

ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವರು ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್ ಅವರು ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಹಾಗೂ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ವಿವರವಾಗಿ ತಿಳಿಸಿದರು.
2020 ರಲ್ಲಿ ಕರ್ನಾಟಕದಲ್ಲಿ ಬಿ.ಜೆ.ಪಿ. ನೇತೃತ್ವದ ಸರ್ಕಾರ ಇದ್ದಾಗ ನೆರೆ ಹಾವಳಿಯಿಂದಾಗಿ 34 ಸಾವಿರ ಕೋಟಿ ರೂಪಾಯಿಗಳಷ್ಟು ನಷ್ಟ ಉಂಟಾಗಿತ್ತು. ಆಗ ರಾಜ್ಯದ ಜನ ಮನೆ, ಮಾರು, ಜಾನುವಾರು, ಆಸ್ತಿ ಪಾಸ್ತಿ ಕಳೆದುಕೊಂಡು ಬಹಳಷ್ಟು ನಷ್ಟ ಅನುಭವಿಸಿದ್ದರು. ಆಗ ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ.
ಈಗ 2023-24 ರಲ್ಲಿ ಬರಗಾಲ ಬಂದು ಜನ ಜಾನುವಾರು, ಪ್ರಾಣಿ ಪಕ್ಷಿಗಳು ಹನಿ ನೀರಿಗಾಗಿ ಪರದಾಡುತ್ತಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಜನರ ಕಷ್ಟ ನಷ್ಟಗಳನ್ನು ನೋಡಿ ಕೇಂದ್ರ ಸರ್ಕಾರ ಹಣ ನೀಡಿದರೆ ಬಿ.ಜೆ.ಪಿ.ಗೆ ಮತವಾಗುವುದಿಲ್ಲವೆಂದು ಭಾವಿಸಿ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ.
ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಬರಬೇಕಾದ ಹಣ 1 ಲಕ್ಷ 87 ಸಾವಿರ ಕೋಟಿ ರೂಪಾಯಿಗಳನ್ನು ನೀಡದೆ, ಬಾಕಿ ಉಳಿಸಿಕೊಂಡಿದೆ.ಕಾಂಗ್ರೆಸ್ ಸರ್ಕಾರ ಮನವಿ ಮಾಡಿದರೂ ಸ್ಪಂದಿಸಲಿಲ್ಲ. ಹಾಗಾಗಿ ರಾಜ್ಯದ ರೈತರ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರ ಅನಿವಾರ್ಯವಾಗಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ ಪರಿಹಾರ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಬರ ಬಂದಾಗ ಬರದ ಮೋದಿ ಚುನಾವಣೆಗಾಗಿ ಬರುತ್ತಿದ್ದಾರೆ :
2023-24 ಸೆಪ್ಟೆಂಬರ್ ನಿಂದ ಬರಗಾಲ ಬಂದಿದೆ. ರಾಜ್ಯ ಸರ್ಕಾರ ಬರಗಾಲದ ಅಂದಾಜು ವೆಚ್ಚದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ. ಅಂತೆಯೇ ಕೇಂದ್ರ ತಂಡ ಪರಿಶೀಲನೆ ನಡೆಸಿ ವರದಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಆರ್ಥಿಕ ನೆರವು ಕೋರಿದ್ದರು.ಆದರೆ ಮನವಿಗೆ ಸ್ಪಂದಿಸಿದ ಮೋದಿಯವರು ನೆರೆಹಾವಳಿ ಮತ್ತು ಬರಗಾಲದ ವೇಳೆ ರಾಜ್ಯಕ್ಕೆ ಭೇಟಿ ನೀಡದೇ ಈಗ ಚುನಾವಣೆಗೆ ಬಂದಿದ್ದಾರೆ ಎಂದು ಟೀಕಿಸಿದರು.
27 ಜನ ರಾಜ್ಯದ ಸಂಸದರು ಸುಮ್ಮನಿರಲು ಕಾರಣವೇನು..?!
ಬಿ.ಜೆ.ಪಿ ಮತ್ತು ಎನ್.ಡಿ.ಎ. ಬೆಂಬಲಿತ 27 ಜನ ನಮ್ಮ ಸಂಸದರು ಬರಪರಿಹಾರ,ನೆರಹಾವಳಿ ಸಮಸ್ಯೆಗಳಿಗೆ ಸಂಸತ್ ನಲ್ಲಿ ಪ್ರಶ್ನೆ ಮಾಡದೆ, ರಾಜ್ಯಕ್ಕೆ ಆರ್ಥಿಕ ನೆರವು ಕೇಳಿಲ್ಲ. ಅದರಲ್ಲಿ ನಾಲ್ಕು ಜನ ಕರ್ನಾಟಕದ ಕೇಂದ್ರ ಸಚಿವರು ಸೇರಿದ್ದಾರೆ. ಇವರುಗಳು ಈಗ ಮತಯಾಚಿಸಲು ಜನರ ಮುಂದೆ ಬಂದಿದ್ದಾರೆ. ಈಗ ಕರ್ನಾಟಕದ ಮತದಾರರು ಬಿ.ಜೆ.ಪಿ. ಮತ್ತು ಎನ್.ಡಿ.ಎಗೆ ಬೆಂಬಲಿಸುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.
ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ಅತಿದೊಡ್ಡ ರಾಜ್ಯ ಕರ್ನಾಟಕ :
ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯ 2ನೇ ಸ್ಥಾನವನ್ನು ಹೊಂದಿದೆ. ಕೇಂದ್ರಕ್ಕೆ ನಾವು ರೂ.100 ತೆರಿಗೆ ಕೊಟ್ಟರೆ, ನಮಗೆ ಕೇಂದ್ರ ಸರ್ಕಾರ ಹಿಂದಿರುಗಿಸಿ ಕೊಡುವುದು ರೂ.13.9ಪೈಸೆ.ಅದೇ ಉತ್ತರಪ್ರದೇಶ ಸರ್ಕಾರ ಪಾವತಿಸುವ ತೆರಿಗೆ ಹಣ ರೂ.2 ಲಕ್ಷ ಕೋಟಿ, ಉತ್ತರಪ್ರದೇಶಕ್ಕೆ ಸಿಗುವ ಹಣ ರೂ.2ಲಕ್ಷ 18 ಸಾವಿರ ಕೋಟಿ. ಕೇಂದ್ರಕ್ಕೆ ಉತ್ತರಪ್ರದೇಶ ರೂ.100 ತೆರಿಗೆ ಕೊಟ್ಟರೆ, ಮರಳಿ ಉತ್ತರಪ್ರದೇಶ ಪಡೆಯುವುದು ರೂ.333.2ಪೈಸೆ ಎಂದು ಅಂಕಿಅಂಶ ಸಮೇತ ವಿವರ ನೀಡಿದರು.
ಮೋದಿ ಮತ್ತು ಬಿಜೆಪಿ ಪಕ್ಷ ಸದಾ ಜಾತಿ ಧರ್ಮದ ಬಗ್ಗೆ ಮಾತನಾಡುತ್ತಾರೆ :
ಪ್ರಧಾನಮಂತ್ರಿ ಮೋದಿ ಮತ್ತು ಬಿ.ಜೆ.ಪಿ. ಮುಖಂಡರುಗಳು ಸದಾ ಜಾತಿ, ಧರ್ಮ, ಅಲ್ಪಸಂಖ್ಯಾತ ಧರ್ಮದ ವಿಷಯಗಳನ್ನು ಮುನ್ನೆಲಗೆ ತಂದು ಬಹುಸಂಖ್ಯಾತರ ಮತ ಗಳಿಸುವ ಮೂಲಕ ಅಧಿಕಾರ ಮತ್ತು ಹಣ ಮಾಡುವ ಕಲ್ಪನೆಯೊಂದಿಗೆ ದೇಶದಲ್ಲಿ ಶಾಂತಿ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಅವರುಗಳು ಯಾವಾಗಲೂ ಶ್ರೀಮಂತರ ಮತ್ತು ಶ್ರೀಮಂತ ಉದ್ಯಮಿಗಳ ಪರವಾದ ಆರ್ಥಿಕ ನಿಲುವುಗಳನ್ನು ತೆಗೆದುಕೊಂಡು, ಬಡವರ, ಬಡತನ, ನಿರ್ಗತಿಕರ ವಿರುದ್ಧವಾದ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದರು.
ಗೀತಾ ಗೆಲುವು ಖಚಿತ ಎಂದ ಕಿಮ್ಮನೆ:
ಕಳೆದ ಹಲವು ಚುನಾವಣೆಗಳಲ್ಲಿ ಬಂಗಾರಪ್ಪ ಮತ್ತು ರಾಜ್ ಕುಮಾರ್ ಕುಟುಂಬಕ್ಕೆ ಅನ್ಯಾಯವಾಗಿದೆ.ಇದು ಜನರ ಮನಸ್ಸಿನಲ್ಲಿದೆ.ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಗೆಲುವು ಸಾಧಿಸುವುದು ಖಚಿತ ಎಂದರು.
ಗ್ಯಾರೆಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ಕೈಹಿಡಿಯಲಿವೆ :
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದ ಐದು ಗ್ಯಾರಂಟಿಗಳನ್ನು ಅನುಷ್ಟಾನ ಮಾಡಿದೆ. ರಾಜ್ಯದ ಅಭಿವೃದ್ಧಿಗೆ ತೊಂದರೆ ಆಗದಂತೆ ನೋಡಿಕೊಂಡಿದ್ದಾರೆ.ಗ್ಯಾರಂಟಿ ಯೋಜನೆಗಳು ನಮ್ಮ ಕೈ ಹಿಡಿಯಲಿವೆ.ಆಂತರಿಕ ಸರ್ವೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತವಾಗಿದೆ.ಪ್ರತಿಯೊಬ್ಬರು ಕಾಂಗ್ರೆಸ್ ಪಕ್ಷದ ಪರವಾಗಿ ಮತ ನೀಡುವಂತೆ ಕಿಮ್ಮನೆ ರತ್ನಾಕರ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಮುಖಂಡರಾದ ಎನ್.ರಮೇಶ್,ಜಿ.ಡಿ ಮಂಜುನಾಥ್, ಶಿವಾನಂದ್, ಜಿತೇಂದ್ರ ಗೌಡ, ಚಂದ್ರಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.