
ಉಪಾದ್ಯಾಯ ಡಾಕ್ಟ್ರು ಕೇವಲ ಹಣದ ಹಿಂದೆ ಹೋಗಿದ್ದರೆ ಪ್ರಾಯಶಃ ನಾವ್ಯಾರೂ ಇಲ್ಲಿ ಅವರನ್ನು ಹುಡುಕಿಕೊಂಡು ಬಂದು ಶುಭ ಹಾರೈಸುವ ಸಂದರ್ಭವೇ ಬರುತ್ತಿರಲಿಲ್ಲ. ಅವರು ಹಣದ ಹಿಂದೆ ಹೋಗದೆ ಮಾನವೀಯತೆ ಜನಪರ ಕಾಳಜಿಗಳಿಗೆ ಆಧ್ಯತೆ ನೀಡಿದ್ದರಿಂದ ನಿವೃತ್ತಿ ಹೊಂದಿ ಎರಡು ದಶಕಗಳಿಗೂ ಮಿಗಿಲಾಗಿದ್ದರೂ ಸಹೋದ್ಯೋಗಿಗಳು, ಜನರ ಮನದಲ್ಲಿ ಇಂದಿಗೂ ಗೌರವಾನ್ವಿತ ಸ್ಥಾನ ಪಡೆದಿದ್ದಾರೆ. ಹಣದ ಹಿಂದೆ ಹೋದವರು ಹಣವನ್ನಷ್ಟೇ ಗಳಿಸಬಹುದು ಜನರನ್ನಲ್ಲ ಎಂದು ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಟಿ ವಿ ಸತೀಶ ನುಡಿದರು. ಅವರು ತಾಲ್ಲೂಕಿನ ಪ್ರಥಮ ತಾಲ್ಲೂಕು ವೈದ್ಯಾಧಿಕಾರಿಗಳಾಗಿ, ಜೆ ಸಿ ಆಸ್ಪತ್ರೆಯ ಕೀಲು ಮತ್ತು ಮೂಳೆ ತಜ್ಞ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ಅಪಾರ ಜನ ಮನ್ನಣೆ ಗಳಿಸಿ, ವಯೋ ನಿವೃತ್ತಿಯ ನಂತರವೂ ಅಗತ್ಯ ಉಳ್ಳವರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿರುವ ತಾಲ್ಲೂಕಿನ ಹಿರಿಯ ಜನಪ್ರಿಯ ವೈದ್ಯರಾದ ಡಾ.ಪಿ ಎಸ್ ಉಪಾಧ್ಯಾಯರ 79 ನೇ ಜನ್ಮ ದಿನದಂದು ಡಾ.ಉಪಾಧ್ಯಾಯ ದಂಪತಿಗಳನ್ನು ಅವರ ಸ್ವಗೃಹದಲ್ಲಿ ಗೌರವಿಸಿ ಮಾತನಾಡಿದರು.
ತಮ್ಮ ವೃತ್ತಿ ಬದುಕಿನ ವಿವಿಧ ನೆನಪುಗಳನ್ನು ಮೆಲುಕು ಹಾಕಿದ ಡಾ.ಉಪಾಧ್ಯಾಯರು ಎಲ್ಲರ ಆತ್ಮೀಯತೆ, ಪ್ರೀತಿ ವಿಶ್ವಾಸ,ಶುಭ ಹಾರೈಕೆಗಳು ಬದುಕಿನ ಖುಷಿ ಹೆಚ್ಚಿಸಿವೆ. ಬದುಕಿನ ಗಳಿಕೆ ಎಂದರೆ ಇದೇ ಎಂಬ ಭಾವ ತುಂಬಿದೆ. ನನ್ನ ಬಗ್ಗೆ ವಿಶೇಷ ಅಭಿಮಾನ ಪ್ರೀತಿ ತೋರಿದ ತಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ತಾಲ್ಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ರಾಮು, ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಖಜಾಂಚಿ ರಾಘವೇಂದ್ರ, ಪದಾಧಿಕಾರಿಗಳಾದ ಪ್ರಮೀಳ,ತನುಜಾ, ಶೈಲಜಾ ಶೆಟ್ಟಿ, ರಾಜಪ್ಪ, ರಾಜೇಶ್,ಗಿರಿ ಡಿ ಟಿ, ಜೆ ಸಿ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ರಾಮಕೃಷ್ಣ, ನಿವೃತ್ತ ನೌಕರರಾದ ಡಿ ಸಿ ಶಿವಶಂಕರ್, ಕಾಡಪ್ಪ ಗೌಡ,ವಿದ್ಯಾರ್ಥಿ ಅಂಶುಮತ್ ಶೆಟ್ಟಿ ಮತ್ತಿತರಿದ್ದರು.