಸಂಸಾರ ಚೆನ್ನಾಗಿರುತ್ತದೆ. ಹಾಗಾಗಿ ಅದೇ ದಿನ ನಿನ್ನ ಮದುವೆ ಎಂದು ಹೇಳುತ್ತಿದ್ದಾರೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದಯಮಾಡಿ ನನ್ನನ್ನು ರಕ್ಷಿಸಿ ಸರ್” ಎಂದು ಮನವಿ ಮಾಡಿಕೊಂಡಿದ್ದಾರೆ. ಇದು ಒಂದು ಉದಾಹರಣೆಯಾದರೂ ನೂರಾರು ಮಕ್ಕಳು ಮುಂದೇನು ಮಾಡಬೇಕು ತಿಳಿಯದೆ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ.
ನಮ್ಮ ಸಮಾಜದಲ್ಲಿ ಮದುವೆಗೆ ಭಾವನಾತ್ಮಕ, ಧಾರ್ಮಿಕ, ಸಾಮಾಜಿಕ, ನೈತಿಕ, ಮತ್ತು ಶಾಸನಾತ್ಮಕವಾದ ಬೆಂಬಲವಿದೆ. 18 ವರ್ಷ ದಾಟಿದ ಹೆಣ್ಣು ಮತ್ತು 21 ವರ್ಷ ಮೀರಿದ ಗಂಡು ಮದುವೆಯಾಗಬಹುದು ಎಂಬ ಜ್ಞಾನ ಹಳ್ಳಿ- ಪಟ್ಟಣದ ಜನ, ಸಮುದಾಯ, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳು, ಸರ್ಕಾರದ ವಿವಿಧ ಹಂತಗಳಲ್ಲಿರುವ ಅಧಿಕಾರಿಗಳು, ಮಕ್ಕಳು, ಯುವಕರಿಗೂ ಇದೆ. ಆದರೂ ಪ್ರಮುಖವಾಗಿ ಹೆಣ್ಣು ಮಕ್ಕಳನ್ನು ಅವರು ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಹಲವು ಕಾರಣಗಳಿಗಾಗಿ ಕದ್ದು ಮುಚ್ಚಿ ವಿವಾಹದ ಬಂಧನಕ್ಕೆ ದೂಡುತ್ತಿದ್ದಾರೆ. “ಹೆಣ್ಣಿಗೆ ಎಂದಾದರೂ ಮದುವೆಯಾಗಲೇಬೇಕು. ಒಬ್ಬರ ಆಸರೆಯಲ್ಲಿ ಜೀವನ ಸಾಗಿಸುವುದಷ್ಟೇ ಆಕೆಗಿರುವ ಉತ್ತಮ ಆಯ್ಕೆ ಎಂಬ ಮನೋಭಾವದಿಂದ ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಕಾನೂನನ್ನು ಪರಿಗಣಿಸದೆ ಸಾಮಾಜಿಕ ಅಪರಾಧ ಮಾಡಲಾಗುತ್ತಿದೆ. ಬಾಲ್ಯ ವಿವಾಹ ಪಿಡಿಗಿನಿಂದ ಮಕ್ಕಳ ಮೇಲೆ ಆಗುವ ಮಾನಸಿಕ, ಭೌತಿಕ, ದೈಹಿಕ, ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಪೋಷಕರ ಅರಿವಿಗೆ ಬರುತ್ತಿಲ್ಲ.
