
ಶಿವಮೊಗ್ಗ: ಈಗಿದ್ದ ಕುರ್ಚಿ,ಅಧಿಕಾರ,ಸಂಸ್ಥೆಗಳನ್ನು ಬಿಟ್ಟು ಮುಂದೊಂದು ದಿನ ಎಲ್ಲರೂ ಹೊರ ನಡೆಯಲೇ ಬೇಕು ಆಗ ನಾವಿದ್ದ ಕುರ್ಚಿಯಾಲಿ, ಸಂಸ್ಥೆಯಾಗಲಿ ಸಣ್ಣ ಬೇಸರವೂ ಆಗುವುದಿಲ್ಲ. ಆನಂತರ ಅದಕ್ಕೆ ನಮ್ಮ ನೆನಪೂ ಇರುವುದಿಲ್ಲ ಏಕೆಂದರೆ ಅವು ನಿರ್ಜೀವ. ಆದರೆ ಸಣ್ಣದಾಗಿಯಾದರೂ ಇತರರು ಒಂದಿಷ್ಟೂ ಬೇಸರಿಸದಂತೆ, ನೆನಪಿಸಿಕೊಳ್ಳದಂತೆ ಕಳೆದು ಹೋಗುವುದು ಬದುಕಲ್ಲ. ಕೇವಲ ನಮ್ಮ ಕುರ್ಚಿ,ಹುದ್ದೆ,ಕಚೇರಿ,ಸಂಸ್ಥೆಗಷ್ಟೇ ಸೀಮಿತವಾಗದಂತೆ ಎಲ್ಲರೊಂದಿಗಿನ ನಮ್ಮ ಸೌಹಾರ್ಧಯುತ ನಡೆ ನುಡಿಗಳು, ಸಮಾಜಕ್ಕೆ ಮಾಡುವ ಸಹಾಯ ಮಾತ್ರ ನಮ್ಮ ಗುರುತನ್ನು ಒಂದಿಷ್ಟು ಕಾಲವಾದರೂ ಉಳಿಸುತ್ತದೆಯೇ ಹೊರತು ಕುರ್ಚಿ,ಹುದ್ದೆ,ಅಧಿಕಾರ,ಅಂತಸ್ತುಗಳಿಗೆ ಆ ಶಕ್ತಿ ಇಲ್ಲ. ಸಮಾಜದ ಒಳಿತಿಗಾಗಿ ನಾವು ನೀಡುವುದೆಲ್ಲವೂ ಯಾವುದಾದರೂ ರೂಪದಲ್ಲಿ ನಮಗೆ ತಿರುಗಿ ಬಂದೇ ಬರುತ್ತದೆ. ಇದಕ್ಕೆ ನಮ್ಮ ಸಹೊದ್ಯೋಗಿ ಯಶೋಧವರು ಗಳಿಸಿರುವ ಜನಪ್ರೀತಿಯೂ ಒಂದು ಉದಾಹರಣೆ.ಇಂತಹ ಹಿರಿಯರ ಸೌಜನ್ಯಯುತ ನಡವಳಿಕೆ,ಉದಾರತೆ, ಕರ್ತವ್ಯನಿಷ್ಟೆಗಳು ನಿಜಕ್ಕೂ ಮಾದರಿ.ಮುಖ್ಯವಾಗಿ ನಮ್ಮ ಯುವ ನೌಕರರು ಇಂತವರಿಂದ ಪ್ರೇರಣೆ ಪಡೆಯಬೇಕು, ಅವರಿಂದ ಸಮಾಜಕ್ಕೆ ಇನ್ನಷ್ಟು ಒಳ್ಳೆಯ, ನಗುಮೊಗದ ಸೇವೆ ದಕ್ಕುವಂತಾಗಬೇಕು ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘ ಹಾಗೂ ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ನುಡಿದರು.
ಅವರು ವಯೋ ನಿವೃತ್ತಿ ಹೊಂದುತ್ತಿರುವ, ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಉಪಾಧ್ಯಕ್ಷರೂ, ಪ್ರಾ.ಆ.ಕೇಂದ್ರ ಮಾಳೂರಿನ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಯಶೋಧರವರಿಗೆ ಮಾಳೂರಿನಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಬಿ ಹೆಚ್ ಇ ಓ ಸಂಘದ ಜಿಲ್ಲಾಧ್ಯಕ್ಷೆ ಪ್ರತಿಮ ಡಾಕಪ್ಪ ಗೌಡ ಮಾತನಾಡಿ,
ಇತರರನ್ನು ಗೌರವದಿಂದ ಕಂಡಾಗಲಷ್ಟೇ ನಮಗೂ ಗೌರವ ದೊರಕಲು ಸಾಧ್ಯ.ನಗು ಕೇವಲ ನಮ್ಮ ಆರೋಗ್ಯವನ್ನಷ್ಟೇ ಹೆಚ್ಚಿಸುವುದಿಲ್ಲ.ಇತರರೊಂದಿಗಿನ ಸೌಹಾರ್ಧತೆಯನ್ನೂ ಹೆಚ್ಚಿಸುತ್ತದೆ.ನಿಷ್ಕಲ್ಮಶ ಸ್ನೇಹಕ್ಕೆ, ಪ್ರೀತಿಗೆ,ಮುಗ್ದತೆಗೆ ಉದಾಹರಣೆಯಂತಿರುವ ಯಶೋಧರವರು ನೀಡಿದ ಪ್ರಾಮಾಣಿಕ ಸೇವೆ ಸಹೋದ್ಯೋಗಿಗಳಿಂದ,ಸಮಾಜದಿಂದ ಅವರಿಗೆ ಅಪಾರ ಪ್ರೀತಿ ದೊರಕುವಂತೆ ಮಾಡಿವೆ. ದೇವರು ಅವರಿಗೆ ಎಲ್ಲವನ್ನೂ ನೀಡಿದ್ದಾನೆ.ಚೆನ್ನಾಗಿ ಇರಿಸಿದ್ದಾನೆ. ಇಷ್ಟೊಂದು ಜನ ಇಷ್ಟೆಲ್ಲಾ ಆತ್ಮೀಯವಾಗಿ ಅವರಿಗೆ ಶುಭಹಾರೈಸುವುದು ಕಂಡಾಗ ನಿಜಕ್ಕೂ ಖುಷಿಯಾಗುತ್ತದೆ. ಇದು ವ್ಯಕ್ತಿಯ ನಿಜವಾದ ಗಳಿಕೆ. ಇಂತಹ ಗಳಿಕೆಯತ್ತ ಎಲ್ಲರ ಪ್ರಯತ್ನವಿರಬೇಕು ಎಂದು ಶುಭ ಹಾರೈಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಟರಾಜ್, ವೈದ್ಯಾಧಿಕಾರಿಗಳಾದ ಡಾ.ಸುರೇಶ್, ಡಾ.ಸಿದ್ದರಾಮೇಶ್ವರ್, ಡಾ.ವಿನೋಧ್ ಕುಮಾರ್, ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಡಿ ಸಿ ಶಿವಶಂಕರ್, ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿ ಎ ಎಂ ಜಗದೀಶ್, ಕಾರ್ಯಾಧ್ಯಕ್ಷೆ ಗೀತಾ ಎಲ್, ಪದಾಧಿಕಾರಿಗಳಾದ ಬಿ ಸಿ ಅನಿತ, ಈಶ್ವರ್, ಕೃಷ್ಣಮೂರ್ತಿ, ವಿಶ್ವನಾಥ್, ವಿನಾಯಕ್, ಅಶೋಕ್, ಲಲಿತ, ಜಯಲಕ್ಷ್ಮಿ, ಉಷಾ,ವತ್ಸಲಾಕೃಷ್ಣ, ಸುನೀತ,ಪಾರ್ವತಿ, ಭವ್ಯ,ಸಂತೋಷ್ ಮತ್ತಿತರರು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯಶೋಧರವರು ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ನೆನಪಿಸಿಕೊಂಡರು. ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಮೂಲಕ ಆರೋಗ್ಯ ಸೇವೆಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸುವ ಕೆಲಸ ನಿಜಕ್ಕೂ ಅತ್ಯಂತ ಪವಿತ್ರದ್ದು,ಅದನ್ನು ಶ್ರದ್ದೆಯಿಂದ ಮಾಡಿದಾಗ ದೊರಕುವ ತೃಪ್ತಿ, ಜನರಿಂದ ದೊರಕುವ ಪ್ರೀತಿ ಅಗಾದವಾದದ್ದು. ಬೇರೆ ಯಾವುದರಿಂದಲೂ ಇಷ್ಟೊಂದು ಅಗಾಧ ಪ್ರೀತಿಯ ಗಳಿಕೆ ಸಾಧ್ಯವಿಲ್ಲ.ಇಂತಹ ಉತ್ತಮ ಹುದ್ದೆ ದೊರಕಿದ್ದರ ಬಗ್ಗೆ ಹೆಮ್ಮೆ ಇದೆ.ಅದು ಬದುಕಿಗೆ ತೃಪ್ತಿ ನೀಡಿದೆ. ಇದಕ್ಕೆ ವೃತ್ತಿ ಬದುಕಿನ ಆರಂಭದಿಂದಲೂ ದೊರಕಿದ ಉತ್ತಮ ವೈದ್ಯಾಧಿಕಾರಿಗಳು, ಸಹೋದ್ಯೋಗಿಗಳು,ಸ್ನೇಹಿತರು ಮತ್ತು ಕುಟುಂಬದವರ ಕೊಡುಗೆ ಬಹಳ ದೊಡ್ಡದು .ಎಲ್ಲರ ಸಹಕಾರವನ್ನೂ ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತೇನೆ, ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಪ್ರಾ.ಆ.ಕೇಂದ್ರ ಮಾಳೂರಿನ ವೈದ್ಯಾಧಿಕಾರಿ ಡಾ.ಶಮಾ ಅಂಜುಮ್ ಅಧ್ಯಕ್ಷತೆ ವಹಿಸಿದ್ದರು.ವಿವಿಧ ಸಂಸ್ಥೆಗಳ ಸಿಬ್ಬಂದಿಗಳು ,ಆಶಾ ಕಾರ್ಯಕರ್ತೆಯರು, ಸ್ನೇಹಿತರು, ಬಂಧುಗಳು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಯಶೋಧ, ಕೊಂಡಾ ರೆಡ್ಡಿ ದಂಪತಿಗಳನ್ನು ಆರೋಗ್ಯ ಇಲಾಖಾ ನೌಕರರ ಸಂಘ ಮತ್ತು ವಿವಿಧ ಪ್ರಾ.ಆ.ಕೇಂದ್ರಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಲಾಯಿತು.
ರಘುರಾಜ್ ಹೆಚ್. ಕೆ…9449553305…..