
ಶಿವಮೊಗ್ಗ : ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಪರಾಜಿತರಾಗಿದ್ದ ನಾಗರಾಜ್ ಗೌಡ ತವರು ಪಕ್ಷಕ್ಕೆ ಮರಳಿದ್ದಾರೆ.
ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್ ಸುಂದರೇಶ್ ನೇತೃತ್ವದ ಕಾರ್ಯಕ್ರಮದಲ್ಲಿ ನಾಗರಾಜ್ ಗೌಡರವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನವನ್ನು ಸ್ವೀಕರಿಸಿದರು.
ಕಳೆದ ವಿಧಾನ ಸಭಾ ಚುನಾಯಲ್ಲಿ ಶಿಕಾರಿಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಕೊನೆ ಕ್ಷಣದ ಬದಲಾವಣೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಗೋಣಿ ಮಾಲತೇಶ್ ರವರಿಗೆ ಮಣೆ ಹಾಕಿ ಪಕ್ಷದ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತು.
ಪರಿಣಾಮ ನಾಗರಾಜ್ ಗೌಡರು ಬೆಂಬಲಿಗರ ಒತ್ತಾಸೆಯಂತೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 70000ಕ್ಕೂ ಹೆಚ್ಚು ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಬಿ.ವೈ ವಿಜಯೇಂದ್ರರವರಿಗೆ ಪ್ರತಿಸ್ಪರ್ಧಿಯಾಗಿ ಗಮನ ಸೆಳೆದಿದ್ದರು.
ಚುನಾವಣ ಫಲಿತಾಂಶ ನಾಗರಾಜ್ ಗೌಡರನ್ನು ದ್ವಿತೀಯ ಸ್ಥಾನಕ್ಕೆ ತಂದರೂ ಇವರಿಗೆ ಸಿಕ್ಕ ಜನ ಬೆಂಬಲ ನೋಡಿ ಕಾಂಗ್ರೆಸ್ ಪಕ್ಷ ಕೈ ಹಿಸುಕಿಕೊಂಡಿತ್ತು.
ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ತೊರೆದ ಹೋದವರೆಲ್ಲಾ ಘರ್ ವಾಪಸಿ ಯೋಜನೆಯಲ್ಲಿ ಪಕ್ಷಕ್ಕೆ ಮರಳಿ ಬರಲು ಆರಂಭಿಸಿದ್ದಾರೆ ಅದರ ಭಾಗವಾಗಿ ಜಿಲ್ಲೆಯಲ್ಲಿ ನಾಗರಾಜ್ ಗೌಡ ಮತ್ತು ಟೀಮ್ ಜೊತೆಗೆ ಹೊಸ ಸೇರ್ಪಡೆಯಾಗಿ ಆಯನೂರು ಮಂಜುನಾಥ್ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ.

ಇಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಮಾತನಾಡಿದ ನಾಗರಾಜ್ ಗೌಡರವರು
ಜಿಲ್ಲಾಧ್ಯಕ್ಷ ಹೆಚ್.ಎಸ್ ಸುಂದರೇಶ್ ರವರ ಸಹಕಾರದಿಂದ ಆಗಸ್ಟ್ 24ರಂದು ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಗು ಜಿಲ್ಲಾ ಮಂತ್ರಿಗಳಾದ ಮಧು ಬಂಗಾರಪ್ಪರವರ ಸಮ್ಮುಖದಲ್ಲಿ ನಾನು ಮರಳಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆ.
ನನ್ನ ಪಕ್ಷ ಸೇರ್ಪಡೆಗೆ ಸಹಕರಿಸಿದ ಜಿಲ್ಲೆಯ ಶಾಸಕರುಗಳಿಗೆ, ಮಾಜಿ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಹಾಗು ಆರ್.ಪ್ರಸನ್ನ ಕುಮಾರ್ ರವರಿಗೆ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಿಗೆ ಧನ್ಯವಾದ ತಿಳಿಸಿ ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ವರದಿ – ವಿನಯ್ ಕುಮಾರ್ ಹೆಚ್.ಎಮ್