
ತೀರ್ಥಹಳ್ಳಿ: ಎಲ್ಲಿಯಾ ಸಣ್ಣ ಪ್ರಚಾರವನ್ನೂ ಬಯಸದೆ ಎಲೆಮರೆಯ ಕಾಯಿಯಂತೆ ತನ್ನ ಪಾಡಿಗೆ ತನ್ನ ವ್ಯಾಪ್ತಿಯಲ್ಲಿ ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಮಕ್ಕಿಮನೆ ಪ್ರಶಾಂತ್ ಸಾಕಷ್ಟು ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದ ಎನ್ನುವುದಕ್ಕೆ ಈ ಗೆಲುವೇ ಸಾಕ್ಷಿ. ವ್ಯಕ್ತಿ ದೊಡ್ಡವನೆನಿಸುವುದು ಹಣದಿಂದಲ್ಲ ಗುಣದಿಂದ ಎಂಬುದಕ್ಕೆ ಮತ್ತೊಂದು ಉದಾರಣೆ ಇದು ಎಂದು ಹಿರಿಯ ನ್ಯಾಯವಾದಿ ಟಿ ಎಲ್ ಮಂಜುನಾಥ್ ನುಡಿದರು. ಅವರು ಮಲ್ನಾಡ್ ಕ್ಲಬ್ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿ ಅತ್ಯಧಿಕ ಮತಗಳಿಂದ ಆಯ್ಕೆಯಾದ ಮಕ್ಕಿಮನೆ ಪ್ರಶಾಂತ್ ಗೆ ಸಹಪಾಟಿಗಳ ಬಳಗದಿಂದ ಆಯೋಜಿಸಿದ್ದ ಆತ್ಮೀಯ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಂದುವರೆದು,ಸಮಾಜದ ದೃಷ್ಟಿಯಲ್ಲಿ ಇದೊಂದು ಮಹತ್ವದ ಚುನಾವಣೆ ಅಲ್ಲದಿರಬಹುದು. ಆದರೆ ನಿಸ್ವಾರ್ಥದಿಂದ ಸಮಾಜಮುಖಿ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರಿಗೆ ಯಾವುದೇ ಆಮಿಷ,ಜಾತಿ ಮುಂತಾದ ಚೌಕಟ್ಟುಗಳನ್ನು ಮೀರಿದ ಇಂತಹ ಪ್ರಾಮಾಣಿಕ ಗೆಲುವುಗಳು ತುಂಬುವ ಉತ್ಸಾಹ, ನೀಡುವ ಶಕ್ತಿ ಸಾಮಾನ್ಯದ್ದಲ್ಲ. ಆ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದು. ಇಂತಹ ವ್ಯಕ್ತಿಗಳು ಎತ್ತರಕ್ಕೇರಿದಷ್ಟೂ ಸಮಾಜಕ್ಕೆ ಲಾಭ ಹಾಗಾಗಿ ಮುಂದೆ ಮಲ್ನಾಡ್ ಕ್ಲಬ್ ಅಧ್ಯಕ್ಷನಾಗಿಯೂ ಆಯ್ಕೆಯಾಗಿ ಇನ್ನಷ್ಟು ಹೆಚ್ಚಿನ ಸಮಾಜಮುಖಿ ಕಾರ್ಯಗಳನ್ನು ನಡೆಸುವಂತಾಗಲಿ ಎಂದು ಶುಭಹಾರೈಸಿದರು.
ಗುಡ್ಡೆಕೊಪ್ಪ ಕರ್ನಾಟಕ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಶ್ರೀನಿವಾಸ್ ಮಾತನಾಡಿ ತಮ್ಮ ಇತಿಮಿತಿಗಳಲಿ ಸಾಕಷ್ಟು ಸಮಾಜಮುಖಿ ಕಾರ್ಯಚಟುವಟಿಕೆಗಳಲಿ ತಮ್ಮನ್ನು ತೊಡಗಿಸಿಕೊಂಡಿರುವ ನಮ್ಮ ಸಹಪಾಟಿಗಳ ಬಗ್ಗೆ ನಮಗೆ ಹೆಮ್ಮೆ. ನಾವು ಎಷ್ಟು ಗಳಿಸಿದ್ದೇವೆ ಎಂಬುದು ಮುಖ್ಯವಲ್ಲ ನಮ್ಮ ಬದುಕಿನಿಂದ ಸಮಾಜಕ್ಕೆ ಎಷ್ಟು ಉಪಯೋಗ ಆಗಿದೆ ಎಂಬುದು ಮುಖ್ಯ. ಇವತ್ತು ನಾವೆಲ್ಲಾ ನಮ್ಮ ಗೆಳೆಯನ ಗೆಲುವನ್ನು ನಮ್ಮದೆಂಬಂತೆ ಸಂಭ್ರಮಿಸುತ್ತೇವೆ ಎಂದರೆ ಅದಕ್ಕೆ ಕಾರಣ ಆತನ ನಿಸ್ವಾರ್ಥ ಸಮಾಜಮುಖಿ, ಮಾನವೀಯ ಕಾಳಜಿಗಳು. ಆತನಿಂದ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ದೊರಕಲು ಈ ಗೆಲುವು ಖಂಡಿತಾ ಸ್ಪೂರ್ತಿಯಾಗುತ್ತದೆ ಎಂದರು.
