
………………………………………………………………………………………….
ಶಿವಮೊಗ್ಗ : ಸಕ್ಕರೆ ಕಾಯಿಲೆ ನಿವಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆಲೋಪತಿ, ಆಯುರ್ವೇದ ಸೇರಿದಂತೆ ಎಲ್ಲಾ ವೈದ್ಯಕೀಯ ಪದ್ಧತಿಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದೊಂದಿಗೆ ಶಿವಮೊಗ್ಗದ ಮೆಟ್ರೋ ಸಂಸ್ಥೆಯ ಸಹಯೋಗದಿಂದಿಗೆ ವಿನ್ ಲೈಫ್ ಸಂಸ್ಥೆ ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಮಧು ಮೇಹ ಜನ ಜಾಗೃತಿ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಜನ ಸೇರಿದ್ದರು.
ಕುವೆಂಪು ರಂಗಮಂದಿರ ಭರ್ತಿಯಾಗುವ ಮೂಲಕ ಸಮಾವೇಶ ಯಶಸ್ವಿಗೊಂಡಿತು.
ಶಿವಮೊಗ್ಗ ನಗರ ಮಾತ್ರವಲ್ಲದೆ ತೀರ್ಥಹಳ್ಳಿ, ಶಿಕಾರಿಪುರ, ಹಿರೇಕೆರೂರು, ಸೊರಬ, ಭದ್ರಾವತಿ, ಹರಿಹರ, ಚನ್ನಗಿರಿ, ಹೊನ್ನಾಳಿ, ಸಾಗರ ಸೇರಿದಂತೆ ದೂರದ ಊರುದಗಳಿಂದಲೂ ಜನರು ಸಮಾವೇಶಕ್ಕೆ ಬಂದಿದ್ದರು. ಮಧು ಮೇಹ ಮತ್ತು ಅದರ ವೈಜ್ಞಾನಿಕ ಚಿಕಿತ್ಸಾ ವಿಧಾನದಲ್ಲಿ ಜನರಲ್ಲಿರುವ ಅಪ ನಂಬಿಕೆ ಮತ್ತು ತಪ್ಪು ತಿಳಿವಳಿಕೆಗಳನ್ನು ದೂರ ಮಾಡಿ ಸರಿಯಾದ ಚಿಕಿತ್ಸಾ ವಿಧಾನ ಹಾಗೂ ತಿಳಿಸುವ ಕುರಿತೇ ನಡೆದ ಸಮಾವೇಶದಲ್ಲಿ ಜನರಿಗೆ ಉಪಯುಕ್ತ ಮಾಹಿತಿಯೇ ಲಭ್ಯವಾಯಿತು.
‘ಮಧು ಮೇಹಿಗಳ ಜೀವನ ಶೈಲಿ, ಆಹಾರ ಪದ್ಧತಿ ‘ ಕುರಿತು ಖ್ಯಾತ ಆರ್ಯುವೇದ ತಜ್ಞರಾದ ಡಾ. ಪತಂಜಲಿ ಅವರು ಜನರಿಗೆ ಮನದಟ್ಟಾಗುವಂತೆ ಉಪನ್ಯಾಸ ನೀಡಿದರು. ಹಾಗೆಯೇ ಮಧು ಮೇಹಿಗಳಿಗೆ ಯೋಗದ ಅಗತ್ಯತೆ ಕುರಿತು ಖ್ಯಾತ ಯೋಗ ತಜ್ಞರಾದ ಡಾ. ಶಶಿಕಾಂತ್ ಕುಂಬಾರ್ ಮಾತನಾಡಿದರು. ಇನ್ನು ಸಮಾವೇಶದ ರೂವಾರಿಗಳಾದ ವಿನ್ ಲೈಫ್ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪೃಥ್ವಿ ಬಿ.ಸಿ. ಅವರು ಮಧು ಮೇಹಿಗಳಿಗೆ ಆಧುನಿಕ ವೈದ್ಯಕೀಯ ಪದ್ಧತಿ ಕುರಿತು ಉಪನ್ಯಾಸ ನೀಡಿದರು. ಮೂವರು ವೈದ್ಯರು ತಮಗಿರುವ ಮಾಹಿತಿಗಳನ್ನು ಸಮಾವೇಶದಲ್ಲಿ ಪ್ರಸ್ತುತ ಪಡಿಸಿದ ನಂತದ ಮಧು ಮೇಹಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಮುನ್ನೆಚ್ಚರಿಕೆ ವಹಿಸಿದಲ್ಲಿ ಸಕ್ಕರೆಕಾಯಿಲೆಯಿಂದ ಪಾರಾಗಲು ಸಾಧ್ಯ
