
ಶಿವಮೊಗ್ಗ: ಎಲ್ಲ ದಾನಗಳಿಗಿಂತಲೂ ರಕ್ತದಾನ ಅತ್ಯಂತ ಪವಿತ್ರ ಕಾರ್ಯ. ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಶ್ರೇಷ್ಠ ಕಾರ್ಯ ರಕ್ತದಾನ ಎಂದು ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ವತಿಯಿಂದ “ಅಮೃತಮಯಿ” ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ದಾನ ಮಾಡಿದ ವ್ಯಕ್ತಿಯ ಆರೋಗ್ಯ ಸದೃಢ ಆಗುತ್ತದೆ. ರಕ್ತದಾನ ಮಾಡುವುದರಿಂದ ಶೇ. 80ರಷ್ಟು ಹೃದಯಾಘಾತದಿಂದ ಪ್ರಮಾಣ ಕಡಿಮೆ ಆಗುತ್ತದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿಯು ವರ್ಷಕ್ಕೆ ಮೂರ್ನಾಲ್ಕು ಬಾರಿ ರಕ್ತದಾನ ಮಾಡಬಹುದಾಗಿದೆ. ಕಾರ್ಮಿಕ ಸಿಬ್ಬಂದಿ ರಕ್ತದಾನ ಮಾಡುವುದರ ಜತೆಯಲ್ಲಿ ಇತರರಿಗೂ ರಕ್ತದಾನ ಮಾಡುವಂತೆ ಪ್ರೇರೇಪಿಸಬೇಕು. ಪ್ರತಿ ವರ್ಷ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಹೆಚ್ಚು ರಕ್ತ ಸಂಗ್ರಹ ಆಗಿ ಅಗತ್ಯ ಇರುವವರಿಗೆ ಸಹಕಾರಿ ಆಗಬೇಕು ಎಂದರು.
ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ಅಧ್ಯಕ್ಷ ರಮೇಶ್ ಹೆಗಡೆ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಅನೇಕ ಬಾರಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 120ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಅವರು ರಕ್ತದಾನದ ಮಹತ್ವ ಹಾಗೂ ಉಪಯೋಗಗಳ ಕುರಿತು ವಿಶೇಷ ಮಾಹಿತಿ ನೀಡಿದರು.
ಮಾಚೇನಹಳ್ಳಿ ಕೈಗಾರಿಕಾ ಅಸೋಸಿಯೇಷನ್ ಕಾರ್ಯದರ್ಶಿ ಕಿರಣ್‌ಕುಮಾರ್, ಡಿ.ಜಿ.ಬೆನಕಪ್ಪ, ಡಿ.ಎಸ್.ಚಂದ್ರಶೇಖರ, ಮಹೇಂದ್ರಪ್ಪ, ನಂದನ್, ಪ್ರವೀಣ್, ಚಂದ್ರು, ಶ್ರೀನಿವಾಸ್, ಅಶೋಕ್, ಶಾಂತಣ್ಣ, ಧರಣೇಂದ್ರ ದಿನಕರ್, ಸತೀಶ್, ಹನುಮಂತಪ್ಪ, ಕೈಗಾರಿಕಾ ಉದ್ಯಮಿಗಳು, ಕಾರ್ಮಿಕರು ಮತ್ತಿತರರು ಉಪಸ್ಥಿತರಿದ್ದರು.