
ಶಿವಮೊಗ್ಗ,:ರಾಜ್ಯ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಶಿವಮೊಗ್ಗಜಿಲ್ಲಾ ಉಸ್ತುವಾರಿ ಸಚಿವ ಮಧುಎಸ್.ಬಂಗಾರಪ್ಪ ಅವರ
ಅಧ್ಯಕ್ಷತೆಯಲ್ಲಿ ಸೆ.25 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರ ಕುಂದು-ಕೊರತೆ ಆಲಿಸುವ ಪ್ರಥಮ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಮ್ಮ ಸಮಸ್ಯೆಗೆ ಪರಿಹಾರ ಕಾಣಲು ಸಾರ್ವಜನಿಕರು ಮುಖ್ಯಮಂತ್ರಿ, ಸಚಿವರ ಭೇಟಿಗೆ ಬೆಂಗಳೂರು ಹೋಗುವುದನ್ನು ತಪ್ಪಿಸಿ ಜಿಲ್ಲಾ ಹಂತದಲ್ಲಿಯೇ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಿದ್ದು, ಸಚಿವ ಮಧು ಎಸ್. ಬಂಗಾರಪ್ಪ ಅವರು ಜಿಲ್ಲೆಯ ಜನರ ಸಮಸ್ಯೆ ಆಲಿಸಿ, ಅವರ ಅಹವಾಲುಗಳನ್ನು ಸ್ವೀಕರಿಸಿದ ನಂತರ ಕೆಲವು ಅರ್ಜಿಗಳಿಗೆ ಸ್ಥಳೀಯವಾಗಿ ಹಾಗೂ ಇನ್ನೂ ಕೆಲವು ಅರ್ಜಿಗಳನ್ನು ನಿಯಮಾನುಸಾರ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಪಂಚ ಗ್ಯಾರಂಟಿಯಲ್ಲಿ 4 ಗ್ಯಾರಂಟಿಗಲನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿರುವ ರಾಜ್ಯ ಸರ್ಕಾರ, ಇದೀಗ ಜನರ ಬಳಿಗೆ ಧಾವಿಸಿ ಅವರ ದೂರು, ದುಮ್ಮಾನುಗಳಿಗೆ ಕಿವಿಯಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.
ಮಲೆನಾಡಿನ ಹೆಬ್ಬಾಗಿಲು ಎನಿಸಿರುವ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ
“ಜನತಾ ದರ್ಶನ”ದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ತಮ್ಮ ಅಹವಾಲುಗಳಿಗೆ ಆಗಮಿಸಿದ್ದ
ಸಹಸ್ರಾರು ಸಂಖ್ಯೆಯ ಜನರು ಸಚಿವರಿಗೆ ಮನವಿ ಸಲ್ಲಿಸಿದರು.
ಮನವಿ ನೀಡಲು ಬಂದವರಿಗಾಗಿ
ಸೂಕ್ತ ಆಸನ, ಕುಡಿಯುವ ನೀರು, ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ನೆರಳಿಗಾಗಿ ಟೆಂಟ್, ವಾಹನಗಳ ವ್ಯವಸ್ಥಿತ ನಿರ್ವಹಣೆಗಾಗಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಾರ್ವಜನಿಕರಿಗೆ ಸರ್ಕಾರದ ವಿವಿಧ ಜನಪರ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಆಹಾರ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ತೋಟಗಾರಿಕೆ, ಕಾರ್ಮಿಕ, ಕಂದಾಯ ಹೀಗೆ ಪ್ರಮುಖ 15ಕ್ಕೂ ಹೆಚ್ಚು ಇಲಾಖೆಯ ಮಳಿಗೆಗಳನ್ನು ಹಾಕಲಾಗಿತ್ತು.
ಬಗರ್ ಹುಕುಂ ಹಕ್ಕುಪತ್ರ, ಖಾತೆ ಪೋಡಿ, ಬೀದಿಬದಿಯ ವ್ಯಾಪಾರಕ್ಕೆ ಸಾಲಸೌಲಭ್ಯ,
ಪಡಿತರ ಚೀಟಿ ತಿದ್ದುಪಡಿ, ಆಧಾರ್, ಕೆ.ವೈ.ಸಿ., ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಸಾರಿಗೆ, ಹಾಸ್ಟೆಲ್ ಸೇರಿದಂತೆ ಇನ್ನಿತರ ಯೋಜನೆಗಳ ಸಮಸ್ಯೆಗಳ ಕುರಿತು ಅರ್ಜಿಗಳು ಸಲ್ಲಿಕೆಯಾದವು.
ವಿವಿಧ ಇಲಾಖೆಗಳ
ಜಿಲ್ಲಾ ಮಟ್ಟದ ಅಧಿಕಾರಿ-
ಸಿಬ್ಬಂದಿಗಳು ಸ್ಥಳದಲ್ಲಿ ಇದ್ದು, ಕುಂದುಕೊರತೆ ಅರ್ಜಿ ಸ್ವೀಕರಿಸಿದರು. ಅದಕ್ಕಾಗಿ ಸಭಾಂಗಣದ ಆವರಣದಲ್ಲಿ 10-15 ಕೌಂಟರ್ ತೆರೆಯಲಾಗುತ್ತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್, ಅರಣ್ಯಾಧಿಕಾರಿ ಶಿವಶಂಕರ್ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.