ಮಧುಮೇಹ ಜನಜಾಗೃತಿ ಸಮಾವೇಶದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್…
ಸಕ್ಕರೆ ಕಾಯಿಲೆ ಬಂದರೆ ಜೀವನ ಮುಗಿಯಿತು ಎಂಬ ಭಾವನೆ ಬೇಡ. ಸಕ್ಕರೆ ಕಾಯಿಲೆ ಇದ್ದರೂ ಸಹ ಉತ್ತಮಶೈಲಿ ಹಾಗೂ ಆಹಾರಪದ್ಧತಿ ಅಳವಡಿಸಿಕೊಳ್ಳುವ ಮೂಲಕ ರೋಗದ ದುಷ್ಟರಿಣಾಮವನ್ನು ತಡೆಗಟ್ಟಬಹುದು. ಮುನ್ನೆಚ್ಚರಿಕೇ ರೋಗದಿಂದ ಪಾರಾಗಲು ಸೂಕ್ತ ಮದ್ದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಚಿಂತನೆ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಹೇಳಿದರು.
ಸಕ್ಕರೆ ಕಾಯಿಲೆಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ವಿನ್‌ಲೈಫ್ ಟ್ರಸ್ಟ್ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಮಧುಮೇಹ ಜನಜಾಗೃತಿ ಸಮಾವೇಶ, ಮಧುಮೇಹ ನಿವಾರಣೆ ಮತ್ತು ನಿಯಂತ್ರಣಕ್ಕೆ ಆಲೋಪತಿ, ಆಯುರ್ವೇದ, ಯೋಗ ಸೇರಿದಂತೆ ಎಲ್ಲ ವೈದ್ಯಕೀಯ ಪದ್ಧತಿಗಳ ಸಮಾಗಮ ಹಾಗೂ ಮುಕ್ತ ಚರ್ಚೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಂದಿನ ಆಧುನಿಕ ಯುಗದ ಭರಾಟೆಯಲ್ಲಿ ಎಲ್ಲರೂ ಒತ್ತಡದ ಜೀವನ ನಡೆಸುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಅನೇಕ ಕಾಯಿಲೆಗಳು ಸಹ ಮನುಷ್ಯರನ್ನು ಕಾಡುತ್ತಿವೆ. ದಿನನಿತ್ಯ ವಾಕಿಂಗ್, ಯೋಗ, ವ್ಯಾಯಾಮ ಮಾಡುವುದರಿಂದ ಒತ್ತಡದಿಂದ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ. ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಧೈರ್ಯವಾಗಿ ಎದುರಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಸಮಸ್ಯೆಗಳಿಗೆ ಹತಾಶರಾಗಿ ಮಾನಸಿಕಸ್ಥೈರ್ಯ ಕಳೆದುಕೊಂಡಲ್ಲಿ ಆರೋಗ್ಯದಲ್ಲೂ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ತಿಳಿಸಿದರು.
