
ಬೆಂಗಳೂರು-: ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಧಿಡೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಾರಾಗೃಹ ಗಳಲ್ಲಿ ನಡೆಯುವ ಯಾವುದೇ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ ಹಾಗೂ ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜೈಲಿನ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಜೈಲಿನ ಒಳಗಿನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡ ಸಚಿವರು :
ಭೇಟಿಯ ಸಂದರ್ಭದಲ್ಲಿ, ಕಾರಾಗೃಹದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜತೆ ಸಮಾಲೋಚನೆ ನಡೆಸಿ, ಜೈಲಿನ ಒಳಗೆ, ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳು, ರಕ್ಷಣಾ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಶಿವಮೊಗ್ಗ ಹರ್ಷನ ಹತ್ಯೆ ಆರೋಪಿಗಳ ವಿಡಿಯೋ ಕಾಲ್ ಬಗ್ಗೆ ತನಿಖೆ :
ಇತ್ತೀಚೆಗೆ, ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳು, ಜೈಲಿನಲ್ಲಿ ಮೊಬೈಲ್ ಫೋನ್ ನಲ್ಲಿ ಕುಟುಂಬದವರೊಂದಿಗೆ ವಿಡಿಯೋ ಕಾಲ್ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದರ ಬಗ್ಗೆ ಪ್ರತಿಕ್ರಿಸಿದ ಗೃಹ ಸಚಿವರು ಈ ಬಗ್ಗೆ ಗಂಭೀರವಾದ ತನಿಖೆ ನಡೆಯುತ್ತಿದ್ದು, ಇದುವರೆಗೆ ಒಬ್ಬನನ್ನು ಬಂಧಿಸಲಾಗಿದೆ ಪ್ರಕರಣದಲ್ಲಿ ಯಾರೇ ಇದ್ದರೂ ಅವರಿಗೆ ಖಂಡಿತ ಶಿಕ್ಷೆ ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಮುರುಗನ್ ಸಮಿತಿ ನೀಡಿದ ಶಿಫಾರಸ್ಸು ಅನುಷ್ಠಾನ :
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಲ್ಲಿ ನಡೆದ ಅಕ್ರಮ ಚಟುವಟಿಕೆಗಳ ಬಗ್ಗೆ, ಮುರುಗನ್ ಸಮಿತಿ ನೀಡಿದ ಶಿಫಾರಸು ಗಳನ್ನು ಅನುಷ್ಠಾನಗೊಳಿಸಿ ಹಲವಾರು ಅಧಿಕಾರಿಗಳನ್ನು, ಜೈಲಿನಿಂದ ವರ್ಗಾವಣೆ ಮಾಡಲಾಗಿದೆ. ಕೆಲವು ಅಧಿಕಾರಿಗಳ ಸೇವೆಯನ್ನು ಅಮಾನತ್ತಿನಲ್ಲಿಡಲು ಸಹ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು .
ಜೈಲಿನೊಳಗೆ ಮೊಬೈಲ್, ಮಾದಕ ವಸ್ತುಗಳು, ಕೈದಿಗಳಿಗೆ ವಿಶೇಷ ಸೌಲಭ್ಯ ಒದಗಿಸುವುದು ಇನ್ನಿತರ ಅಕ್ರಮಗಳಿಗೆ ಕಡಿವಾಣ ಹಾಕಲು ಖಡಕ್ ಸೂಚನೆ :
ಕೇಂದ್ರ ಕಾರಾಗೃಹಗಳಲ್ಲಿ, ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಜಾಮರ್ ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, 5_G ಸಾಮರ್ಥ್ಯದವರೆಗಿನ ಮೊಬೈಲ್ ಕರೆಗಳನ್ನು ನಿಷ್ಕ್ರಿಯ ಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು. ಜೈಲಿನ ಒಳಗಡೆ ಅಕ್ರಮವಾಗಿ, ಮಾದಕ ವಸ್ತುಗಳ ಪೂರೈಕೆ, ಕಾನೂನು ಬಾಹಿರವಾಗಿ ಕೈದಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡುವುದು ಹಾಗೂ, ಮೊಬೈಲ್ ಬಳಕೆಯಂಥ ಅಕ್ರಮ ಚಟುವಟಿಕೆಗಳಿಗೆ, ಅಂಕುಶ ಹಾಕಬೇಕು . ಇತ್ತೀಚೆಗೆ, ಜೈಲಿನೊಳಗೆ ಫುಟ್ ಬಾಲ್ ನಲ್ಲಿ, ಮಾದಕ ವಸ್ತುಗಳನ್ನು ತುಂಬಿಸಿ, ಜೈಲಿನೊಳಕ್ಕೆ ಎಸೆದ ಘಟನೆ ಬಗ್ಗೆ, ತನಿಖೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಬ್ಯಾಂಡ್ ಜೊತೆ ಮೊಬೈಲ್ ತಂದ ಕೈದಿಯ ಬಂಧನ :
ಜೈಲಿಗೆ ಕರೆತರಲಾದ ವ್ಯಕ್ತಿಯೊಬ್ಬ ಕಾಲಿಗೆ ಬ್ಯಾಂಡೇಜ್ ಜೊತೆ ಕಟ್ಟಿಕೊಂಡಿದ್ದ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಈ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಯನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೈದಿಗಳ ಬೇಟಿಗೆ ಹಣ ವಸೂಲಿ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವರು :
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಲ್ಲಿ ಕೈದಿಗಳ ಭೇಟಿಗೆ ಬರುವ ಕುಟುಂಬ ಸದಸ್ಯರ ಹಾಗೂ ಇತರ ರಿಂದ ಅಕ್ರಮವಾಗಿ ಹಣ ವಸೂಲಿ ಆಗುತ್ತಿದೆ ಎಂಬ ಬಗ್ಗಯೂ ಪ್ರಸ್ತಾಪಿಸಲಾಗಿದೆ, ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವರು ಪ್ರತಿಕ್ರಿಸಿದರು.
ಗೃಹ ಸಚಿವರ ಭೇಟಿಯ ಸಂದರ್ಭದಲ್ಲಿ ರಾಜ್ಯ ಕಾರಾಗೃಹಗಳ ಮುಖ್ಯಸ್ಥ ಅಲೋಕ್ ಮೋಹನ್, ಕೇಂದ್ರ ಕಾರಾಗೃಹ ಮುಖ್ಯಸ್ಥ ರಮೇಶ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು…
ರಘುರಾಜ್ ಹೆಚ್.ಕೆ…9449553305….