
ತೀರ್ಥಹಳ್ಳಿ : ತಾಲೂಕು ವ್ಯಾಪ್ತಿಯಲ್ಲಿ ಸುರಿದ ಅತೀ ಹೆಚ್ಚು ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಈ ಹಿನ್ನಲೆಯಲ್ಲಿ ಪಟ್ಟಣದ ತುಂಗಾ ಕಾಲೋನಿ ನಿವಾಸಿಗಳನ್ನು ಸುರಕ್ಷತೆ ಹಾಗೂ ಮುನ್ನೆಚ್ಚರಿಕೆ ದೃಷ್ಠಿಯಿಂದ ಪಟ್ಟಣದ ಕೆ.ಟಿ.ಕೆ ಕಲ್ಯಾಣ ಮಂಟಪದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.
ನಿರಾಶ್ರಿತರ ಪೈಕಿ ಓರ್ವ ಗರ್ಭಿಣಿ ಮಹಿಳೆ ದಿನಾಂಕ 01.08.2024 ರಂದು ಪ್ರಸೂತಿ ನೋವಿನಿಂದ ಬಳಲುವಾಗ ಸಕಾಲದಲ್ಲಿ ಅಂಬ್ಯುಲೆನ್ಸ್ ಸ್ಥಳಕ್ಕೆ ಬಾರದ ಸಂದರ್ಭದಲ್ಲಿ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ಅಧಿಕಾರಿ ಸುಧೀರ್ ಬಿ.ವಿ ಅವರು ಪರಿಸ್ಥಿತಿ ಗಂಭೀರತೆಯನ್ನು ಅರಿತು ತಮ್ಮ ಖಾಸಗಿ ವಾಹನದಲ್ಲಿ ಅವರನ್ನು ಕೊಂಡೊಯ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಇದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
ಈ ಸುದ್ದಿಯನ್ನು ನೋಡಿದ ಜಿಲ್ಲಾಧಿಕಾರಿ ಡಾ/ ಗುರುದತ್ತ ಹೆಗಡೆ ಯವರು ಇವರ ಕರ್ತವ್ಯ ಪ್ರಜ್ಞೆ ಹಾಗೂ ಸಮಯ ಪ್ರಜ್ಞೆಯನ್ನು ಗುರುತಿಸಿ ಪ್ರಶಂಸೆ ಪತ್ರ ಜೊತೆಗೆ ಸನ್ಮಾನಿಸಿದ್ದಾರೆ.
ನಿಮ್ಮ ಸಮಯ ಪ್ರಜ್ಞೆ, ಸಾಮಾಜಿಕ ಕಾಳಜಿ ಹಾಗೂ ಕರ್ತವ್ಯ ನಿಷ್ಠೆಯನ್ನು ಈ ಮೂಲಕ ಶಿವಮೊಗ್ಗ ಜಿಲ್ಲಾಡಳಿತ ಪ್ರಶಂಸಿಸುತ್ತದೆ. ನಿಮ್ಮ ಈ ಸೇವಾ ಮನೋಭಾವನೆ ಇದೇ ರೀತಿ ಮುಂದುವರೆಯಲಿ ಎಂದು ಆಶಿಸುತ್ತೇವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕಂದಾಯ ಅಧಿಕಾರಿಗಳಾದ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರು ಸುಧೀರ್ ಬಿ. ವಿ, ಗ್ರಾಮ ಲೆಕ್ಕಾಧಿಕಾರಿಗಳಾದ ಆರ್ ಮೌನೇಶ್ ಹಾಗೂ ಬಿ ಲೋಕೇಶ್ ರವರನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಅನೇಕ ಅದಿಕಾರಿಗಳು ಉಪಸ್ಥಿತರಿದ್ದರು.