ಗೌರವಾನ್ವಿತ ಆರೋಗ್ಯ ಸಚಿವರಾದ dr.ಸುಧಾಕರ್ ಅವರಿಗೆ ನಮಸ್ಕಾರ.
ಕೇಂದ್ರದ ಸೂಚನೆಯನ್ನು ಅನುಸರಿಸಿ ರಾಜ್ಯ ಸರ್ಕಾರ ಇವತ್ತಿಂದ ಐದು ದಿನಗಳ ಕೋವಿಡ್ ಪ್ರತಿಬಂಧಕ ಲಸಿಕಾ ಕಾರ್ಯಕ್ರಮವನ್ನು ಮಾಡುತ್ತದೆ ಎಂದು ಹೇಳಲಾಗಿದೆ. ಬಹಳ ಸಂತೋಷ. ಜನಕ್ಕಾಗಿ ಸರ್ಕಾರದ ತುಡಿತ ಮೆಚ್ಚುವಂತದು! ಹಳ್ಳಿ ಹಳ್ಳಿಗಳ ಮೂಲೆ ಮೂಲೆಯಲ್ಲಿರುವವರನ್ನೂ ಹುಡುಕಿ ಲಸಿಕೆ ಚುಚ್ಚಬೇಕು. ಶೇಕಡಾವಾರು ಸಾಧನೆಯ ಲೆಕ್ಕಾಚಾರದಲ್ಲಿ ಯಶಸ್ಸು ಪಡೆಯಬೇಕು.
ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದ ಬದಲು ಮೊದಲ ಸ್ಥಾನ ಪಡೆದರಂತೂ ವಿಶೇಷ ಸಂತೋಷ. ಇನ್ನು ನಿಮಗೆ, ಈ ದೇಶದಲ್ಲಿರುವ ಅತ್ಯುತ್ತಮ, ಕ್ರಿಯಾಶೀಲ ಸಚಿವರಿಗಿರುವ ಎಲ್ಲ ಪ್ರಶಸ್ತಿಗಳೂ ಬರಲಿ. ಅದು ಸಾಧ್ಯವಾಗಲು ಸರ್ಕಾರ ಇನ್ನೊಂದು ಫರ್ಮಾನನ್ನೂ ಹೊರಡಿಸಬೇಕು, ಇನ್ನು ಮುಂದೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಕೆಳ ಹಂತದ ನೌಕರರು, ಗುತ್ತಿಗೆ ಕೆಲಸಗಾರರು ಮನೆ ಮಕ್ಕಳನ್ನು ಹೊಂದುವಂತಿಲ್ಲ, ಅವರಿಗೆ ಕುಟುಂಬ ಸೌಕರ್ಯ ಇರುವಂತಿಲ್ಲ, ಅವರು ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಹಬ್ಬ ಹರಿದಿನಗಳನ್ನು ಆಚರಿಸುವಂತೆಯೇ ಇಲ್ಲ. ಮತ್ತು ಹೇಳಲೇಬೇಕಾದುದೆಂದರೆ, ಅವರು ಕಾಲಕಾಲಕ್ಕೆ ಕೆಲಸ ಮಾಡಿದ್ದಕ್ಕೆ ಸರ್ಕಾರ ಘೋಷಿಸಿದ ವಿಶೇಷ ಭತ್ಯೆ ಕೈಸೇರದಿದ್ದರೂ ಮಾತನಾಡುವಂತಿಲ್ಲ.
ವೇತನ ಎಷ್ಟೇ ತಡವಾದರೂ ಗೊಣಗುವಂತಿಲ್ಲ. ಕೊಡುವ ಗೌರವ ಧನದ ಜೊತೆ ಯಾವುದೇ ಟಿಎ ಡಿಎಗಳನ್ನು ಬಯಸುವಂತಿಲ್ಲ. ಈ ರೀತಿಯ ಆದೇಶವೂ ಹೊರಡಿಸಲ್ಪಟ್ಟರೆ ಎಲ್ಲರೂ ಅದನ್ನೇ ದಸರಾ ಕೊಡುಗೆ ಎಂದು ಸಂಭ್ರಮಿಸುತ್ತೇವೆ!
ಮೊದಲು ಮಾನವರಾಗಿ ಸ್ವಾಮಿ.,ಕೋವಿಡ್ ಹೋಗಬೇಕು ಎಂಬ ಒಂದೇ ಕಾರಣಕ್ಕೆ ಆರೋಗ್ಯ ಇಲಾಖೆಯ ವಿವಿಧ ವೃಂದಗಳ ನೌಕರರಿಗೆ ವಿಶೇಷ ಭತ್ಯೆ ಘೋಷಿಸಿ, ಈವರೆಗೆ ಕೊಡದಿದ್ದರೂ ನೌಕರರು ಸುಮ್ಮನೆ ಕೆಲಸ ಮಾಡುತ್ತಿದ್ದಾರೆ.