ಬಾಲ್ಯ ವಿವಾಹಕ್ಕೆ ಶಿಕ್ಷೆ ಮತ್ತು ದಂಡ
ಅಪ್ರಾಪ್ತ ಮಗುವನ್ನು ಮದುವೆಯಾಗುವ ವಯಸ್ಕ ಹೆಣ್ಣು ಅಥವಾ ಗಂಡು, ಬಾಲ್ಯ ವಿವಾಹ ಏರ್ಪಡಿಸುವ ತಂದೆ, ತಾಯಿ, ಪೋಷಕರು, ಮದುವೆಗೆ ಹಾಜರಾದ ಬಂಧು – ಬಳಗ, ಗೆಳೆಯರು, ಹಿತೈಷಿಗಳು, ಮಧ್ಯಸ್ಥಿಕೆದಾರರು, ಪುರೋಹಿತರು, ಮೌಲ್ವಿ ಇತ್ಯಾದಿ,. ಬ್ಯಾಂಡ್ ಸಂಗೀತ, ವಾಲಗದವರು, ಮದುವೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆಂಬಲ ನೀಡುವವರು, ಆಹ್ವಾನ ಪತ್ರಿಕೆ ಮುದ್ರಿಸುವವರು, ಛಾಯಾಚಿತ್ರ ಗ್ರಾಹಕರು, ಅಡಿಗೆ ಮಾಡುವವರು, ಸಮುದಾಯ ಭವನ, ಛತ್ರ, ಟೆಂಟ್ ಇತ್ಯಾದಿ ಬಾಡಿಗೆ ಕೊಡುವವರು ಸಾಮೂಹಿಕ ಮದುವೆಗಳಲ್ಲಿ ಬಾಲ್ಯ ವಿವಾಹಕ್ಕೆ ಅವಕಾಶ ಮಾಡಿಕೊಡುವ ಆಯೋಜಕರು, ವಯಸ್ಸಿನ ಸುಳ್ಳು ಪ್ರಮಾಣ ಪತ್ರ ನೀಡಿದ್ದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮುಖ್ಯಸ್ಥರು, ವೈದ್ಯರು, ಮಗುವಿನ ಜವಾಬ್ದಾರಿ ಹೊತ್ತ ವ್ಯಕ್ತಿ ಸಂಘ-ಸAಸ್ಥೆ ಹೀಗೆ ಬಾಲ್ಯವಿವಾಹಕ್ಕೆ ಯಾರು ಸಹಾಯ ಕುಮ್ಮಕ್ಕು ಮಾಡಿದರು ಅವರೆಲ್ಲರಿಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ- 2016ರ ಅಡಿ ಶಿಕ್ಷೆ ಕಟ್ಟಿಟ್ಟ ಬುತ್ತಿ.
ಅಪರಾಧ ಸಾಬೀತಾದರೆ ಎರಡು ವರ್ಷದ ತನಕ ಜೈಲು ಮತ್ತು ಎರಡು ಲಕ್ಷದವರೆಗಿನ ದಂಡ ಅಥವಾ ಎರಡನ್ನು ರಚಿಸಬಹುದು. ಇದು ವಾರೆಂಟ್ ಮತ್ತು ಜಾಮೀನು ರಹಿತ ಅಪರಾಧವಾಗಿದೆ.
ಈ ವರ್ಷ ಏ.30 ರಂದು ಅಕ್ಷಯ ತೃತೀಯ ಇರುವ ಕಾರಣ ಬಾಲ್ಯ ವಿವಾಹ ಜರಗುವ ಸಾಧ್ಯತೆಗಳಿದ್ದು ಈ ಸಂಬAಧ ಈಗಾಗಲೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುತ್ತೋಲೆ ಹೊರಡಿಸಿದೆ. ಬಾಲ್ಯ ವಿವಾಹ ವಾಗುವ ಸಾಧ್ಯತೆ ಕುರಿತು ಮಾಹಿತಿ ಸಿಕ್ಕಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಗ್ರಾಮ, ತಾಲೂಕು, ಜಿಲ್ಲಾ ಮಟ್ಟದ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳಿಗೆ ಅಥವಾ ಮಕ್ಕಳ ಉಚಿತ ಸಹಾಯವಾಣಿ 1098 ಅಥವಾ 112ಗೆ ಮಾಹಿತಿ ನೀಡುವುದರ ಮೂಲಕ ಸುಭದ್ರ ಹಾಗೂ ಸುರಕ್ಷಿತ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ.
- ತಾಜುದ್ದೀನ್ ಖಾನ್, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ (ಮಕ್ಕಳ ನ್ಯಾಯ ಪೀಠ), ಶಿವಮೊಗ್ಗ