
ಶಿವಮೊಗ್ಗ: ಇಂದು ಸಂಜೆ ಮುಂಬರುವ ಗೌರಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ, ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಶಾಂತಿ ಸಮಿತಿ ಸಭೆಯನ್ನು ಹಮ್ಮಿಕೊಂಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸದರಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದು, ಚನ್ನಬಸಪ್ಪ, ಶಾಸಕರು, ಶಿವಮೊಗ್ಗ ವಿಧಾನ ಸಭಾ ಕ್ಷೇತ್ರ ರವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಪಿ ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.
1) ಪ್ರತೀ ಹಬ್ಬಗಳು ಆಯಾ ಧರ್ಮಗಳಿಗೆ ಪವಿತ್ರವಾದ ಹಬ್ಬಗಳಾಗಿದ್ದು, ಅದರದೇ ಆದ ವಿಶೇಷತೆಗಳಿರುತ್ತವೆ, ಈ ಹಿಂದಿನಿಂದಲೂ ಆಯಾ ಧರ್ಮಗಳಲ್ಲಿನ ಆಚರಣಾ ಪದ್ಧತಿಯ ಪ್ರಕಾರ ವಿಜೃಂಭಣೆಯಿಂದ ಹಬ್ಬಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬೇರೆಯವರೊಂದಿಗೆ ಪೈಪೋಟಿಯ ರೀತಿ ಹಬ್ಬವನ್ನು ಆಚರಿಸದೇ, ಹಬ್ಬವನ್ನು ಸಹಬಾಳ್ವೆ ಮತ್ತು ವಿಜೃಂಭಣೆಯಿಂದ ಆಚರಿಸಬೇಕೆಂಬ ಮನೋಭಾವವನ್ನು ಬೆಳೆಸಿಕೊಂಡು ಎಲ್ಲಾ ಹಬ್ಬಗಳು ಸಮಾನವೆಂದು ಪರಿಗಣಿಸಿದರೆ ಯಾವುದೇ ಸಮಸ್ಯೆಗಳಲ್ಲಿದೇ ಹಬ್ಬಗಳನ್ನು ಆಚರಿಸಲು ಸಾಧ್ಯವಿರುತ್ತದೆ.
2) ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾಡಳಿತವು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ ಹಾಗೂ ಸಾರ್ವಜನಿಕ ಹಿತಾಸಕ್ತಿಂದ ಹಬ್ಬವನ್ನು ಶಾಂತಿ ರೀತಿಯಲ್ಲಿ, ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಆಚರಣೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಕಾಲಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡಲಿದ್ದು, ಕಾನೂನು ಚೌಕಟ್ಟಿನ ಒಳಗೆ ಮಾಡುವ ಎಲ್ಲಾ ರೀತಿಯ ಆಚರಣೆಗಳಿಗೆ ಯಾವುದೇ ನಿರ್ಬಂಧವಿಲ್ಲದೇ ಸಂಪೂರ್ಣ ಬೆಂಬಲ ನೀಡುತ್ತೇವೆ.
3) ಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಮುಖಂಡರು, ಚುನಾಯಿತ ಪ್ರತಿನಿಧಿಗಳ ಸಲಹೆ ಪಡೆದು ಮುಂದುವರೆಯಿರಿ. ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ ಆ ಪ್ರದೇಶದ ಜನರು, ನಮ್ಮ ಕುಟುಂಭಸ್ಥರು, ನಮ್ಮ ಸುತ್ತಮುತ್ತಲಿನ ಮುಗ್ದ ನಾಗರೀಕರು, ನಮ್ಮ ಸ್ನೇಹಿತರು, ವಯೋವೃದ್ದರು, ಸಣ್ಣ ಮಕ್ಕಳೇ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಕೂಡ ಯಾರೂ ಸಿಗದ ಪರಿಸ್ಥಿತಿಯು ನಿರ್ಮಾಣವಾಗುತ್ತದೆ.
ಸಾರ್ವಜನಿಕರಿಗೆ ಸಮಸ್ಯೆ ಉಂಟಾದರೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ :
4) ಯಾರೋ ಕೆಲವು ಜನರು ಮಾಡುವ ಕಿಡಿಗೇಡಿತನದಿಂದ ಉಳಿದ ಎಲ್ಲರೂ ಅದರ ಪರಿಣಾಮವನ್ನು ಎದುರಿಸುವಂತಾಗತ್ತದೆ ಆದ್ದರಿಂದ ಈಗಾಗಲೇ ಪೊಲೀಸ್ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ತೊಂದರೆಯನ್ನುಂಟು ಮಾಡಬಹುದಾದಂತಹ ಕಿಡಿಗೇಡಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ಜರುಗಿಸಿದ್ದು,ಅಂತಹವರ ವಿರುದ್ಧ ಇಲಾಖೆಯು ಸೂಕ್ತ ನಿಗಾ ಸಹಾ ಇರಿಸಿರುತ್ತದೆ. ಒಂದು ವೇಳೆ ಸಾರ್ವಜನಿಕರಿಗೆ ಸಮಸ್ಯೆ / ತೊಂದರೆ ನೀಡುತ್ತಾರೆಂಬ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿ, ಪೊಲೀಸ್ ಇಲಾಖೆಯು ಅವರುಗಳ ವಿರುದ್ಧ ಕಾನೂನಿನ ಅಡಿಯಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಿದೆ.