ರಜೆಗಳ ವಿಚಾರದಲ್ಲಿ ತಾವೇ ರಾಜಿಯಾಗಿ ಇಲಾಖೆಗಾಗಿ ದುಡಿಯುತ್ತಿದ್ದಾರೆ. ಗುತ್ತಿಗೆ ಕೆಲಸಗಾರರಂತೂ ತಿಂಗಳಿನ ವೇತನ ವಿಳಂಬವಾದರೂ ತುಟಿ ಕಚ್ಚಿ ಕೆಲಸ ಮಾಡುತ್ತಿದ್ದಾರೆ. ಇನ್ನು ಆಶಾ, ಅಂಗನವಾಡಿ ಕಾರ್ಯಕರ್ತೆಯರಂತೂ ಪಡೆಯುತ್ತಿರುವುದು ಗೌರವ ಧನ ಮಾತ್ರ. ಕೋವಿಡ್ ಕಾಲದಲ್ಲಿ ಸರ್ಕಾರದ ಗುರಿಗಳನ್ನು ಮುಟ್ಟಿಸುವಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಬಹುಸಂಖ್ಯಾತರು ವನಿತೆಯರು. ಎಷ್ಟೂ ದಿನ ಈ ಲಸಿಕಾ ಮೇಳ ಆಚರಿಸುವ ದಿನ ಬೆಳಿಗ್ಗೆ ಏಳರಿಂದ ಸಂಜೆ ಏಳರವರೆಗೆ ಕೆಲಸ ಮಾಡುವ ಅವರು, ಉಸ್ಸೆನ್ನುತ್ತ ಮನೆಗೆ ಹೋದವರು ಮಡದಿಯಾಗಿ, ತಾಯಿಯಾಗಿ ಮನೆಕೆಲಸದಲ್ಲಿ ತೊಡಗಬೇಕು.
ಅವರಿಗೆ ಕೊಡಬೇಕಾದುದನ್ನೂ ಕೊಡದ ನಿಮಗೆ ಮತ್ತೆ ಈ ಐದು ದಿನದ ಲಸಿಕಾ ಮೇಳದ ಮಾತು ಹೇಳಲು ಯಾವ ನೈತಿಕ ಧೈರ್ಯವಿದೆ?
ಇವರು ನವರಾತ್ರಿಯ ಆಚರಣೆಗಳಲ್ಲಿ ತೊಡಗಿಸಿಕೊಳ್ಳದೆ ಎರಡು ವರ್ಷಗಳಾಗಿವೆ. ದೊಡ್ಡ ಅಧಿಕಾರದಲ್ಲಿದ್ದವರಿಗೆ ಮನೆ ತುಂಬ ಆಳು, ಸೌಕರ್ಯಗಳಿರುತ್ತವೆ. ತಕ್ಕಷ್ಟು ಹಣ, ವೇತನ, ಜಬರ್ದಸ್ತಿ ಮಾಡಲು ಅಧಿಕಾರ. ಜುಮ್ಮೆಂದು ಕಾರಲ್ಲಿ ಹೋಗಬಹುದು, ಡ್ರೈವರ್ ಇರುತ್ತಾನೆ. ಮನೆಯಲ್ಲಿ ಅಡುಗೆ ಸಿದ್ದಮಾಡುವವರಿರುತ್ತಾರೆ.
