
ಶಿವಮೊಗ್ಗ: ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರಜಾಪ್ರಭುತ್ವ ದಲ್ಲಿರುವ ಎಲ್ಲರೂ ಸೇರಿ ಹೆಮ್ಮೆಯಿಂದ ಹಬ್ಬದ ರೀತಿಯಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸೋಣ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಮಧು ಬಂಗಾರಪ್ಪ ಕರೆ ನೀಡಿದರು.
ಶಂಕರ ಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ ಸೆ.15 ರಂದು ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಮಾನವ ಸರಪಳಿ ನಿರ್ಮಿಸಲಾಗುವುದು. ಜಿಲ್ಲೆಗೆ ಮಾರ್ಗನಕ್ಷೆ ನೀಡಲಾಗಿದ್ದು ಅದರಂತೆ ಭದ್ರಾವತಿ ತಾಲ್ಲೂಕು ಕಾರೇಹಳ್ಳಿಯಿಂದ ಶಿವಮೊಗ್ಗ ತಾಲ್ಲೀಕಿನ ಮಡಿಕೆಚೀಲೂರುವರೆಗೆ ಮಾನವ ಸರಪಳಿ ನಿರ್ಮಿಸಲಾಗುವುದು.
ಮಾನವ ಸರಪಳಿ ನಿರ್ಮಿಸಲು ೫೦ ಸಾವಿರ ಜನರ ಅಗತ್ಯವಿದ್ದು ವಿದ್ಯಾರ್ಥಿಗಳನ್ನು ಸಹ ತೊಡಗಿಸಿಕೊಳ್ಳಲಾಗುವುದು.
ತಹಶಿಲ್ದಾರರ, ಇಓ ಸಿಡಿಪಿಒ ಗಳು ಸೇರಿದಂತೆ ಎಲ್ಲ ಇಲಾಖೆಯವರನ್ನು ಒಳಗೊಂಡು ಯೋಜಿಸಿ,
ಸಂಘ ಸಂಸ್ಥೆಗಳ ಸಭೆ ಕರೆದು ಸಹಯೋಗ ಕೋರಲಾಗುವುದು ಎಂದರು.
ಜಿ.ಪಂ. ಸಿಇಓ ಎನ್.ಹೇಮಂತ್ ಮಾತನಾಡಿ, ಎಸ್ ಎ ಜಿ ಗುಂಪಿನ ಮಹಿಳೆಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾ.ಪಂ ವಿಶೇಷ ಗ್ರಾಮ ಸಭೆ ಮಾಡಿ ಜನರನ್ನು ಕರೆ ತರಲಾಗುವುದು ಎಂದರು.
ಉಸ್ತುವಾರಿ ಸಚಿವರು ಮಾತನಾಡಿ, ೫೦ ಲಕ್ಷ ಜನ ಮಾನವ ಸರಪಳಿ ಮಾಡುತ್ತಾರೆ. ಶಿಷ್ಟಾಚಾರದಂತೆ ರಾಷ್ಟಗೀತೆ ಗಾಯನ, ಸಂವಿಧಾನ ಪೀಠಿಕೆ ಪಠನ ಮಾಡಲಾಗುವುದು.
ಹಾಗೂ ಕಾಡನ್ನು ಬೆಳೆಸುವ ಉದ್ದೇಶದಿಂದ ದಿನಾಚರಣೆ ಅಂಗವಾಗಿ ಮಕ್ಕಳು, ಸಾರ್ವಜನಿಕರು ಎಲ್ಲರೂ ಸೇರಿ ಗಿಡಗಳನ್ನು ನೆಡುವ ಕೆಲಸ ಮಾಡಲಾಗುವುದು. ಅಗತ್ಯ ವಾದ ಸಸಿಗಳನ್ನು ನೀಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ ಅವರು ಗಿಡಗಳನ್ನು ರಕ್ಷಿಸುವ ಕೆಲಸವೂ ಆಗಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಶರತ್ ಅನಂತಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲೇಶಪ್ಪ, ಅಧಿಕಾರಿಗಳು, ವಿವಿಧ ಸಂಘಟನೆಗಳ ಮುಖಂಡರು, ಸಿಂಡಿಕೇಟ್ ಸದಸ್ಯರು ಹಾಜರಿದ್ದರು.
