
ಶಿವಮೊಗ್ಗ> ಸೆಪ್ಟೆಂಬರ್>29: ಜಿಲ್ಲೆಯಾದ್ಯಂತ ತೀವ್ರ ಸಂಚಲವನ್ನು ಉಂಟುಮಾಡಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗಿರಿರಾಜ್ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಮೆಸೇಜ್ ಮಾಡಿದ್ದ ಗಿರಿರಾಜ್, ಆ ದಿನ ಬೆಳಗ್ಗೆ ಎಟಿಎಂನಿಂದ ಹಣ ಡ್ರಾ ಮಾಡಿಕೊಂಡಿದ್ದು ತನಿಖೆಯ ಜಾಡು ಹಿಡಿದ ಪೊಲೀಸರಿಗೆ ಹೊಸ ತಲೆನೋವಾಗಿದೆ.
ಮಂಗಳವಾರ ಬೆಳಗ್ಗೆ 6 ಗಂಟೆಗೆ ಗಿರಿರಾಜ್ ತಮ್ಮ ಮನೆಯಿಂದ ತೆರಳಿದ್ದರು. ಈ ವೇಳೆ ಕಚೇರಿ ಸಿಬ್ಬಂದಿಗೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಾಟ್ಸಪ್ ಮೆಸೇಜ್ ಮಾಡಿದ್ದರು. ಇದು ಜಿಲ್ಲಾಧಿಕಾರಿ ಕಚೇರಿಯಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಗಿರಿರಾಜ್ ನಾಪತ್ತೆಯಾಗುವ ಮೊದಲು ತಮ್ಮ ಸಾವಿಗೆ ಹಿರಿಯ ಅಧಿಕಾರಿಗಳು ಕಾರಣ ಎಂದು ವಾಟ್ಸಪ್ ಸಂದೇಶದಲ್ಲಿ ತಿಳಿಸಿದ್ದರು. ಯಾವುದೇ ಕಾಮಗಾರಿಗೆ 2018ರಿಂದ ಈಚೆಗೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಪಿಡಿ ಖಾತೆಯಲ್ಲಿ ಇರುವ ಹಣವನ್ನು ಕಾಮಗಾರಿಗಳಿಗೆ ಬಳಕೆ ಮಾಡುವಂತೆ ಶಾಸಕರ ಒತ್ತಾಯವಿದೆ.
ಆದರೆ ಈ ಹಣವನ್ನು ಹೇಗೆ ಬಳಕೆ ಮಾಡಬೇಕು? ಎಂದು ಸರ್ಕಾರಕ್ಕೆ ಪತ್ರ ಬರೆದರೂ ಉತ್ತರವಿಲ್ಲ ಎಂದು ವಾಟ್ಸಪ್ ಮೆಸೇಜ್‌ನಲ್ಲಿ ತಿಳಿಸಿದ್ದರು. ಹಿರಿಯ ಅಧಿಕಾರಿಗಳು ನಾಲ್ಕೈದು ವಿಭಾಗದ ಜವಾಬ್ದಾರಿ ನೀಡಿ ಕೆಲಸದ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಮನನೊಂದು ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಗಿರಿರಾಜ್ ಸಂದೇಶದಲ್ಲಿ ಹೇಳಿದ್ದರು.
ಗಿರಿರಾಜ್ ಪತ್ನಿಯಿಂದ ನಾಪತ್ತೆ ಎಂದು ದೂರು:
ಗಿರಿರಾಜ್ ಪತ್ನಿ ಜ್ಯೋತಿ ಜಯನಗರ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ತಮ್ಮ ಪತಿ ಗಿರಿರಾಜ್ ಬಸವನಗುಡಿಯ ಮನೆಯಿಂದ ಹೋದವರು ಮರಳಿ ಬಂದಿಲ್ಲ. ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಹುಡಕಿಕೊಡುವಂತೆ ಗಿರಿರಾಜ್ ಪತ್ನಿ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪತ್ನಿಯ ದೂರಿನಲ್ಲಿ ಯಾವುದೇ ಅಧಿಕಾರಿಗಳ ಬಗ್ಗೆ ದೂರು ದಾಖಲಿಸಿಲ್ಲ:
ಗಿರಿರಾಜ್ ಪತ್ನಿ ಜ್ಯೋತಿ ನೀಡಿರುವ ದೂರಿನಲ್ಲಿ ಹಿರಿಯ ಅಧಿಕಾರಿಗಳ ಒತ್ತಡದ ಬಗ್ಗೆಯಾಗಲಿ, ವಾಟ್ಸಪ್ ಮೆಸೇಜಿನಲ್ಲಿ ಗಿರಿರಾಜ್ ಪ್ರಸ್ತಾಪಿಸಿದ ವಿಚಾರವಾಗಲಿ ಉಲ್ಲೇಖಿಸಿಲ್ಲ.
