
ರಕ್ತ ದಾನ ಶಿಬಿರಗಳನ್ನು ನಿರಂತರವಾಗಿ ಸಂಘಟಿಸುವುದು ಸುಲಭವಲ್ಲ. ಅಂತಹುದರಲ್ಲೂ ಸರ್ಕಾರಿ ನೌಕರರು,ವಿವಿಧ ಸಂಘ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಕಳೆದ ಕೆಲವಾರು ವರ್ಷಗಳಿಂದ ನಿರಂತರವಾಗಿ ವರ್ಷಕ್ಕೆರಡು ಬಾರಿ ರಕ್ತದಾನ ಶಿಬಿರವನ್ನು ಸಂಘಟಿಸುವ ಮೂಲಕ ರಕ್ತದಾನದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಸಮಾಜಮುಖಿ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇದರಿಂದ ನಾನೂ ಸೇರಿದಂತೆ ಹಲವಾರು ಸರ್ಕಾರಿ ಅಧಿಕಾರಿ,ಸಿಬ್ಬಂದಿಗಳು ವರ್ಷಕ್ಕೆರಡು ಬಾರಿ ರಕ್ತದಾನದಲ್ಲಿ ತಪ್ಪದೇ ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್ ನುಡಿದರು. ಅವರು ಗಣ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಐಎಂಎ ರೋಟರಿ ರಕ್ತನಿಧಿಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವತಃ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾಜದಲ್ಲಿ ರಕ್ತ ದಾನದ ಬಗ್ಗೆ ಇರುವ ಹಿಂಜರಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮದೊಂದು ಪುಟ್ಟ ಪ್ರಯತ್ನ.ವಿದು. ಪ್ರತಿ ವರ್ಷ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣ ರಾಜ್ಯೋತ್ಸವ ಸಂದರ್ಭಗಳಲ್ಲಿ ನಡೆಸಲಾಗುವ ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಂತಸದ ಸಂಗತಿ ಎಂದ ಸಂಘದ ಅಧ್ಯಕ್ಷ ಟಿ ವಿ ಸತೀಶ ಇದು ನಮ್ಮ ಸಂಘಟನೆಯ ನಿರಂತರ ಹನ್ನೆರಡನೇ ಶಿಬಿರವಾಗಿದ್ದು ಪ್ರತಿ ವರ್ಷ ಹೊಸ ಹೊಸ ರಕ್ತ ದಾನಿಗಳು ಸೇರ್ಪಡೆಗೊಳ್ಳುತ್ತಿರುವುದರಿಂದ ನಮ್ಮ ಮುಖ್ಯ ಉದ್ದೇಶ ಈಡೇರುತ್ತಿರುವುದು ಸಂತಸ ತಂದಿದೆ. ಒಮ್ಮೆ ರಕ್ತದಾನ ಮಾಡಿದವರು ಅಗತ್ಯವಿದ್ದಾಗ ರಕ್ತದಾನ ಮಾಡಲು ಮುಂದೆ ಬರುತ್ತಾರೆ. ನಮ್ಮ ಶಿಬಿರಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ರಕ್ತದಾನಿಗಳಾಗಿದ್ದಾರೆ. ಇದು ನಿಜಕ್ಕೂ ನಮಗೆ ಸಾರ್ಥಕತೆ ತಂದಿದೆ.