
ಎಲ್ಲರಿಂದಲೂ ಮುಕ್ತ ಪ್ರಶಂಸೆಗೆ ಪಾತ್ರರಾಗುವುದು ಖಂಡಿತಾ ಸಾಮಾನ್ಯ ಸಂಗತಿಯಲ್ಲ. ಅದು ಅವರ ದೊಡ್ಡ ವ್ಯಕ್ತಿತ್ವಕ್ಕೆ ನಿದರ್ಶನ. ಹುದ್ದೆ ಯಾವುದೆಂಬುದು ಮುಖ್ಯವಲ್ಲ. ಅದನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದೇ ಮುಖ್ಯ.ತನ್ನ ಹುದ್ದೆಗಷ್ಟೇ ಸೀಮಿತವಾಗದೆ ಅದಕ್ಕಿಂತಲೂ ಹೆಚ್ಚಿನ ಜವಬ್ದಾರಿಯನ್ನು ಹೊತ್ತು ಅದನ್ನು ನಿಷ್ಕಳಂಕವಾಗಿ ನಿರ್ವಹಿಸಿ ಎಲ್ಲರ ಗೌರವಾಧರಗಳಿಗೆ ಪಾತ್ರರಾದ ಗಾಯತ್ರಿಯವರ ಕರ್ತವ್ಯನಿಷ್ಟೆ ಶ್ರದ್ದೆ ವಿಧೇಯತೆಗಳು ನಿಜಕ್ಕೂ ಮಾದರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ನುಡಿದರು.
ಅವರು ವಯೋ ನಿವೃತ್ತಿ ಹೊಂದಿದ ಬಿಇಓ ಕಚೇರಿಯ ಗುತ್ತಿಗೆ ನೌಕರರಾದ ಗಾಯತ್ರಿಯವರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ ಸಂಘದಿಂದ ನೀಡಿದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರನ್ನು ಗೌರವಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ಟಿ ವಿ ಮಾತನಾಡಿ ಎಷ್ಟಿದ್ದರೂ ಇನ್ನಷ್ಟು ಮತ್ತಷ್ಟು ಬೇಕೆನ್ನುವವರು, ಪರರಿಗೆ ಹೋಲಿಸಿಕೊಂಡು ಕೊರಗುವವರೇ ಹೆಚ್ಚಿರುವ ಸಮಾಜದಲ್ಲಿ ಬದುಕಿನಲ್ಲಿ ಅನಿರೀಕ್ಷಿವಾಗಿ ಎದುರಾದ ಆಘಾತಗಳು ಸಂಕಷ್ಟಗಳ ನಡುವೆ ಸಿಕ್ಕ ಪುಟ್ಟ ಹುದ್ದೆಯನ್ನೇ ಅತ್ಯಂತ ತಾಳ್ಮೆ ಶ್ರದ್ದೆಗಳಿಂದ ದೊಡ್ಡದಾಗಿ ನಿರ್ವಹಿಸಿದ ಗಾಯತ್ರಿಯವರ ಬದುಕು ನಿಜಕ್ಕೂ ಎಲ್ಲರಿಗೂ ಪ್ರೆರಣಾತ್ಮಕವಾದದ್ದು. ಇಂತವರು ಯಾವುದೇ ಸಂಸ್ಥೆ,ಕಚೇರಿಗೆ ಇಲಾಖೆಗೆ ಆಸ್ತಿ ಎನಿಸುವಂತವರು. ಇವರ ನಿವೃತ್ತಿಯ ಬದುಕು ಸದಾ ಆರೋಗ್ಯ ನೆಮ್ಮದಿಗಳಿಂದ ತುಂಬಿರಲಿ ಎಂದು ಶುಭ ಹಾರೈಸಿದರು.