ಸತೀಶ್ ಜ್ಯುವೆಲ್ಲರ್ಸ್ ನ ಎನ್ ಸತೀಶ್ ಮಾತನಾಡಿ, ಆಪತ್ಭಾಂದವನಂತೆ ಸದಾ ಕಾಲವು ಸಮಾಜ ಸೇವೆಗೆ ಸಿದ್ದವಿರುವ ಪ್ರಶಾಂತ್ ಹಾಗೂ ಸಮಾಜಮುಖಿ ಕಾಳಜಿಯ ನಮ್ಮೆಲ್ಲಾ ಮಿತ್ರರೆಲ್ಲರೂ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಅದರಿಂದ ಸಮಾಜಕ್ಕೆ ಇನ್ನಷ್ಟು ಒಳಿತಾಗಲಿ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ದೊಡ್ಡ ದೊಡ್ಡವರೆಲ್ಲಾ ನಮ್ಮ ಮಿತ್ರರಾಗಲಿ ಎಂದು ಅಪೇಕ್ಷಿಸುವುದಕ್ಕಿಂತ ನಮ್ಮ ಮಿತ್ರರೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ಎಂದು ಹಾರೈಸುವುದೇ ಉತ್ತಮ. ಸಮಾಜದ ನಡುವಿನ ಒಳಿತನ್ನು ಕಂಡಾಗ ಅದಕ್ಕೆ ಪುಟ್ಟ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಸ್ವಾಸ್ಥ್ಯ ಸಮಾಜವನ್ನು ಕಟ್ಟಲು ನಮ್ಮೆಲ್ಲರ ಪ್ರಯತ್ನಗಳಿರಲಿ.ಪ್ರಶಾಂತನ ಈ ಗೆಲುವು ಸಮಾಜಸೇವೆಯಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ನಮ್ಮೆಲ್ಲಾ ಮಿತ್ರರಿಗೂ ಸ್ಪೂರ್ತಿ ತುಂಬಲಿ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಕ್ಕಿಮನೆ ಪ್ರಶಾಂತ್, ಸಹಪಾಟಿಗಳ ಬಳಗದ ಈ ಅನಿರೀಕ್ಷಿತ ಅಭಿನಂದನೆ ನಿಜಕ್ಕೂ ಖುಷಿ ತಂದಿದೆ. ನನ್ನ ಸಣ್ಣ ಪುಟ್ಟ ಸಮಾಜಮುಖಿ ಕಾರ್ಯಚಟುವಟಿಕೆಗಳಿಗೆ ಸಹಕಾರ ಬೆಂಬಲ ನೀಡುತ್ತಿರುವ ನನ್ನ ಸಹಪಾಟಿಗಳಿಗೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಉಪನ್ಯಾಸಕರಾದ ಕೆ ಸಿ ಗಿರೀಶ, ಕೆ ನಾಗಭೂಷಣ, ವಿನಾಯಕ ಚಿತ್ರಮಂದಿರದ ಮಾಲೀಕ ರವೀಂದ್ರ ಕಾಮತ್ , ಮಕ್ಕಿಮನೆ ಕುಟುಂಬಸ್ಥರು ಮತ್ತಿತರರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಸಹಪಾಟಿಗಳ ಬಳಗದ ಜಾಯ್ ಎಂಟರ್ ಪ್ರೈಸಸ್ ನ ಜಾನ್ ಸನ್ ಪಿಂಟೋ ಸ್ವಾಗತಿಸಿ, ಶಿಕ್ಷಕಿ ರಿಜ್ವಾನ ಖಾನಂ ನಿರೂಪಿಸಿ,ವಂದಿಸಿದರು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…