
ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ ಹಾಗೂ ಈ ವರ್ಷ ಕಂಡುಬಂದಿರುವ ಪ್ರಕರಣಗಳಲ್ಲಿ ಅತ್ಯಂತ ಅಪಾಯಕಾರಿ ಡೆಂಗ್ಯೂ ಸೀರೋಟೈಪ್ 2 ಕಂಡುಬಂದಿರುವುದು ಆತಂಕಕಾರಿ ವಿಷಯವಾಗಿದೆ. ಈ ದಿಸೆಯಲ್ಲಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ” ಎಲ್ಲರ ಸಹಭಾಗಿತ್ವದಿಂದ ಡೆಂಗಿಯನ್ನು ಸೋಲಿಸೋಣ” ಎಂಬ ಘೋಷಣೆಯೊಂದಿಗೆ ಜನಜಾಗೃತಿಗಾಗಿ ಡೆಂಗೀ ರಥ ಸಿದ್ದಪಡಿಸಿದ್ದು ಇದು ಜಿಲ್ಲಾದಾದ್ಯಂತ ಸಂಚರಿಸಲಿದೆ. ತೀರ್ಥಹಳ್ಳಿ ತಾಲ್ಲೂಕಿನ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲೂ ಎರಡು ದಿನಗಳ ಕಾಲ ಇದು ಸಂಚರಿಸಲಿದೆ. ಸಾರ್ವಜನಿಕರಿಗೆ ಡೆಂಗ್ಯೂ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇದರಿಂದ ಸಹಕಾರಿಯಾಗಲಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಟರಾಜ್ ನುಡಿದರು.ಅವರು ಶುಕ್ರವಾರ ತೀರ್ಥಹಳ್ಳಿಗೆ ಆಗಮಿಸಿದ ಡೆಂಗ್ಯೂ ರಥವನ್ನು ಸ್ವಾಗತಿಸಿ ಮಾತನಾಡಿದರು.
ಮುಂದುವರೆದು, ನಿಂತ ನೀರು ಸೊಳ್ಳೆಗಳ ಉತ್ಪತ್ತಿಗೆ ಮೂಲ.ಸಾರ್ವಜನಿಕರು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ತಮ್ಮ ಮನೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಬಗ್ಗೆ ಆಧ್ಯತೆ ನೀಡಬೇಕು.ಸೊಳ್ಳೆ ಉತ್ಪತ್ತಿಯಾಗದಂತೆ ಹಾಗೂ ಸೊಳ್ಳೆಗಳ ಕಡಿತಕ್ಕೆ ಈಡಾಗದಂತೆ ನೋಡಿಕೊಳ್ಳುವುದು ಡೆಂಗ್ಯೂ ರೋಗ ನಿಯಂತ್ರಣದಲ್ಲಿ ಅತ್ಯಂತ ಪರಿಣಾಮಕಾರಿ ಮಾರ್ಗ. ಈ ದಿಸೆಯಲ್ಲಿ ಆರೋಗ್ಯ ಇಲಾಖೆಯ ಸಲಹೆಗಳನ್ನು ಪಾಲಿಸುವ ಮೂಲಕ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.
ರೋಗ ಪೀಡಿತರಿಗೆ ತಾಲ್ಲೂಕಿನ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲೂ ಸೂಕ್ತ ಚಿಕಿತ್ಸೆ ಲಭ್ಯವಿದ್ದು ಜ್ವರ ಪೀಡಿತರು ವಿಳಂಬ ಮಾಡದೆ ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆದುಕೊಳ್ಳುವಂತೆ ತಿಳಿಸಿದರು.
ತಾಲ್ಲೂಕಿನ ವಿವಿಧ ಸಂಸ್ಥೆಗಳ ವೈದ್ಯಾಧಿಕಾರಿಗಳು , ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಇದ್ದರು.