ನಗರದ ಹೊರವಲಯ ಅನುಪಿನಕಟ್ಟೆಯಲ್ಲಿ ಮಹಾನಗರಪಾಲಿಕೆಯಿಂದ ನಿರ್ವಹಿಸಲಾಗುತ್ತಿರುವ ಘನತ್ಯಾಜ್ಯ ಸಂಸ್ಕರಣಾ ಘಠಕವು ಚಿಕ್ಕದಾಗಿದ್ದು, ಏರುತ್ತಿರುವ ನಗರದ ಜನಸಂಖ್ಯೆಗನುಗುಣವಾಗಿ ನಗರದಲ್ಲಿ ಉತ್ಪಾದಿತವಾಗುತ್ತಿರುವ ತ್ಯಾಜ್ಯವು ದಿನೇದಿನೇ ಹೆಚ್ಚಾಗುತ್ತಿದೆ. ಹೆಚ್ಚಿನ ಸಾಮರ್ಥ್ಯದ ಮತ್ತೊಂದು ಘಟಕವನ್ನು ನಗರ ಪ್ರದೇಶದ ವ್ಯಾಪ್ತಿಯಿಂದ ಮತ್ತಷ್ಟು ದೂರದಲ್ಲಿ ಅತ್ಯಾಧುನಿಕವಾಧ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ನಿರ್ಮಿಸಬೇಕಾದ ಅಗತ್ಯವಿದೆ ಎಂದು ಉಪಲೋಕಾಯುಕ್ತ ನ್ಯಾ. ಕೆ.ಎಸ್.ಫಣೀಂದ್ರ ಅವರು ಅಭಿಪ್ರಾಯಪಟ್ಟರು.
ಅವರು ಇಂದು ಅನುಪಿನಕಟ್ಟೆಯಲ್ಲಿರುವ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗಳು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ,
ಈಗಿರುವ ಘಟಕದಿಂದ ಸುತ್ತಮುತ್ತಲ ಪ್ರದೇಶದ ನಿವಾಸಿಗಳಿಂದ ನಾಯಿಗಳ ಹಾವಳಿ, ಪ್ರಾಣಿ ಪಕ್ಷಿಗಳ ಉಪಟಳ, ದುರ್ನಾತ, ನೊಣಗಳಿಂದ ಸಾಂಕ್ರಾಮಿಕ ರೋಗಗಳ ಹರಡುವ ಆತಂಕ ಇರುವ ಬಗ್ಗೆ ಲೋಕಾಯುಕ್ತದಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿ, ಸಾರ್ವಜನಿಕರ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು ಎಂದ ಅವರು, ಇಲ್ಲಿನ ತ್ಯಾಜ್ಯದಿಂದ ಹೊರಸೂಸುವ ದುರ್ನಾತ, ಮಲಿನ ನೀರು ಪರಿಸರದಲ್ಲಿ ಮಿಳಿತವಾಗದಂತೆ ಹಾಗೂ ಮಲಿನ ನೀರನ್ನು ಸಂಸ್ಕರಿಸಿ ಬಿಡುವಲ್ಲಿ ಎಚ್ಚರಿಕೆ ವಹಿಸಲು ಸೂಚಿಸಿರುವುದಾಗಿ ಅವರು ತಿಳಿಸಿದರು.
ಈಗಾಗಲೇ ಸಾರ್ವಜನಿಕರು ಈ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮನವಿ ನೀಡಿದ್ದು, ಯಾವುದೇ ಲಾಭ ಆಗಿಲ್ಲ. ಘಟಕದ ಸ್ಥಳಾಂತರದ ಬಗ್ಗೆಯೂ ಪರಿಶೀಲಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಇಲ್ಲಿನ ಘಟಕ ನಿರ್ವಹಣೆ ಸಮಾಧಾನಕರವಾಗಿದೆ ಆದರೂ, ತೃಪ್ತಿಕರವಲ್ಲ ಎಂದ ಅವರು ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಸ್ವಯಂ ಪ್ರೇರಿತ ಮೊಕದ್ದಮೆಯನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುವುದಾಗಿಯೂ ಅವರು ತಿಳಿಸಿದರು.
