ಬೆಂಗಳೂರು; 7ನೇ ವೇತನ ಆಯೋಗ ಜಾರಿಗಾಗಿ ಬಹಳ ದಿನಗಳಿಂದ ಒತ್ತಾಯ ಜಾತಕಪಕ್ಷಿಗಳಂತೆ ಕಾಯುತ್ತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೊನೆಗೂ ಭರ್ಜರಿ ಗುಡ್ ನ್ಯೂಸ್ ನೀಡಿದೆ.ಆಗಸ್ಟ್ 1ರಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಗೊಳಿಸಲು ಸಿಎಂ ಸಿದ್ಧರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು. ಈ ಸಭೆಯಲ್ಲಿ ರಾಜ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.ಇದೇ ವೇಳೆ ರಾಜ್ಯ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಾದಂತ 7ನೇ ವೇತನ ಆಯೋಗದಂತೆ ವೇತನ ಜಾರಿಗೊಳಿಸುವ ಬೇಡಿಕೆಯ ಕುರಿತು ಚರ್ಚೆ ನಡೆಸಲಾಗಿದ್ದು, ಅಂತಿಮವಾಗಿ ಆಗಸ್ಟ್1ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗವನ್ನು ಜಾರಿಗೊಳಿಸುವ ನಿರ್ಣಯಕ್ಕೆ ಸಂಪುಟದಲ್ಲಿ ಅನುಮೋದನೆಯನ್ನು ನೀಡಲಾಗಿದೆ.
ಈ ಮೂಲಕ ಹಲವು ದಿನಗಳಿಂದ ಕಾತರದಿಂದ ಕಾಯುತ್ತಿದ್ದ ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ.ವೇತನ ಹೆಚ್ಚಳದ ಕುರಿತು ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ನೇತೃತ್ವದ ಏಳನೇ ವೇತನ ಆಯೋಗ ಮಾರ್ಚ್ 16ರಂದು ಅಂತಿಮ ವರದಿ ಸಲ್ಲಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂತಿಮ ವರದಿ ಸಲ್ಲಿಸಿದ್ದ ಆಯೋಗ, ಕರ್ನಾಟಕ ಸರ್ಕಾರಿ ನೌಕರರಿಗೆ 27.5% ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ನೌಕರರ ಸಂಬಳವನ್ನು ಶೇ.17ರಷ್ಟು ಹೆಚ್ಚಳ ಮಾಡಿದ್ದರು. ಈಗ ಏಳನೇ ವೇತನ ಆಯೋಗದ ಶಿಫಾರಸಿನಂತೆ ಇನ್ನೂ ಶೇ.10.5ರಷ್ಟು ಸೇರಿ ಒಟ್ಟು ಶೇ.27.5ರಷ್ಟು ಆಗುವಂತೆ ವೇತನವನ್ನು ಹೆಚ್ಚಿಸಲಾಗುತ್ತದೆ.
ಏಳನೇ ವೇತನ ಆಯೋಗದ ಜಾರಿ ಬಳಿಕ ರಾಜ್ಯ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗುತ್ತೆ ಇಲ್ಲಿದೆ ಮಾಹಿತಿ.
ಎ ವಲಯದಲ್ಲಿ ಕರ್ತವ್ಯ ನಿರ್ವಹಿಸುವ ಸಿ ಮತ್ತು ಡಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು ಮೂಲ ವೇತನ 17,000 ರೂ. ಇದ್ದರೆ, ತುಟ್ಟಿಭತ್ಯೆ ಶೇ. 31 (5,270 ರೂ.) ಹಾಗೂ ಶೇ.27.50 (4,675 ರೂ. ) ಫಿಟ್ಮೆಂಟ್ ಸೇರಿ ಒಟ್ಟು 26,945 ಸಿಗುತ್ತಿತ್ತು. ಇನ್ನು 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27,000 ಇದ್ದರೆ, ಅಂದಾಜು ತುಟ್ಟಿ ಭತ್ಯೆ ಶೇ.8.5 (2295 ರೂ), ಮನೆ ಬಾಡಿಗೆ ಭತ್ಯೆ ಶೇ.20 (5,400 ರೂ.), ವೈದ್ಯಕೀಯ 500, ನಗರ ಪರಿಹಾರ ಭತ್ಯೆ (ಸಿಸಿಎ) 750 ರೂ. ಸೇರಿ ಒಟ್ಟು 35,945 (01-01-2024ಕ್ಕೆ) ರೂ. ಸಿಗಲಿದೆ.
6ನೇ ವೇತನ ಆಯೋಗದಲ್ಲಾದರೆ ಒಟ್ಟು 29,005 ರೂ. ಸಿಗುತ್ತಿತ್ತು. ಪರಿಷ್ಕೃತ ವೇತನದಲ್ಲಿ 6940 ರೂ. ಹೆಚ್ಚಳವಾಗಲಿದೆ.ಅದೇ ರೀತಿ ಎ ವಲಯದಲ್ಲಿ ಕಾರ್ಯ ನಿರ್ವಹಿಸುವ ಎ ಮತ್ತು ಬಿ ದರ್ಜೆ ನೌಕರರಿಗೆ 2022ರ ಜುಲೈ 1ರಂದು 17,000 ರೂ. ವೇತನ ಇದ್ದರೆ, ಶೇ. 31 ತುಟ್ಟಿ ಭತ್ಯೆ (5270 ರೂ.), ಫಿಟ್ಮೆಂಟ್ ಶೇ.27.50 (4675 ರೂ.) ಸೇರಿ ಒಟ್ಟು 26945 ರೂ ವೇತನ ಸಿಗುತ್ತಿತ್ತು. ಆದರೆ, 2024ರ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮೂಲ ವೇತನ 27000 ಇದ್ದರೆ, ತುಟ್ಟಿ ಭತ್ಯೆ ಶೇ.8.5 (2298 ರೂ.), ಮನೆ ಬಾಡಿಗೆ ಭತ್ಯೆ ಶೇ.20 (5400 ರೂ.), ನಗರ ಪರಿಹಾರ ಭತ್ಯೆ(ಸಿಸಿಎ) 900 ಸೇರಿ ಒಟ್ಟು 35,595 ವೇತನ ಸಿಗಲಿದೆ. ಇದು 6ನೇ ವೇತನ ಆಯೋಗದ ಅವಧಿಯಲ್ಲಿ 27,545 ರೂ. ಆಗಿದೆ. ಪರಿಷ್ಕೃತ ವೇತನದಲ್ಲಿ 8,050 ರೂ. ಹೆಚ್ಚಳವಾಗಲಿದೆ