ಬೇಜಾರಾದರೆ ದೊಡ್ಡ ಹೋಟೆಲ್‌ಗೇ ಹೋಗಬಹುದು. ಅದು ನಿಮ್ಮ ಇಷ್ಟ, ಸಾಮರ್ಥ್ಯ. ನಮ್ಮ ನೌಕರ ವರ್ಗಕ್ಕೆ ಆ ಬಗ್ಗೆ ಹೊಟ್ಟೆಕಿಚ್ಚು ಇಲ್ಲ. ಆದರೆ ಈ ವರ್ಷ ಸಿಕ್ಕಿರುವ ಅವಕಾಶದಲ್ಲಿ ತಮ್ಮ ಕುಟುಂಬದ ಜೊತೆ ಅವರು ತಮ್ಮ ಮಟ್ಟದ ಹಬ್ಬ ಆಚರಿಸುವುದು ಅವರ ಹಕ್ಕಲ್ಲವೇ ಸ್ವಾಮಿ. ಈ ದಿನಗಳಲ್ಲಿ ಅವರು ಮನೆಮನೆಗೆ ತಿರುಗುತ್ತ, ಮನೆಮಠ ಮರೆತು ಕೆಲಸ ಮಾಡಿ ಎನ್ನುವುದಾದರೆ ನಿಮ್ಮನ್ನು ಸ್ಯಾಡಿಸ್ಟ್‌ಗಳು ಎಂಬ ಕಠಿಣ ಪದದಲ್ಲಿ ವಿವರಿಸಲೂ ನಮ್ಮಲ್ಲಿನ ಮಾನವಂತ ಗುಣ ಬಿಡುತ್ತಿಲ್ಲ. ಆದರೆ ಈ ಬಾರಿಯ ಈ ಐದು ದಿನಗಳ ಮೇಳ ಮಾನವ ಹಕ್ಕುಗಳ ಮೇಲಿನ ದೌರ್ಜನ್ಯ ಎಂಬುದಂತೂ ನಿಜ.
ಹೋಗಲಿ, ನಮ್ಮ ಆರೋಗ್ಯ ಇಲಾಖೆ, ಆರ್‌ಡಿಪಿಆರ್, ಕಂದಾಯ ಇಲಾಖೆಯ ನೌಕರರು ಸ್ವನೆಮ್ಮದಿಯನ್ನು ಮರೆತು ಈ ಲಸಿಕಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು ಎಂದಿಟ್ಟುಕೊಳ್ಳಿ. ಅಷ್ಟು ಮಾತ್ರಕ್ಕೆ ಜನ ಲಸಿಕೆ ಪಡೆಯಲು ಮುಂದೆ ಬಂದುಬಿಡುತ್ತಾರಾ ಎಂದು ಕೇಳಿದರೆ ಎಸ್ ಎನ್ನುವುದು ಕಷ್ಟ. ಈ ಮಣ್ಣಿನ ಗ್ರೌಂಡ್ ರಿಯಾಲಿಟಿಗಳು ಗೊತ್ತಿದ್ದವರಿಗೆ ಗೊತ್ತು, ಗುರಿಗಳನ್ನು ಇರಿಸುವುದು ಸುಲಭ. ಫಲಿತಾಂಶದ ಬೆವರು ಭಾರೀ ಬೆಲೆ ಕೇಳುತ್ತದೆ.
ಮೊತ್ತಮೊದಲಾಗಿ, ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದು ನಿರ್ಧರಿಸಿದವರನ್ನೇ ಮನವೊಲಿಸಬೇಕಾಗುತ್ತದೆ. ಅವರಿಗೆ ಸರ್ಕಾರದ ಹೆದರಿಕೆ ಇಲ್ಲ, ಸವಲತ್ತು ಕಡಿತಗೊಳಿಸುತ್ತೇವೆ ಎಂಬ ಬೆದರಿಕೆ ಇಲ್ಲ. ಅಷ್ಟಕ್ಕೂ ಹಬ್ಬದ ಆಯಕಟ್ಟಿನ ಸಂದರ್ಭದಲ್ಲಿ ಲಸಿಕೆ ತೆಗೆದುಕೊಂಡು ಸಣ್ಣ ಪ್ರಮಾಣದ ಅಡ್ಡ ಪರಿಣಾಮ ಉಂಟಾಗುತ್ತದೆ ಎಂಬುದೇ ಸಾಕು, ಲಸಿಕೆಯನ್ನು ನಿರಾಕರಿಸಲು. ಈ ನಡುವೆ, ಬೆಂಗಳೂರಿನಲ್ಲಿ ಕೂತು ಮನೆಮನೆಗೆ ಭೇಟಿ ನೀಡಿ ಎನ್ನುವ ಕೆಲವರು ದುರಹಂಕಾರಿ ಹಾಗೂ ಸರ್ವಾಧಿಕಾರಿ ಈ ಐಎಎಸ್, ಕೆಎಎಸ್ ಅಧಿಕಾರಿಗಳು ಮಲೆನಾಡಿನ ಹಳ್ಳಿಗಳಿಗೆ ಬಂದು ನಾಲ್ಕು ಜನರ ಮನವೊಲಿಸಲಿ.