ಇಂದೇ ರಕ್ತದಾನ ಮಾಡಬೇಕೆಂದೇನೂ ಇಲ್ಲ. ದಾನಿಗಳು ತಮಗೆ ಅನುಕೂಲವಾದ ದಿನ ಅನುಕೂಲ ಸಮಯಕ್ಕೆ ರಕ್ತದಾನ ಮಾಡಬಹುದು.ಒಟ್ಟಿನಲ್ಲಿ ರಕ್ತದಾನ ಮಾಡುವುದು ಮುಖ್ಯ. ನಮ್ಮ ಈ ಕಾರ್ಯಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಸಂಘದ ಹಿರಿಯ ಉಪಾಧ್ಯಕ್ಷ ರಾಘವೇಂದ್ರ ಎಸ್ ನೇತೃತ್ವದ ಆರ್ ಡಿ ಪಿ ಆರ್ ತಂಡದಿಂದ ಅತೀ ಹೆಚ್ಚು ಸಂಖ್ಯೆಯ ಸದಸ್ಯರು ರಕ್ತದಾನ ಮಾಡಿದರು. ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿ ರಾಘವೇಂದ್ರ ನೇತೃತ್ವದ ಆರೊಗ್ಯ ಇಲಾಖೆ ತಂಡ, ಸಂಘದ ಉಪಾಧ್ಯಕ್ಷ ಎಲ್ಲಪ್ಪ ವಡ್ಡರ್ ನೇತೃತ್ವದ ಅರಣ್ಯ ಇಲಾಖಾ ತಂಡದ ಸದಸ್ಯರು ಅನುಕ್ರಮವಾಗಿ ಅತೀ ಹೆಚ್ಚು ಸಂಖ್ಯೆಯಲ್ಲಿ ರಕ್ತದಾನ ಮಾಡಿದ ಹಿರಿಮೆಗೆ ಪಾತ್ರರಾದರು. ಜಂಟಿ ಕಾರ್ಯದರ್ಶಿ ಕೌಶಿಕ್ ನೇತೃತ್ವದ ಕೃಷಿ ಇಲಾಖೆಯ ತಂಡ ಇಲಾಖಾ ಸಿಬ್ಬಂದಿಗಳು ಮತ್ತು ರಕ್ತದಾನಿಗಳ ಅನುಪಾತದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ರಕ್ತದಾನ ಮಾಡಿದ ಹೆಮ್ಮೆಗೆ ಪಾತ್ರವಾಯಿತು.
ಮಾರಿಕಾಂಬ ಡ್ರೈವಿಂಗ್ ಸ್ಕೂಲ್ ಕವಿರಾಜ್ ಗೆಳೆಯರ ಬಳಗ,ಯುವ ಪತ್ರಕರ್ತ ನಿರಂಜನ್, ಮೇಳಿಗೆ ಪ್ರೌಢಶಾಲಾ ಶಿಕ್ಷಕ ಕೇಶವ, ಹಾರೋಗೊಳಿಗೆ ಪ್ರಾಥಮಿಕ ಶಾಲಾ ಶಿಕ್ಷಕ ರಾಘವೇಂದ್ರ,ಪೋಲಿಸ್ ಇಲಾಖೆಯ ಅವಿನಾಶ್, ರಕ್ತದಾನ ಮಾಡಿದರು.ಈ ಬಾರಿ ಏಳು ಜನ ಇದೇ ಪ್ರಥಮ ಬಾರಿಗೆ ರಕ್ತದಾನ ಮಾಡಿದರು. ಇದೇ ತಿಂಗಳಲ್ಲಿ ಹದಿನೆಂಟನೇ ಜನ್ಮ ದಿನವನ್ನು ಆಚರಿಸಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಧ್ಯಾರ್ಥಿ ಅಂಶುಮತ್ ಎಸ್ ಶೆಟ್ಟಿ ರಕ್ತದಾನ ಮಾಡುವ ಮೂಲಕ ಇಂದಿನ ಅತೀ ಕಿರಿಯ ರಕ್ತದಾನಿ ಎನಿಸಿದರು.
ಕಾರ್ಯದರ್ಶಿ ರಾಮು ಬಿ, ಖಜಾಂಚಿ ಹೆಚ್ ಸಿ ಪವಿತ್ರ, ಮಾಜಿ ಗೌರವಾಧ್ಯಕ್ಷ ಆರ್ ಎಂ ಧರ್ಮಕುಮಾರ್, ಮ್ಯಾನೇಜರ್ ಕಾಡಪ್ಪ ಗೌಡ ಮತ್ತಿತರರು ಇದ್ದರು