ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ಐದು ದಿನಗಳ ಪ್ರಾಯಶ್ಚಿತ್ತ ಹೋಮ – ಆನೆ ಸಾಗಿದ ರಸ್ತೆಯಲ್ಲಿ ಗಜವಾಹನೋತ್ಸವಕ್ಕೆ ಸಿದ್ಧತೆ..!
ಶಿವಮೊಗ್ಗ: ಐತಿಹಾಸಿಕ ಶಿವಮೊಗ್ಗ ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸೋಮಣ್ಣ ಆನೆ ರಂಪಾಟ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ, ಮುಂದೆ ಯಾವುದೇ ರೀತಿಯ ಅನಾಹುತಗಳು ಸಂಭವಿಸದಂತೆ ಹಾಗೂ ನಾಡಿನ ಜನತೆಗೆ ಒಳಿತಾಗಲಿ ಎಂಬ ಉದ್ದೇಶದಿಂದ ಶಿವಮೊಗ್ಗದ ಅರ್ಚಕರು ಧಾರ್ಮಿಕ ವಿಧಿವಿಧಾನಗಳ ಮೊರೆ ಹೋಗಿದ್ದಾರೆ.
ದಸರಾ ಮೆರವಣಿಗೆ ವೇಳೆ ನಡೆದ ಆನೆಯ ರಂಪಾಟದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರ್ಚಕರು, ಗುರುಹಿರಿಯರ ಮಾರ್ಗದರ್ಶನದಂತೆ ಪ್ರಾಯಶ್ಚಿತ್ತ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಶೃಂಗೇರಿ ಶ್ರೀಗಳ ಮಾರ್ಗದರ್ಶನದಲ್ಲಿ ವಿಶೇಷ ಹೋಮ..!
ಶೃಂಗೇರಿ ಶ್ರೀಗಳ ಮಾರ್ಗದರ್ಶನದಂತೆ ಶಿವಮೊಗ್ಗದ ಐತಿಹಾಸಿಕ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಐದು ದಿನಗಳ ಕಾಲ ವಿಶೇಷ ಪ್ರಾಯಶ್ಚಿತ್ತಾದಿ ಧಾರ್ಮಿಕ ವಿಧಿವಿಧಾನಗಳನ್ನು ಆಯೋಜಿಸಲಾಗಿದೆ.
ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜೆಗಳು ಆರಂಭವಾಗಿದ್ದು, ಶ್ರೀ ವಿಶ್ವಕ್ಸೇನ ಪೂಜೆ, ನವಗ್ರಹ ಪೂಜೆ, ನವಗ್ರಹ ಹೋಮ, ಪೂರ್ಣಾಹುತಿ ಹಾಗೂ ಸಂಪ್ರೋಕ್ಷಣೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತಿದೆ.
ಮುಂದೆ ಯಾವುದೇ ಅನಾಹುತ ಸಂಭವಿಸದಿರಲಿ ಎಂಬ ಪ್ರಾರ್ಥನೆ..!
ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸಂಭವಿಸಿದ ಆನೆಯ ರಂಪಾಟದಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಿರಲಿ, ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಿರಲಿ ಹಾಗೂ ನಾಡಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲಿ ಎಂಬ ಸಂಕಲ್ಪದೊಂದಿಗೆ ಈ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.
ಗುರುಹಿರಿಯರ ಸಲಹೆ ಹಾಗೂ ಧಾರ್ಮಿಕ ಸಂಪ್ರದಾಯಗಳ ಅನುಸಾರ ಪ್ರಾಯಶ್ಚಿತ್ತ ಹೋಮವನ್ನು ನೆರವೇರಿಸಲಾಗುತ್ತಿದ್ದು, ಐದು ದಿನಗಳ ಕಾಲ ನಿರಂತರವಾಗಿ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿವೆ.
ಆನೆ ಸಾಗಿದ ರಸ್ತೆಯಲ್ಲೇ ಗಜವಾಹನೋತ್ಸವ..!

ಐದು ದಿನಗಳ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಕೊನೆಯ ದಿನ ಹಿತ್ತಾಳೆಯ ಗಜವಾಹನೋತ್ಸವ ನಡೆಸಲು ಉದ್ದೇಶಿಸಲಾಗಿದೆ.