ಅವರನ್ನು ತಲುಪಲೂ ಕಿಮೀಗಟ್ಟಲೆ ನಡೆಯಬೇಕು, ಮೊಬೈಲ್ ತಾಕಲ್ಲ. ಹೇಳಿದ ತಕ್ಷಣ ಅವರ ಆಧಾರ್ ಕಾರ್ಡ್, ಮತ್ತೊಂದು ಕೈಗೆಟುಕಲ್ಲ. ಮನೆ ಬಾಗಿಲಿನಲ್ಲಿಯೇ ನೋಂದಣಿ ಮಾಡುತ್ತೇವೆ ಎಂದರೆ ನೆಟ್‌ವರ್ಕ್ ಇರಲ್ಲ. ಅಧಿಕಾರಿಗಳು ಅಂಕಿಅಂಶದ ಆಟ ಆಡಿ, ನಮ್ಮ ಜಿಲ್ಲೆಯಲ್ಲಿ ಸರ್ಕಾರ ನಿಗದಿಪಡಿಸಿದ ಗುರಿ ಸಾಧ್ಯ ಕಣ್ರಿ ಎಂದುಬಿಡುತ್ತಾರೆ.
ನಾಳೆ ಮಾಧ್ಯಮಗಳ ಎದುರು ಸಾಧಕರಾಗಿ ಮಿಂಚಿಯೂ ಬಿಡುತ್ತಾರೆ. ಮಕ್ಕಳಿಗೆ, ಮನೆಯವರಿಗೆ ಹಬ್ಬದ ಹರ್ಷವನ್ನು ವಂಚಿಸಿದ ತಳ ಮಟ್ಟದ ಉದ್ಯೋಗಿಗಳ ತಳಮಳ ಹಾಗೆಯೇ ನೆಲದಲ್ಲಿ ಇಂಗಿಹೋಗುತ್ತದೆ.
ಈ ರೀತಿ ಸರ್ಕಾರಿ ನೌಕರರಿಗೆ ಕೆಲಸ ಸಾಧ್ಯ ಇಲ್ಲದ ಪರಿಸ್ಥಿತಿಯನ್ನು ನಿರ್ಮಾಣ ಮಾಡುವ ಹಿಂದೆ, ಸರ್ಕಾರದ ವ್ಯವಸ್ಥೆಗಳಿಂದ ಕಾರ್ಯ ಸಾಧ್ಯವಿಲ್ಲ. ಇದಕ್ಕೆ ಖಾಸಗಿ ವ್ಯವಸ್ಥೆಯೇ ಬೇಕು ಎಂಬ ವಾತಾವರಣವನ್ನು ತಂದು ಅವರಿಗೆ ವ್ಯವಸ್ಥೆಗಳನ್ನು ಪರಭಾರೆ ಮಾಡುವ ಹುನ್ನಾರವನ್ನು ಸರ್ಕಾರ ಮಾಡುತ್ತಿದೆಯೇ ಎಂಬ ಅನುಮಾನವೂ ಕಾಡುತ್ತಿದೆ.
ಒಂದಂತೂ ನಿಜ, ಈ ರೀತಿಯ ಗುರಿಯ ಒತ್ತಡಗಳು ಆರೋಗ್ಯ ಇಲಾಖೆಯ ನೌಕರರನ್ನು ಸುಸ್ತು ಮಾಡುತ್ತದೆ. ಒಂದೊಮ್ಮೆ ಇನ್ನೊಂದೆರಡು ತಿಂಗಳಿನಲ್ಲಿ ಕೊರೊನಾದ ಇನ್ನೊಂದು ಅಲೆ ತೀವ್ರವಾಗಿ ಬಂದರೆ ಅಕ್ಷರಶಃ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕಾಯಿಲೆಯ ತೀವ್ರತೆಗಿಂತ ಶುಶ್ರೂಷೆ ಮಾಡುವ ಆರೋಗ್ಯ ನೌಕರರ ಕೊರತೆ ಕಾಡಲಿದೆ. ವೈದ್ಯಕೀಯ ಸಲಕರಣೆ, ಸೌಕರ್ಯದತ್ತ ಕೊಡುತ್ತಿರುವ ಗಮನವನ್ನು ಆರೋಗ್ಯ ಸಿಬ್ಬಂದಿಯತ್ತ ಕೊಡದಿದ್ದರೆ ಪರಿಸ್ಥಿತಿ ಚಿಂತಾಜನಕವೇ ಸರಿ.
ಈ ಅನಾರೋಗ್ಯದತ್ತಲೂ ಗಮನ ಹರಿಸಬೇಕಾದುದು ನಿಮ್ಮ ಚಿತ್ತ!
ವಂದನೆಗಳು…..
- ಮ.ಸ.ನಂಜುಂಡಸ್ವಾಮಿ,9448721572
ಸಾಗರ….