ಬದಲಾವಣೆಗಳೊಂದಿಗೆ ಕಸ್ತೂರಿ ರಂಗನ್ ವರದಿ ಜಾರಿಗೆ ಪ್ರಸ್ತಾವನೆ :
ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಟಾನ ಮಾಡಿದಲ್ಲಿ ಮಲೆನಾಡು ಜನ ಬದುಕುವುದು ಕಷ್ಟಸಾಧ್ಯವಾಗುತ್ತದೆ. ಆದ್ದರಿಂದ ಕೇರಳದಲ್ಲಿ ಮಾಡಿದಂತೆ ಕೆಲವು, ತಿದ್ದುಪಡಿ, ಬದಲಾವಣೆ ಮಾಡಿಕೊಂಡು ಜಾರಿಗೆ ತಂದರೆ ಒಳಿತು. ಶಿರೂರು ಭೂಕುಸಿತ ಇತರೆ ಪ್ರಕರಣದಿಂದ ವರದಿ ಜಾರಿ ತರಲು ಒತ್ತಡ ಹೆಚ್ಚಾಗುತ್ತಿದೆ. ಆದರೆ ನಾವು ಜನರಿಗೂ ಅನುಕೂಲ ಆಗಬೇಕು, ಕಸ್ತೂರಿ ರಂಗನ್ ವರದಿ ಜಾರಿಯಾಗಬೇಕು ಆ ರೀತಿಯಲ್ಲಿ ತಿದ್ದುಪಡಿ, ಬದಲಾವಣೆ ಮಾಡಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಕ್ಷಾತೀತವಾಗಿ ಎಲ್ಲರನ್ನು ಕರೆದು, ಅಭಿಪ್ರಾಯ ಸಂಗ್ರಹಿಸಲಾಗುವುದು. ರಾಜಕಾರಣ ದಿಂದ ಹೊರತುಪಡಿಸಿ ಈ ವಿಷಯವನ್ನು ನೋಡಿ ಎಚ್ಚರಿಕೆ ಯಿಂದ ಹೆಜ್ಜೆ ಇಡಬೇಕಿದೆ. ಭವಿಷ್ಯಃ ಸೆಪ್ಟೆಂಬರ್ ಅಂತ್ಯದೊಳಗೆ ಕೇಂದ್ರಕ್ಕೆ ವರದಿ ನೀಡಬೇಕಿದ್ದ. ಜೀವನೋಪಾಯ ಕಲ್ಪಿಸದಿದ್ದರೆ ಜನ ಏನು ಮಾಡುತ್ತಾರೆ. ಜನರಿಗೆ ಅನುಕೂಲ, ಪರಿಸರಕ್ಕೂ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು. ಕೆಲವು ತಿದ್ದುಪಡಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು.ಪರಿಸರ ಉಳಿದಿದ್ದರೆ ಅದು ರೈತರಿಂದ ಎಂದು ಮರೆಯಬಾರದು. ಅವರಿಗೂ ಬದಕಲು ಅನುಕೂಲ ಆಗಬೇಕು. ಅಗೂ ಇಂದು ಬೆಳೆಯುತ್ತಿರುವ ಕುವೆಂಪು ವಿಶ್ವವಿದ್ಯಾಲಯದ ಅಭಿವೃದ್ಧಿ ಬಗ್ಗೆ ಚರ್ಚಿಸಲಾಗುವುದು. ಪ್ರಗತಿ ಪರಿಶೀಲನೆ ನಡೆಸಿ ಲೋಪಗಳಿದ್ದರೆ ಸರಿಪಡಿಸಿ, ಉಳಿಸಿ, ಬೆಳೆಸಲಾಗುವುದು. ವಿಶ್ವವಿದ್ಯಾಲಯ ಜಿಲ್ಲೆಗೆ ಕಿರೀಟ ಇದ್ದಂತೆ ಇದ್ದು, ವಿವಿ ಯಲ್ಲಿನ ಪ್ರಸ್ತುತ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗುವುದು. ಲೋಪಗಳಿದ್ದರೆ ಸಂಬಂಧಿಸಿದವರ ವಿರುದ್ದ ವಿಚಾರಣೆ ಮಾಡಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ನಮ್ಮ ಶಾಲೆ ನಮ್ಮ ಜಬಾಬ್ದಾರಿ ಒಂದು ಅತ್ಯುತ್ತಮ ಕಾರ್ಯಕ್ರಮವಾಗಿದ್ದು, ೨೨ ಸಾವಿರ ವಿದ್ಯಾರ್ಥಿಗಳ ವಾಟ್ಸಪ್ ಗ್ರೂಪ್ ಮಾಡಲಾಗಿದೆ.೫೦ ಸಾವಿರ ಹಳೇ ವಿದ್ಯಾರ್ಥಿ ಸಂಘ ಇದೆ. ನಮ್ಮ ತಂದೆ ಓದಿದ ಶಾಲೆಗೆ ರೂ. ೧೦ ಲಕ್ಷ ನೀಡಿದ್ದೇನೆ. ಸಿಎಸ್ ಆರ್ ನಿಧಿ ಹೊರತುಪಡಿಸಿ, ಎಲ್ಲರೂ ತಾವು ಓದಿದ ಶಾಲೆ ಬಗ್ಗೆ ಒಂದು ಜವಾಬ್ದಾರಿ ತೆಗೆದುಕೊಂಡು ಅಭಿವೃದ್ದಿಗೆ ಸಹಕರಿಸಿದರೆ ಒಳಿತು.ಸರ್ಕಾರಿ ಶಾಲೆಗಳ ಅಭಿವೃದ್ದಿಗಸಗಿ ಸಿಎಸ್ ಆರ್ ನಿಧಿ ಮೂಲಕ ರೂ. ೨೫೦೦ ಕೋಟಿ ಸಂಗ್ರಹಿಸಲಾಗಿದೆ. ಇನ್ನು ಮುಂದೆ ವಾರದಲ್ಲಿ ಆರು ದಿನ ಮೊಟ್ಟೆ ನೀಡಲಾಗುವುದು.
ಜಿಲ್ಲೆಗಳಲ್ಲಿ ಶೈಕ್ಷಣಿಕ ಪ್ರಗತಿ ಪರಿಶೀಲಿಸಲು ಶಾಸಕರ ಅಧ್ಯಕ್ಷ ತೆಯಲ್ಲಿ ಶೈಕ್ಷಣಿಕ ಸಮಿತಿಗಳನ್ನುಆರಂಭಿಸಲಾಗುವುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆರ್ ಪ್ರಸನ್ನ ಕುಮಾರ್, ಮುಖಂಡರಾದ ಕಲಗೋಡು ರತ್ನಾಕರ, ರಮೇಶ್ ಶೆಟ್ಟಿ, ಶ್ರೀನಿವಾಸ ಕರಿಯಣ್ಣ, ಶಾಂತಕುಮಾರ್, ಮುಂತಾದವರು ಹಾಜರಿದ್ದರು.