
ಶಿವಮೊಗ್ಗ : ನಾಳೆ ಆ.31ರಂದು ಶಿವಮೊಗ್ಗ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಅಧಿಕೃತವಾಗಿ ಲಭ್ಯವಾಗಲಿದೆ. ಇನ್ನು ಮುಂದೆ ಸಾರ್ವಜನಿಕರು ಲೋಹದ ಹಕ್ಕಿಮೇಲೆ ಪ್ರಯಾಣ ಮಾಡಬಹುದು.
ಆ.31ರ ಬೆಳಗ್ಗೆ ಬೆಂಗಳೂರಿನಿಂದ ಹೊರಡುವ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 11.05ಕ್ಕೆ ಆಗಮಿಸುತ್ತದೆ. ನಾಳೆ ಬರುವ ವಿಶೇಷ ವಿಮಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಎಮ್.ಬಿ ಪಾಟೀಲ್ ಸೇರಿದಂತೆ ಗಣ್ಯಾತಿ ಗಣ್ಯರು ಬರಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪರವರು ಸಹ ನಾಳಿನ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸುವ ನಿರೀಕ್ಷೆ ಇತ್ತು ಆದರೆ ಸಚಿವರ ಪೂರ್ವ ನಿಯೋಜಿತ ಕಾರ್ಯಕ್ರಮ ಇರುವುದರಿಂದ ಸಚಿವ ಮಧು ಬಂಗಾರಪ್ಪ ನಾಳಿನ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವುದಿಲ್ಲ.
ಗೃಹ ಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮಕ್ಕೆ ಇಂದು ಜಿಲ್ಲೆಗೆ ಆಗಮಿಸಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿನ ಕಾರ್ಯಕರ್ತರ ಸಭೆಗೆ ಬಂದಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ನಾಳೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮ ಇರುವುದರಿಂದ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಕ್ರಮಕ್ಕೆ ಬರಲು ಆಗುತ್ತಿಲ್ಲ
ನಾರಾಯಣ ಗುರುಗಳ ಜಯಂತಿಯನ್ನು ನಾವೆಲ್ಲಾ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಆಚರಿಸಬೇಕಿದೆ.
ಮಾನ್ಯ ಮುಖ್ಯಮಂತ್ರಿಗಳು ಖುದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ತಿಳಿಸಿದ್ದಾರೆ ಆದ್ದರಿಂದ ವಿಮಾನ ನಿಲ್ದಾಣ ಕಾರ್ಯಕ್ರಮಕ್ಕೆ ಬರಲು ಆಗುತ್ತಿಲ್ಲ. ಬದಲಾಗಿ ಇಂದು ಗೃಹ ಲಕ್ಷ್ಮಿ ಕಾರ್ಯಕ್ರಮದ ನಂತರ ವಿಮಾನ ನಿಲ್ದಾಣಕ್ಕೆ ತೆರಳಿ ಸಿದ್ಧತೆ ಪರಿಶೀಲನೆ ನಡೆಸಲಿದ್ದೇನೆ ನಾಳಿನ ಕಾರ್ಯಕ್ರಮ ಸುಗಮವಾಗಲಿ ಎಂದು ತಿಳಿಸಿದರು.
ವರದಿ: ವಿನಯ್ ಕುಮಾರ್ ಹೆಚ್.ಎಮ್