
ಗುಣಮಟ್ಟದ ಬೀಜಗಳ ಆಯ್ಕೆಗೆ ಮೊಳಕೆ ಒಡೆಯುವ ಪರೀಕ್ಷೆ: ಡಾ. ಪ್ರಿಯಾ
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಶಿವಮೊಗ್ಗ.ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಬಿತ್ತನೆ ಬೀಜಗಳ ಗುಣಮಟ್ಟ ಹಾಗೂ ಮೊಳಕೆಯೊಡೆಯುವ ಪರೀಕ್ಷೆ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಆಯೋಜಿಸಲಾಗಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಬೀಜ ವಿಜ್ಞಾನದ ಪ್ರಾಧ್ಯಾಪಕರಾದ ಡಾ. ಪ್ರಿಯಾರವರು ಆಗಮಿಸಿದ್ದರು.
ಕೃಷಿಯಲ್ಲಿ ಬಿತ್ತನೆ ಬೀಜ ಮಹತ್ವದ ಪಾತ್ರ ವಹಿಸುತ್ತದೆ.ಉತ್ತಮ ಗುಣಮಟ್ಟದ ಬೀಜ ಎಂದರೆ ಅದು ಗರಿಷ್ಠ ಮೊಳೆಯುವ (ಮೊಳಕೆ ಒಡೆಯುವ) ಶಕ್ತಿಯನ್ನು ಹೊಂದಿದ್ದು, ಆನುವಂಶೀಯವಾಗಿ ಮತ್ತು ಭೌತಿಕವಾಗಿ ಶುದ್ಧವಾಗಿರಬೇಕು. ಇತರ ತಳಿ, ಕಳೆ, ಕಲ್ಲು ಮಣ್ಣು ಇತ್ಯಾದಿಗಳಿಂದ ಕೂಡಿರಬಾರದು. ರೋಗ ಮತ್ತು ಕೀಟಗಳಿಗೆ ತುತ್ತಾಗಿರಬಾರದು. ಗುಣಮಟ್ಟ ಬೀಜಗಳಿಂದ ಆದ ಸಸಿಗಳು ಹೆಚ್ಚು ತೂಕ ಮತ್ತು ಬೇರು ಹೊಂದಿದ್ದು ದೃಢಕಾಯದಿಂದ ಕೂಡಿರುತ್ತವೆ. ಬೆಳೆಯು ಒಂದೇ ತೆರನಾಗಿ ಇದ್ದು ಏಕಕಾಲಕ್ಕೆ ಹೂವಾಡುತ್ತದೆ. ಹೀಗಾಗಿ ಒಂದೇ ಸಲ ಕೊಯ್ಲಿಗೆ ಬರುತ್ತದೆ. ಹೆಚ್ಚಿನ ಇಳುವರಿ ಸಿಗುವುದಲ್ಲದೆ ಧಾನ್ಯದ ಗುಣಮಟ್ಟ ಚೆನ್ನಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ.
ಬೀಜದ ಗುಣಮಟ್ಟವನ್ನು ರೈತರು ಬೀಜ ಪರೀಕ್ಷೆ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಬಹುದು. ವಿಶೇಷವೇನೆಂದರೆ ಈ ಪರೀಕ್ಷೆಗಳನ್ನು ಮನೆಯಲ್ಲೇ ಬೇರೆ ಬೇರೆ ವಿಧಾನಗಳನ್ನು ಅಳವಡಿಸಿ ಬೀಜಗಳ ಗುಣಮಟ್ಟ ಕಂಡುಕೊಳ್ಳಬಹುದು.
ರದ್ದಿ ಪೇಪರ್ ವಿಧಾನ :
ಇಲ್ಲಿ ಸುಲಭದಲ್ಲಿ ಸಿಗುವ ರದ್ದಿ ಹಾಳೆ ಮತ್ತು ಪ್ಲಾಸ್ಟಿಕ್ ಹಾಳೆ ಉಪಯೋಗಿಸಿ ಮೊಳಕೆ ಪ್ರಮಾಣ ಕಂಡು ಹಿಡಿಯಬಹುದು.ಹಸಿ ಹಾಳೆಗಳ ಮೇಲೆ ಸರಿಯಾಗಿ ನೂರು ಬೀಜಗಳನ್ನು ಎಣಿಸಿ ಸಮಾನ ಅಂತರದಲ್ಲಿ ಒಂದು ಸಾಲಿನಲ್ಲಿ 10 ಬೀಜಗಳಂತೆ ಹಾಕಬೇಕು.ನಂತರ ಮತ್ತೊಂದು ರದ್ದಿ ಪೇಪರನ್ನು ಅದರ ಮೇಲೆ ಹಾಕಬೇಕು.5-6 ದಿನ ಬಿಟ್ಟು ರಬ್ಬರ್ ಬ್ಯಾಂಡ್ ಅಥವಾ ದಾರ ತೆಗೆದು ಬೀಜಗಳನ್ನು ಎಣಿಸಿದರೆ ಮೊಳಕೆ ಪ್ರಮಾಣ ಸಿಗುತ್ತದೆ.*ಮರಳಿನಲ್ಲಿ ಬೀಜ ಮೊಳಕೆ ಪರೀಕ್ಷೆ:* ಚೆನ್ನಾಗಿ ಬಿಸಿಲಿನಲ್ಲಿ ಒಣಗಿದ ಮರಳನ್ನು ಒಂದು ಪ್ಲಾಸ್ಟಿಕ್ ಬುಟ್ಟಿಯಲ್ಲಿ 20 ಸೆಂ.ಮೀ ದಪ್ಪವಾಗಿ ಹಾಕಬೇಕು.ನಂತರ 50 ಅಥವಾ 100 ಬೀಜಗಳನ್ನು ಗಾತ್ರಕ್ಕೆ ಅನುಗುಣವಾಗಿ ನಿಯಮಿತ ಅಂತರದಲ್ಲಿ ಬಿತ್ತಿ. ನಂತರ ನೀರನ್ನು ಚಿಮುಕಿಸಿ, ಬೀಜ ಬಿತ್ತಿದ ಪ್ಲಾಸ್ಟಿಕ್ ಟ್ರೇಗಳನ್ನು ಮನೆಯ ನೆರಳಿನಲ್ಲಿಡಬೇಕು. ಇದಕ್ಕೆ ನಿಯಮಿತವಾಗಿ ನೀರನ್ನು ಹಾಕಬೇಕು. 7-8ದಿನದ ನಂತರ ಬೀಜಗಳನ್ನು ಎಣಿಸಿದರೆ ಮೊಳಕೆ ಪ್ರಮಾಣ ಸಿಗುತ್ತದೆ.ಈ ರೀತಿಯಾಗಿ ಬಿತ್ತನೆಗೆ ಮುಂಚೆ ಮೊಳಕೆಯೊಡೆಯುವ ಪರೀಕ್ಷೆ ಮನೆಯಲ್ಲೇ ಮಾಡಿಕೊಂಡು ನಂತರ ಬಿತ್ತನೆ ಮಾಡಿ ಎಂದು ಡಾ. ಪ್ರಿಯಾರವರು ರೈತರಿಗೆ ತಿಳಿಸಿಕೊಟ್ಟರು.