ಜನರಿಗೆ ಉತ್ತಮ ಆರೋಗ್ಯ ಮಾಹಿತಿ ನೀಡುವ ಸುದುದ್ದೇಶದಿಂದ ಮೆಟ್ರೋ ಆಸ್ಪತ್ರೆಯ ಡಾ. ಬಿ.ಸಿ. ಪೃಥ್ವಿ ಮತ್ತು ಸಿಬ್ಬಂದಿ ಜನಪರ ಕಾಳಜಿಯೊಂದಿಗೆ ನಗರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಸೇರಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಹೇಳಿದರು.
ಟಿಎಂಎಇ ಕಾಲೇಜು ಆಡಳಿತಾಧಿಕಾರಿ ಜಿ.ಹಿರೇಮಠ್ ಮಾತನಾಡಿ,
ಸಕ್ಕರೆ ಕಾಯಿಲೆ ಇದೆ ಎಂದಾಕ್ಷಣ ಹೆಚ್ಚಿನ ಜನರು ಆತಂಕಕ್ಕೊಳಗಾಗುತ್ತಾರೆ. ಪ್ರಸ್ತುತ ಮಧುಮೇಹ ಎಂಬುದು ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಹೀಗಾಗಿ ಆತಂಕಗೊಳ್ಳದೆ ಉತ್ತಮ ಆಹಾರ ಕ್ರಮ, ಜೀವನಶೈಲಿಯಿಂದ ಈ ರೋಗದ ದುಷ್ಪರಿಣಾಮದಿಂದ ಪಾರಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಬಿ.ಸಿ. ಪೃಥ್ವಿ, ಮೆಟ್ರೋ ಆಸ್ಪತ್ರೆಯ ಅಧ್ಯಕ್ಷ ಡಾ. ಪಿ.ಲಕ್ಷ್ಮೀನಾರಾಯಣ ಆಚಾರ್, ಮೆಟ್ರೋ ಅಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಟಿ.ಎಸ್. ತೇಜಸ್ವಿ, ಪ್ರಮುಖರಾದ ಪಂಕಜ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಆಸ್ಪತ್ರೆಗಳ ಸಿಬ್ಬಂದಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಡಯಾಬಿಟಿಸ್ -ನಿಮಗೆ ನೀವೇ ಡಾಕ್ಟರ್ : ಸುರೇಶ್ ಕುಮಾರ್ ದುರುಗಪ್ಪ ::
‘ ವೃತ್ತಿಯಲ್ಲಿ ನಾನೊಬ್ಬ ಸಾಫ್ಟ್ ವೇರ್ ಇಂಜಿನಿಯರ್. ಸಾಮಾನ್ಯವಾಗಿ ಇದು ತುಂಬಾ ಒತ್ತಡದಲ್ಲಿಯೇ ಕೆಲಸ ಮಾಡುವಂತಹ ಜಾಬ್. ಅಷ್ಟಾಗಿಯೂ ನಾನು ತುಂಬಾ ರಿಸ್ಕ್ ನಲ್ಲಿಯೇ ಕೆಲಸ ಮಾಡುತ್ತಿದ್ದರೂ, ಯಾವುದೇ ಬಿಪಿ, ಶುಗರ್ ಇಲ್ಲ ಎಂದೇ ಭಾವಿಸಿಕೊಂಡಿದ್ದೆ. ಆದರೆ ಒಂದು ದಿನ ಆಫೀಸ್ ನಿಂದ ಮನೆಗೆ ಬರುವಾಗ ಸಣ್ಣದೊಂದು ಆಕ್ಸಿಡೆಂಟ್ ಆಗಿ, ಕಾಲಿಗೆ ಗಾಯವಾಯಿತು. ಅದಕ್ಕೆ ಚಿಕಿತ್ಸೆ ಪಡೆಯುವುದಕ್ಕೆ ಅಂತ ಹೋದಾಗ ನನಗೆ ಸಕ್ಕರೆ ಕಾಯಿಲೆ ಇರುವುದು ಗೊತ್ತಾಯಿತು. ಒತ್ತಡ ಕಮ್ಮಿ ಮಾಡಿಕೊಳ್ಳಬೇಕು, ತಿಂಡಿ, ಊಟ, ನಿದ್ದೆಯನ್ನು ಸರಿಯಾದ ಸಮಯಕ್ಕೆ ಮಾಡಬೇಕು ಅಂತೆಲ್ಲ ವೈದ್ಯರು ಸಲಹೆ ನೀಡಿದರು. ಆದರೆ ನಾನು ನನ್ನ ಕೆಲಸ ಬಿಡುವಂತಿಲ್ಲ. ಅದು ಬೇಕು, ಅದನ್ನಿಟ್ಟುಕೊಂಡೇ ಸಕ್ಕರೆ ಕಾಯಿಲೆ ನಿಯಂತ್ರಣ ಮಾಡಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದೆ. ಆಗ ನನಗೆ ಹೊಳೆದಿದ್ದು ನನ್ನ ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆ ಎನ್ನುವ ಮೂಲಕ ತಮಗಿದ್ದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳನ್ನು ಹೇಳಿಕೊಂಡರು.