ವಿಶೇಷವಾಗಿ ಅಮ್ಮನವರ ತ್ರಿಶೂಲವನ್ನು ಇರಿಸಿಕೊಂಡು, ದಸರಾ ಮೆರವಣಿಗೆಯ ಸಂದರ್ಭದಲ್ಲಿ ಸೋಮಣ್ಣ ಆನೆ ಸಂಚರಿಸಿದ ರಸ್ತೆಯಲ್ಲಿಯೇ ಧಾರ್ಮಿಕ ಉತ್ಸವ ನಡೆಸಲು ಅರ್ಚಕರು ಮುಂದಾಗಿದ್ದಾರೆ.
ಈ ಮೂಲಕ ಧಾರ್ಮಿಕ ಸಂಪ್ರದಾಯದಂತೆ ಪ್ರಾಯಶ್ಚಿತ್ತ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಸಿದ್ಧತೆ ನಡೆಸಲಾಗಿದೆ.
ಐದು ದಿನಗಳ ಕಾಲ ವಿಶೇಷ ಧಾರ್ಮಿಕ ಕಾರ್ಯಕ್ರಮ..!
ಶಿವಮೊಗ್ಗದ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ನಡೆಯುತ್ತಿರುವ ಈ ವಿಶೇಷ ಪೂಜಾ ಕಾರ್ಯಕ್ರಮಗಳು ಐದು ದಿನಗಳ ಕಾಲ ಮುಂದುವರಿಯಲಿದ್ದು, ಅಂತಿಮ ದಿನ ಗಜವಾಹನೋತ್ಸವದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಸಂಪನ್ನಗೊಳ್ಳಲಿವೆ.
1} 03/11/2026
ಬೆಳಗ್ಗೆ 8:30ಕ್ಕೆ ಮಹಾಸಂಕಲ್ಪ
ಶ್ರೀ ವಿಶ್ವಕ್ಸೇನ ಪೂಜೆ
ನವಗ್ರಹ ಪೂಜೆ ಹಾಗೂ ಹೋಮ
ಪೂರ್ಣಾಹುತಿ
ಸಂಪ್ರೋಕ್ಷಣೆ
ತೀರ್ಥ ಪ್ರಸಾದ ವಿನಿಯೋಗ
2} 04/11/2026
ಬೆಳಗ್ಗೆ 9:00 ಕ್ಕೆ
ಶ್ರೀ ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನದಂತೆ “ಒಂದು ಲಕ್ಷ ಗಾಯತ್ರಿ ಜಪ”
*ಪುರುಷ ಸೂಕ್ತ ಹೋಮ
ಪೂರ್ಣಆಹುತಿ,ತೀರ್ಥ ಪ್ರಸಾದ ವಿನಿಯೋಗ.
3}05/11/2026
ಬೆಳಗ್ಗೆ 9:00 ರಿಂದ ಇಡೀ ದಿವಸ
ಗಾಯಿತ್ರಿ ಜಪ ಇರುತ್ತದೆ
6/11/2026
ಬೆಳಗ್ಗೆ 9:00ಕ್ಕೆ
ಗಾಯಿತ್ರಿ ಜಪ ಹಾಗೂ ಗಾಯಿತ್ರಿ ಹೋಮ
ಪೂರ್ಣಾವತಿ, ತೀರ್ಥ ಪ್ರಸಾದ ವಿನಿಯೋಗ
7/11/2026
ಬೆಳಗ್ಗೆ 9:00ಕ್ಕೆ
ಮಹಾ ಸುದರ್ಶನ ಮೂಲ ಮಂತ್ರ ಹೋಮ
ಪ್ರಾಯಶ್ಚಿತ್ತ ಹೋಮ
ಪೂರ್ಣಹುತಿ,ಮಹಾ ಮಂಗಳಾರತಿ,ತೀರ್ಥ, ಮಹಾಪ್ರಸಾದ (ಅನ್ನದಾನ) ವಿನಿಯೋಗ
ಸಂಜೆ 7:30ಕ್ಕೆ
ಹಿತ್ತಾಳೆಯ ಗಜವಾಹನೋತ್ಸವ ಹಾಗೂ ಅಮ್ಮನವರ ತ್ರಿಶೂಲ ಇಟ್ಟು ಆನೆಯು ಚಲಿಸಿದ ರಸ್ತೆಯಲ್ಲಿ ಉತ್ಸವವನ್ನು ನಡೆಸುವುದು ವಾದ್ಯ, ವೇದ ಗೋಷ್ಠಿ, ಛತ್ರಿ ,ಚಾಮರ ದೀವಟಿಗೆ , ಗೌರವಗಳೊಂದಿಗೆ ಹಾಗೂ ಅಷ್ಟವಾದನ ಸೇವೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ.