
ಥಲಸ್ಸೆಮಿಯಾ – ಎಳವೆಯಿಂದಲೇ ಮಕ್ಕಳನ್ನ ಭಾಧಿಸುವ ಒಂದು ಅನುವಂಶಿಕ ಕಾಯಿಲೆ. ದೇಹದ ವರ್ಣತಂತುಗಳಲ್ಲಿನ (ಕ್ರೋಮೋಸೋಮ್) ನ್ಯೂನತೆಯೇ ಈ ಕಾಯಿಲೆಗೆ ಕಾರಣ. ಸಾಮಾನ್ಯವಾಗಿ ಹುಟ್ಟಿದ ೧ ವರ್ಷದೊಳಗೆ ಈ ಕಾಯಿಲೆಯ ಗುಣಲಕ್ಷಣಗಳು (ಉದಾಹರಣೆಗೆ ವಿಪರೀತ ಅಳುವುದು, ಗಾಢ ಬಣ್ಣದ ಮೂತ್ರ, ಸುಸ್ತಾಗುವಿಕೆ, ದೇಹದ ಬಣ್ಣಗೆಟ್ಟುವಿಕೆ, ಕುಂಠಿತವಾದ ಬೆಳವಣಿಗೆ ಇತ್ಯಾದಿ) ಗೋಚರಿಸಲಾರಂಭಿಸುತ್ತವೆ. ರಕ್ತದ ಮಾದರಿಯನ್ನು ‘ಹೆಚ್. ಬಿ. ಎಲೆಕ್ಟ್ರೊಫೋರೆಸಿಸ್’ ಎಂಬ ಪರೀಕ್ಷೆಗೆ ಒಳಪಡಿಸುವ ಮೂಲಕ ಈ ಕಾಯಿಲೆಯ ಇರುವಿಕೆಯನ್ನ ವೈದ್ಯರು ದೃಢಪಡಿಸುತ್ತಾರೆ. ಒಟ್ಟಾರೆ ರಕ್ತದ ಉತ್ಪತ್ತಿ ಮತ್ತು ಪರಿಚಲನೆ ಸಮರ್ಪಕವಾಗಿದ್ದರೂ ಕೂಡ, ರಕ್ತಕಣಗಳ ಮತ್ತು ಹೆಮೊಗ್ಲೋಬಿನ್ಗಳ ಸಂಯೋಜನೆ, ಗುಣಮಟ್ಟಗಳು ಕಳಪೆಯಾಗಿರುವ ಕಾರಣ, ದೇಹದ ಅಂಗಾಂಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳು ಸರಿಯಾಗಿ ಪೂರೈಕೆಯಾಗುವುದಿಲ್ಲ. ಇದರಿಂದ ಯಕೃತ್ (ಲಿವರ್), ಹೃದಯ, ಗುಲ್ಮ(ಸ್ಪ್ಲೀನ್ – ಮಕ್ಕಳಲ್ಲಿ ರಕ್ತಕಣಗಳ ನಾಶ ಮತ್ತು ಪುನರುತ್ಪತ್ತಿ ಮಾಡುವ ಹೊಟ್ಟೆಯಲ್ಲಿರುವ ಅಂಗ ), ಮೂಳೆ – ಅಸ್ಥಿಮಜ್ಜೆಗಳ ಗಂಭೀರ ಸಮಸ್ಯೆಗಳು ಈ ಕಾಯಿಲೆಯಲ್ಲಿ ಸಾಮಾನ್ಯ. ಮಕ್ಕಳನ್ನ ಮತ್ತು ಅವರ ಪೋಷಕರನ್ನ ದೀರ್ಘಕಾಲೀನವಾಗಿ ಕಾಡುವ ಮಾರಣಾಂತಿಕ ಕಾಯಿಲೆ ಈ ಥಲಸ್ಸೆಮಿಯಾ. ನಮ್ಮ ದೇಶದಲ್ಲಿ ಈ ಕಾಯಿಲೆಯಿಂದ ಬಳಲುತ್ತಿರುವ ಸುಮಾರು ೨ ಲಕ್ಷ ಮಕ್ಕಳಿದ್ದಾರೆ. ಪ್ರತಿವರ್ಷ ಥಲಸ್ಸೆಮಿಯಾ ಕಾಯಿಲೆ ಇರುವ ೧೫ ಸಾವಿರ ಶಿಶುಗಳು ಭಾರತದಲ್ಲಿ ಜನಿಸುತ್ತಿವೆ. ಪ್ರಸ್ತುತ ಈ ಕಾಯಿಲೆಗೆ, ರೋಗಲಕ್ಷಣಗಳ ಚಿಕಿತ್ಸೆಯನ್ನು ಹೊರತುಪಡಿಸಿ ಬೇರೆ ಯಾವುದೇ ಚಿಕಿತ್ಸೆ ಇಲ್ಲ. ದೋಷಪೂರಿತ ವರ್ಣತಂತುಗಳನ್ನ ಸರಿಪಡಿಸಲು ಜೀನ್ ಥೆರಪಿ ಮುಂತಾದ ಆಧುನಿಕ ವಿಧಾನಗಳ ಕುರಿತು ಈಗಷ್ಟೇ ಪ್ರಯೋಗಗಳು ನಡೆಯುತ್ತಿವೆ. ಬದುಕುಳಿಯಲು ಇರುವ ಒಂದೇ ದಾರಿಯೆಂದರೆ ಜೀವನಪರ್ಯಂತ ರಕ್ತ ದಾನಿಗಳಿಂದ ಪಡೆಯುವ ರಕ್ತಕಣಗಳ ನಿತ್ಯ ವರ್ಗಾವಣೆ.
ಈ ಮಕ್ಕಳ ವಯಸ್ಸು ಮತ್ತು ದೇಹದ ತೂಕಕ್ಕೆ ಅನುಗುಣವಾಗಿ ಸರಾಸರಿ ಪ್ರತಿ ತಿಂಗಳು ೧ – ೨ ಯೂನಿಟ್ ರಕ್ತದ ಅವಶ್ಯಕತೆಯಿದೆ. ಜೊತೆಗೆ ಪ್ರತಿ ೩ ತಿಂಗಳಿಗೊಮ್ಮೆ ಇಡೀ ದೇಹದ ತಪಾಸಣೆ, ಮೂತ್ರ ಪರೀಕ್ಷೆ, ೬ ತಿಂಗಳಿಗೊಮ್ಮೆ ಹೃದಯದ ಪರೀಕ್ಷೆ, ವರ್ಷಕ್ಕೊಮ್ಮೆ ಸ್ಕ್ಯಾನ್ ಅನ್ನೂ ಕೂಡ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ಇದರ ಚಿಕಿತ್ಸೆ ಬಲು ದುಬಾರಿ. ದುರದೃಷ್ಟವಶಾತ್ ಇದು ಹೆಚ್ಚಾಗಿ ಕಾಣಿಸಿಕೊಳ್ಳುವುದು ಬಡವರಲ್ಲಿ. ಥಲಸ್ಸೆಮಿಯಾ ಪೀಡಿತರ ಆಶಾಕಿರಣ ಸ್ವಸ್ಥ – ಸುಸ್ಥಿರ ಸಮಾಜ ನಿರ್ಮಾಣದ ಧ್ಯೇಯೋದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೋತ್ಥಾನ ಪರಿಷತ್ತು ಆರಂಭಿಸಿರುವ ‘ಸಂರಕ್ಷಾ’ ಯೋಜನೆ. ಈ ಯೋಜನೆಯ ಭಾಗವಾಗಿ ಮೇಲೆ ಉಲ್ಲೇಖಿಸಲಾದ ಎಲ್ಲಾ ಚಿಕಿತ್ಸೆಗಳನ್ನೂ ಉಚಿತವಾಗಿ ರಾಜ್ಯದ ೪೨೬ ಮಕ್ಕಳಿಗೆ ನಿತ್ಯ ನೀಡುತ್ತಿದೆ. ಆಗಸ್ಟ್ ೨೦೧೯ ರಲ್ಲಿ ಪ್ರಾರಂಭವಾದ ಈ ಯೋಜನೆಯಿಂದ ದಕ್ಷಿಣ ಭಾರತದ ಸಾವಿರಕ್ಕೂ ಅಧಿಕ ಮಕ್ಕಳು ಚಿಕಿತ್ಸೆಯನ್ನು ಪಡೆದಿದ್ದಾರೆ.