‘ನಾನೀಗ ಟೈಪ್ 1 ಡಯಾಬಿಟಿಸ್ ರೋಗಿ. ಅದರ ನಿಯಂತ್ರಣಕ್ಕೆ ಇನ್ಸುಲಿನ್ ಪಂಪ್ ಬಳುಸುತ್ತಿದ್ದೇನೆ. ಕಳೆದ 31 ವರ್ಷಗಳಿಂದ ಇದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಅದು ನನಗೆ ಹೊಂದಿಕೊಳ್ಳಬೇಕೆನ್ನುವ ಬದಲಿಗೆ ನಾನು ಅದಕ್ಕೆ ಹೊಂದಿಕೊಂಡಿದ್ದೇನೆ. ಪ್ರತಿ ದಿನ ಅಥವಾ ಪ್ರತಿ ಗಂಟೆಗೆ ನನಗೆ ಅಗತ್ಯವಿರುವಷ್ಟು ಯೂನಿಟ್ ಪ್ರೋಟಿನ್ ಬೇಕೆಂದು ಸೆಟ್ ಮಾಡಿಕೊಂಡು ಕೆಲಸ ಮಾಡುತ್ತಿರುತ್ತೇನೆ. ಅದು ತನ್ನ ಪಾಡಿಗೆ ತಾನು ನನ್ನ ದೇಹಕ್ಕೆ ಇನ್ಸುಲಿನ್ ಪ್ರೋಟಿನ್ ಕೊಡುತ್ತಾ ಹೋಗುತ್ತಿದೆ. ಅದೊಂದು ರೂಡಿಯಾಗಿ ಬಿಟ್ಟಿದೆ. ಅದರ ಜತೆಗೆ ನಿತ್ಯ ವಾಕ್, ಯೋಗ, ಸರಿಯಾದ ನಿದ್ದೆಯ ಜತೆಗೆ ಊಟದ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ದಿನಕ್ಕೆ ಐದು ಸಲ ಊಟ ಅಥವಾ ತಿಂಡಿ ಮಾಡುವ ಅಭ್ಯಾಸ ಇದೆ. ರಾತ್ರಿ ಏಳು ಗಂಟೆಗೆ ನನ್ನ ಊಟ. ಈ ರೀತಿಯ ಜೀವನ ಶೈಲಿಯಿಂದಲೇ ನನಗಿರುವ ಮಧು ಮೇಹ ನಿಯಂತ್ರಣದಲ್ಲಿದೆ. ಮನಸ್ಸು ಮಾಡಿದರೆ ಈ ರೀತಿಯಲ್ಲಿ ಎಲ್ಲರೂ ಮಧು ಮೇಹ ಕಾಯಿಲೆಯನ್ನು ಗೆಲ್ಲಬಹುದು ಎಂದು ಅವರು ತಮ್ಮದೇ ಬದುಕಿನ ಉದಾಹರಣೆ ಸಮೇತ ತಿಳಿಸಿದ್ದು ವಿಶೇಷವಾಗಿತ್ತು.