ಸಾಮಾಜಿಕ ಜಾಲತಾಣಗಳಾದ ವ್ಯಾಟ್ಸಾಪ್ ಫೇಸ್ಬುಕ್ ಇನ್ಸ್ಟಾಗ್ರಾಮ್ ಮೇಲೆ ಕಟ್ಟುನಿಟ್ಟಿನ ಕ್ರಮ :
5) ಸುಳ್ಳು ಸುದ್ದಿಗಳು / ತಿರುಚಿ ಬರೆದ ಸುದ್ದಿಗಳು ಸಾಮಾಜಿಕ ಜಾಲತಾಣದ ಮುಖಾಂತರ ಹೆಚ್ಚಿನ ಜನ ಸಮೂಹ ಹಾಗೂ ವಿಶೇಷವಾಗಿ ಯುವಜನತೆಯನ್ನು ಸುಲಭವಾಗಿ ತಲುಪುತ್ತವೆ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವಾಗುವ ಸುದ್ಧಿಗಳ ಮೇಲೆ ಪೊಲೀಸ್ ಇಲಾಖೆಯು ಸೂಕ್ತ ನಿಗಾವಹಿಸಿದ್ದು, ಯಾವುದೇ ಸುಳ್ಳು ಸುಧ್ದಿಗಳು/ ಪ್ರಚೋದನಾತ್ಮಕ / ಆಕ್ಷೇಪಾರ್ಹ ಸುದ್ಧಿಗಳನ್ನು ಅಪ್ ಲೋಡ್ ಮಾಡುವ, ಫಾರ್ವರ್ಡ್ ಮಾಡುವ, ಶೇರ್ & ಟ್ಯಾಗ್ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಾ ಈ ಬಗ್ಗೆ ಜಾಗೃತರಾಗಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಘಟನೆಗಳ ಕುರಿತು ಸುದ್ಧಿಗಳು ಬಂದಾಗ ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಸುದ್ಧಿಗಳ ಸತ್ಯಾಸತ್ಯತೆಗಳನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ ವಿರುತ್ತದೆ.
ಪ್ಲೆಕ್ಸ್ ಬ್ಯಾನರ್ ಗಳನ್ನು ಹಾಕುವಾಗ ಎಚ್ಚರ :
6) ಹಬ್ಬಗಳ ಹಿನ್ನೆಲೆಯಲ್ಲಿ ಅಳವಡಿಸಲಾಗುವ ಫ್ಲೆಕ್ಸ್ ಮತ್ತು ಬ್ಯಾನರ್ಸ್ ಗಳಲ್ಲಿ ಇತರರ ಭಾವನೆಗಳಿಗೆ ದಕ್ಕೆಯಾಗುವಂತಹ, ಇನ್ನೊಬ್ಬರನ್ನು ದೂಶಿಸುವಂತಹ ಫೋಟೋ / ಮಾಹಿಗಳನ್ನು ಹಾಕಬೇಡಿ,ಹಬ್ಬದ ಹಿನ್ನೆಲೆಯನ್ನು ತಿಳಿದು ಅದಕ್ಕೆ ಸಂಬಂಧಿಸಿದಂತಹ ಫ್ಲೆಕ್ಸ್ ಮತ್ತು ಬ್ಯಾನರ್ಸ್ ಗಳನ್ನು ಮಾತ್ರ ಅಳವಡಿಸಿ. ಪೊಲೀಸ್ ಇಲಾಖೆಯು ಇದರ ಬಗ್ಗೆ ಸೂಕ್ತ ನಿಗಾವಹಿಸಿದ್ದು, ಒಂದು ವೇಳೆ ಯಾರಾದರೂ ಆಕ್ಷೇಪಾರ್ಹ ಫ್ಲೆಕ್ಸ್ / ಬ್ಯಾನರ್ಸ್ ಗಳನ್ನು ಅಳವಡಿಸಿರುವುದು / ಪ್ರಿಂಟ್ ಮಾಡಿಕೊಟ್ಟಿರುವುದು ಕಂಡುಬಂದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ರೀತ್ಯಾ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.
ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ :
7) ಎಲ್ಲಾ ಸಾರ್ವಜನಿಕರು ಸೇರಿ ಸಹಬಾಳ್ವೆಯಿಂದ ಹಬ್ಬವನ್ನು ಆಚರಿಸುವಾಗ, ಯಾರೋ ಕೆಲವು ಕಿಡಿಗೇಡಿಗಳು ಹಬ್ಬದ ಆಚರಣೆಗಳಿಗೆ ತೊಂದರೆ ನೀಡುತ್ತಾರೆ ಎಂದಾದರೆ ಅಂತಹವರ ವಿರುದ್ಧ ಪೊಲೀಸ್ ಇಲಾಖೆಯು ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳುತ್ತದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಮುಂಜಾಗ್ರತೆ ಕ್ರಮ :
8) ಸಾರ್ವಜನಿಕ ಹಿತ ದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಶಿವಮೊಗ್ಗ ನಗರದಾದ್ಯಂತ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳ ಅಳವಡಿಕೆ, ಬೀದಿ ದೀಪಗಳ ದುರಸ್ಥಿ ಮತ್ತು ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗಿರುತ್ತದೆ. ಇದರ ಜೊತೆಗೆ ದ್ರೋಣ್ ಕ್ಯಾಮೆರಾಗಳ ಕಣ್ಗಾವಲು ಹಾಗೂ ಇಲಾಖಾ ಮತ್ತು ಖಾಸಗೀ ವಿಡಿಯೋ ಗ್ರಾಫರ್ಸ್ ನೇಮಿಸಿಕೊಂಡು ಹಬ್ಬದ ಆಚರಣೆ / ಮೆರವಣಿಗೆಯ ಸಂಪೂರ್ಣ ಚಿತ್ರೀಕರಣ ಮಾಡಲಾಗುತ್ತಿದೆ.
ಗಣೇಶ ವಿಸರ್ಜನೆಗೆ ಸೂಕ್ತ ವ್ಯವಸ್ಥೆ :
9) ಗಣೇಶ ಮೂರ್ತಿಗಳ ವಿಸರ್ಜನಾ ಸ್ಥಳಗಳಲ್ಲಿ ಸುರಕ್ಷತಾ ದೃಷ್ಠಿಯಿಂದ ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ ಸ್ಥಳದಲ್ಲಿ ಮೂಲಭೂತ ಸೌಕರ್ಯ, ಸ್ವಚ್ಛತೆ, ಬ್ಯಾರಿಕೇಡಿಂಗ್ ಮತ್ತು ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ.
ಗಾಂಜಾ ಗಿರಾಕಿಗಳ ವಿರುದ್ಧ ವಿಶೇಷ ಕ್ರಮ :
10) ಹೊರ ವಲಯ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಏರಿಯಾ ಡಾಮಿನೇಷನ್ ಮತ್ತು ವಿಶೇಷ ಕಾಲ್ನಡಿಗೆ ಗಸ್ತು ಮಾಡಿ, ಸಾರ್ವಜನಿಕವಾಗಿ ಉಪಟಳ ನೀಡುವ ಕಿಡಿಗೇಡಿಗಳ ವಿರುದ್ಧ 4500 ಕ್ಕೂ ಹೆಚ್ಚು ಲಘು ಪ್ರಕರಣಗಳನ್ನು ಮತ್ತು ಗಾಂಜಾ ಮಾರಾಟ* ಮಾಡುವವರ ವಿರುದ್ಧ ಹಾಗೂ ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ವ್ಯಕ್ತಿಗಳನ್ನು ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಿ, ಗಾಂಜಾ ಸೇವನೆ ಮಾಡಿರುವುದು ದೃಡ ಪಟ್ಟವರ ವಿರುದ್ಧ NDPS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗಿರುತ್ತದೆ.
ಸಾರ್ವಜನಿಕರಿಗೆ ಹಾಗೂ ಪೊಲೀಸ್ ಇಲಾಖೆಗೆ ಚುನಾಯಿತ ಪ್ರತಿನಿಧಿಗಳು, ಈದ್ ಮಿಲಾದ್ ಮತ್ತು ಗಣೇಶ ಪ್ರತಿಷ್ಠಾಪನಾ ಸಮಿತಿ ಸದಸ್ಯರು ಗಳ ಸಹಕಾರ ಮುಖ್ಯವಾಗಿದ್ದು, ಎಲ್ಲರೂ ಸೇರಿ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರಿಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಬಾಬು ಆಂಜನಪ್ಪ,ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪ ವಿಭಾಗ, ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಬಿ ಉಪ ವಿಭಾಗ, ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಮಾಧ್ಯಮ ಮಿತ್ರರು, ಮಹಾ ನಗರ ಪಾಲಿಕೆಯ ಮಾಜಿ ಸದಸ್ಯರು ಮತ್ತು ಗಣೇಶ ಪ್ರತಿಷ್ಪಾನಾ ಮಂಡಳಿ ಮತ್ತು ಈದ್ ಮಿಲಾದ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.