ನಗರದ 18 ಪ್ರಮುಖ ವರ್ತುಲಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಪೊಲೀಸ್‌ಚೌಕಿಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳ ಸದ್ಬಳಕೆ ಆಗದಿರುವ ಬಗ್ಗೆ ಬೇಸರವಿದೆ. ಸುಮಾರು 2.00ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಿರಬಹುದಾದ ಚೌಕಿಗಳನ್ನು ಬಳಸಿಕೊಂಡು, ನಗರ ಸಂಚಾರದಲ್ಲಿ ಇನ್ನಷ್ಟು ಸುಧಾರಣ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್‌ಅಧೀಕ್ಷಕರಿಗೆ ಸೂಚಿಸಿರುವುದಾಗಿ ಅವರು ತಿಳಿಸಿದ ಅವರು, ಈ ವಿಷಯದಲ್ಲಿಯೂ ಸ್ವಯಂ ಪ್ರೇರಿತ ದೂರನ್ನು ದಾಖಲಿಸಿಕೊಂಡಿರುವುದಾಗಿ ಅವರು ತಿಳಿಸಿದರು. ನಂತರ ನಗರ ರಸ್ತೆ ಸಾರಿಗೆ ನಿಗಮದ ಬಸ್‌ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಇಲ್ಲಿಯೂ ಸಾರ್ವಜನಿಕರಿಂದ ಸಾಕಷ್ಟು ದೂರುಗಳಿದ್ದವು. ಪ್ರಸ್ತುತ ಪರಿಶೀಲಿಸಲಾಗಿದ್ದು, ಸ್ವಚ್ಚತೆ ಇರುವುದನ್ನು ಗಮನಿಸಲಾಗಿದೆ. ಆದಾಗ್ಯೂ ಮುಂದಿನ ದಿನಗಳಲ್ಲಿ ಇಲ್ಲಿನ ಸ್ವಚ್ಚತೆ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್, ನ್ಯಾ. ಎನ್.ಆರ್.ಲೋಕಪ್ಪ, ನ್ಯಾ.ಜಿ.ವಿ.ವಿಜಯಾನಂದ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್‌ಎಂ.ಎಸ್, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾಯೋಗಪ್ಪನವರ್‌ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳ ಸಾರ್ವಜನಿಕರು ಸರ್ಕಾರಿ ಇಲಾಖೆಗಳಲ್ಲಿ ನಿರ್ಲಕ್ಷ್ಯ, ಅನಗತ್ಯ ವಿಳಂಬವಾಗುತ್ತಿರುವ ಬಗ್ಗೆ ಲೋಕಾಯುಕ್ತದಲ್ಲಿ ದಾಖಲಾದ ದೂರುಗಳ ಪೈಕಿ 65 ದೂರುಗಳ ದೂರುದಾರರು ಹಾಗೂ ಪ್ರತಿವಾದಿಗಳನ್ನು ಆಹ್ವಾನಿಸಿ, ಉಪಲೋಕಾಯುಕ್ತ ನ್ಯಾ. ಕೆ.ಎಸ್.ಫಣೀಂದ್ರ ಅವರು, ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ನೀಡಿ, ದೂರುಗಳನ್ನು ವಿಲೇಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ತಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಜಿ.ಕೆ.ಮಿಥುನಕುಮಾರ್, ನ್ಯಾ. ಎನ್.ಆರ್.ಲೋಕಪ್ಪ, ನ್ಯಾ.ಜಿ.ವಿ.ವಿಜಯಾನಂದ, ಮತ್ತಿತರರು ಉಪಸ್ಥಿತರಿದ್ದರು.