……………………………………………………………
ಸಮಾವೇಶಕ್ಕೆ ಬಂದವರಿಗೆ ಇದ್ದ ಡೌಟ್ಸ್ ಕುರಿತು ಸಂವಾದದಲ್ಲಿ ನುರಿತ ವೈದ್ಯರು ಪರಿಹಾರ ನೀಡುವ ಪ್ರಯತ್ನ ಮಾಡಿದರು. ಬೆಳಗ್ಗೆಯಿಂದಲೇ ಶುರುವಾದ ಕಾರ್ಯಕ್ರಮ ಮಧ್ಯಾಹ್ನದವರೆಗೂ ನಡೆದರೂ ಜನರು ಮಾತ್ರ ಎಲ್ಲಿಯೂ ಕದಲದೆ, ರಂಗಮಂದಿರದಲ್ಲಿ ಕುಳಿತು ಉಪನ್ಯಾಸ, ಸಂವಾದ, ಚರ್ಚೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಹಾಗೆಯೇ ಸಕ್ಕಯೆ ಕಾಯಿಲೆಗೆ ಸಂಬಂಧಿಸಿದಂತೆ ವಿನೂತನವಾಗಿ ಬಂದ ವೈದ್ಯಕೀಯ ಉಪಕರಣಗಳ ಪ್ರಾತ್ಯಕ್ಷಿಕೆ, ವಸ್ತು ಪ್ರದರ್ಶನವೂ ಅಚ್ಚಕಟ್ಟಾಗಿ ಇತ್ತು. ಅಷ್ಟು ಮಾತ್ರವಲ್ಲ ಇಡೀ ಕಾರ್ಯಕ್ರಮ ತುಂಬಾ ಅಚ್ಚಕಟ್ಟಾಗಿ ನಡೆಯುವುದಕ್ಕೆ ಮೆಟ್ರೋ ಸಂಸ್ಥೆಯ ಸಿಬ್ಬಂದಿ ಸೇರಿ ವಿವಿಧ ಕಾಲೇಜುಗಳ ನರ್ಸಿಂಗ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕೆಲಸ ಮಾಡಿದರು.
ಸಮಾವೇಶ ಅಂದಾಗ ರಾಜಕೀಯ, ಅಥವಾ ಸಾಂಸ್ಕೃತಿಕ ಸಮಾವೇಶಗಳು ನೆನಪಾಗುವುದು, ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಜನರು ಮಾತನಾಡುವುದು ಮಾಮೂಲು. ಆದರೆ ಶಿವಮೊಗ್ಗದ ಮಟ್ಟಿಗೆ ಇದೇ ಮೊದಲು ಸಮಾವೇಶದ ರೂಪದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ನಡೆದ ಮಧು ಮೇಹ ಕಾಯಿಲೆಯ ಜನ ಜಾಗೃತಿ ಸಮಾವೇಶ ಹೊಸ ಬಗೆಗೆಯ ಜಾಗೃತಿ ಅಥವಾ ಕಾರ್ಯಕ್ರಮಕ್ಕೆ ಮುನ್ನುಡಿ ಬರೆಯಿತೆನ್ನುವುದಕ್ಕೆ ಜನರ ಮೆಚ್ಚುಗೆಯೇ ಸಾಕ್ಷಿಯಾಯಿತು. ಅದೇ ಖುಷಿಯಲ್ಲಿ ವಿನ್ ಲೈಫ್ ಸಂಸ್ಥೆ ಮುಂಬರುವ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದ ಸಮಾವೇಶಕ್ಕೆ ತಯಾರಿ ನಡೆಸಿದೆ.
ರಘುರಾಜ್ ಹೆಚ್. ಕೆ…9449553305….