ಗಿರಿರಾಜ್ ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಹುಡುಕಾಟ ಪ್ರಾರಂಭ:
ಭದ್ರಾವತಿ ತಾಲೂಕು ಬಾರಂದೂರು ಗ್ರಾಮ ಮತ್ತು ಶಿವನಿ ಸಮೀಪದಲ್ಲಿ ಸಿಗ್ನಲ್ ಗಿರಿರಾಜ್ ಮೊಬೈಲ್ ಸಿಗ್ನಲ್ ಸಿಕ್ಕಿದ್ದು . ಈ ಭಾಗದಲ್ಲಿ ಭದ್ರಾ ನದಿಯ ನಾಲೆ ಇದೆ. ಹಾಗಾಗಿ ಅಲ್ಲಿ ಶೋಧ ಕಾರ್ಯ ನಡೆಸಿದರು. ಇದುವರೆಗೂ ಗಿರಿರಾಜ್ ಪತ್ತೆಯಾಗಿಲ್ಲ.
ಅವರು ಆತ್ಮಹತ್ಯೆ ಡೆತ್ ನೋಟ್ ಬರೆದಿರುವುದರಿಂದ ಭದ್ರಾ ನಾಲೆಯಲ್ಲಿ ಹುಡುಕಾಟ ಜಿಲ್ಲಾ ವರಿಷ್ಠಾಧಿಕಾರಿ ಹೇಳಿಕೆ:
“ಅವರು ಸೂಸೈಡ್ ಮಾಡಿಕೊಳ್ಳುವುದಾಗಿ ಡೆತ್ ನೋಟ್ ನಲ್ಲಿ ತಿಳಿಸಿರುವುದರಿಂದ ಭದ್ರಾ ನದಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಹೊಳೆಹೊನ್ನೂರಿನಲ್ಲೂ ಹುಡಕಾಟ ಮಾಡಲಾಗುತ್ತಿದೆ” ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
“ಗಿರಿರಾಜ್ ಬೇರೆ ಎಲ್ಲಿಯಾದರೂ ಹೋಗಿರಬಹುದೆ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಕುರಿತು ಅವರ ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿಯೂ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅವರು ಬೇರೆ ಊರಿಗೆ ಹೋಗಿದ್ದಾರೆಯೇ? ಎಂಬುದರ ಬಗ್ಗೆ ಕೂಡ ತನಿಖೆ ಮಾಡುತ್ತಿದ್ದೇವೆ” ಎಂದು ಎಸ್ಪಿ ಲಕ್ಷ್ಮೀಪ್ರಸಾದ್ ಹೇಳಿದ್ದಾರೆ.
ಎಟಿಎಂನಿಂದ ಹಣ ಡ್ರಾ ಮಾಡಿಕೊಂಡ ಗಿರಿರಾಜ್:
ಗಿರಿರಾಜ್ ನಾಪತ್ತೆಯಾದ ದಿನ ಬೆಳಗ್ಗೆ ಎಟಿಎಂನಿಂದ ಹಣ ಬಿಡಿಸಿಕೊಂಡಿದ್ದಾರೆ ಎಂಬುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಹಣ ಬಿಡಿಸಲು ಕಾರಣವೇನು? ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಗಿರಿರಾಜ್ ಶೀಘ್ರ ಪತ್ತೆಯಾಗಬಹದು ಎಂಬ ನಿರೀಕ್ಷೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಸ್ನೇಹಿತರು, ಕುಟುಂಬದವರು ಇದ್ದಾರೆ.
ವರದಿ.. ರಘುರಾಜ್ ಹೆಚ್. ಕೆ...
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899..