ಮಕ್ಕಳಿಗೆ ರಕ್ತ ಪೂರೈಸುವುದು ಸುಲಭದ ಕೆಲಸವಲ್ಲ. ದಿನಪೂರ್ತಿ ನಡೆಯುವ ಚಿಕಿತ್ಸಾ ಪ್ರಕ್ರಿಯೆ ಇದು. ಇದಕ್ಕೆ ಪೂರಕವಾಗಿ ಬೆಂಗಳೂರಿನ ಗವಿಪುರಂ ನಲ್ಲಿರುವ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ (ರಕ್ತ ಕೇಂದ್ರ ) ನಲ್ಲಿ ಡೇ ಕೇರ್ ಸೆಂಟರ್ ಅನ್ನೂ ತೆರೆಯಲಾಗಿದೆ. ಮಕ್ಕಳು ಮತ್ತು ಪೋಷಕರಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ದೂರದೂರಿನಿಂದ ಚಿಕಿತ್ಸೆಗಾಗಿ ಬರುವವರಿಗಾಗಿ ಉಳಿಯುವ ವ್ಯವಸ್ಥೆಯನ್ನೂ ಮಾಡಲಾಗಿದೆ .
‘ಸಂರಕ್ಷಾ’ ಯೋಜನೆಯ ಮೂಲಕ ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ಸಹಾಯವಾಗಲೆಂದು ತೀರ್ಥಹಳ್ಳಿಯ ಸೇವಾ ಭಾರತಿ, ಸಮರ್ಥ ಭಾರತ ಸಂಸ್ಥೆಯೊಂದಿಗೆ ಜೊತೆಗೂಡಿ, ಪಟ್ಟಣದ ‘ಪ್ರೇರಣಾ’ ಸಂಘ ಕಾರ್ಯಾಲಯದಲ್ಲಿ ದಿನಾಂಕ ೨೬ ಆಗಸ್ಟ್, ೨೦೨೩, ಶನಿವಾರ ದಿನಪೂರ್ತಿ ರಕ್ತದಾನ ಶಿಬಿರವನ್ನ ಆಯೋಜಿಸಿದೆ. ಸಾಮಾಜಿಕ ಸಂಸ್ಥೆಗಳ ಸ್ವಯಂಸೇವಕರುಗಳು, ಯುವಕರುಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತ ದಾನವನ್ನ ಮಾಡಿ ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ನೆರವಾಗಬೇಕೆಂದು ಸೇವಾ ಭಾರತೀಯ ಪದಾಧಿಕಾರಿಗಳು ಕೋರಿದ್ದಾರೆ. ರಕ್ತದಾನ ಶಿಬಿರದ ಜೊತೆಗೆ, ಇತ್ತೀಚಿಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿರುವ ಕಾರಣ, ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಉಚಿತ ಹೃದಯ ತಪಾಸಣಾ ಮತ್ತು ನೇತ್ರ ತಪಾಸಣಾ ಶಿಬಿರವನ್ನೂ ಆಯೋಜಿಸಲಾಗಿದೆ.
ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ನಿತೀಶ್ – 9902105867…
ಮಾಹಿತಿ:
ಮಂಚಲ್ ಮಹೇಶ್
ಸಂಯೋಜಕ, ಸಮರ್ಥ ಭಾರತ.
ವೈದ್ಯಕೀಯ ವಿದ್ಯಾರ್ಥಿ….