ಶಿಕ್ಷಣ ಇಲಾಖಾ ಲಿಪಿಕ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಾದವ್ ಮಾತನಾಡಿ, ನಾನು ಇಲ್ಲಿ ಬಿಇಓ ಕಚೇರಿಯಲ್ಲಿ ಕರ್ತವ್ಯಕ್ಕೆ ಸೇರಿದಾಗ ಟೈಪಿಂಗ್ ಮತ್ತು ಕಂಪ್ಯೂಟರ್ ಬಳಕೆಯಲ್ಲಿ ಇವರಿಗಿದ್ದ ಜ್ಞಾನವನ್ನು ಗಮನಿಸಿ ಲಿಪಿಕ ನೌಕರರೆಂದೇ ಭಾವಿಸಿದ್ದೆ. ಇವರಿಂದ ಸಾಕಷ್ಟು ಕಚೇರಿ ಕೆಲಸಗಳ ನಿರ್ವಹಣೆ ಕಲಿತಿದ್ದೇನೆ. ಕನಿಷ್ಟ ವೇತನ ಪಡೆದರೂ, ಯಾವುದೇ ನಿವೃತ್ತಿ ಸೌಲಭ್ಯಗಳಿಲ್ಲದಿದ್ದರೂ, ಆ ಬಗ್ಗೆ ಯಾವ ದೂರು ದುಮ್ಮಾನಗಳಿಲ್ಲದೆ ಅತೀ ಹೆಚ್ಚಿನ ಕರ್ತವ್ಯ ನಿರ್ವಹಿಸಿದ್ದಾರೆ.ಇವರ ಸಹನೆ,ಪ್ರಾಮಾಣಿಕ ಕರ್ತವ್ಯನಿಷ್ಟೆ ಎಲ್ಲರಿಗೂ ಮಾದರಿ ಎಂದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಮು ವಿ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಗಿರಿರಾಜ್, ಡಿ ಡಿ ಪಿ ಐ ಕಚೇರಿಯ ಪ್ರ ದ ಸಹಾಯಕ ಸತ್ಯನಾಥ್,ನಿವೃತ್ತ ಮ್ಯಾನೇಜರ್ ವಸಂತ್, ಲಿಪಿಕ ನೌಕರರ ಸಂಘದ ಪದಾಧಿಕಾರಿಗಳಾದ ಅಕ್ಷಯ್, ಜ್ಯೋತಿ, ಮಮತ, ಮತ್ತಿತರರು ಮಾತನಾಡಿ ಗಾಯತ್ರಿಯವರ ಮೇರು ವ್ಯಕ್ತಿತ್ವವನ್ನು ಶ್ಲಾಘಿಸಿ ಶುಭಹಾರೈಸಿದರು.
ಗೌರವಾರ್ಪಣೆ ಸ್ವೀಕರಿಸಿ ಮಾತನಾಡಿದ ಗಾಯತ್ರಿಯವರು ನನ್ನ ಇಪ್ಪತ್ತೆಂಟು ವರ್ಷಗಳ ಸೇವಾವದಿಯಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ತೃಪ್ತಿ ಇದೆ. ಇದ್ದಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳಿಗೂ ತುಂಬು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಈ ಹಿಂದೆ ಇಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ಪ್ರಸ್ತುತ ಶಿವಮೊಗ್ಗ ಡಯಟ್ ನಲ್ಲಿ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಶಿಕಲಾ, ನಿವೃತ್ತ ಮ್ಯಾನೇಜರ್ ಸತೀಶ್ ಚಂದ್ರ, ನಿವೃತ್ತ ಡಿ ದರ್ಜೆ ಸಿಬ್ಬಂದಿ ಲಕ್ಷ್ಮಿ, ವರ್ಗಾವಣೆಗೊಂಡ ಇಸಿಓ ಮಂಜುನಾಥ, ದ್ವಿದ ಸಹಾಯಕ ಸುಮನ್ ರವರನ್ನು ಆತ್ಮೀಯವಾಗಿ ಗೌರವಿಸಲಾಯಿತು.
ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಸಿಬ್ಬಂದಿಗಳು, ನಿವೃತ್ತರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸುಭಾನಿ ಸ್ವಾಗತಿಸಿ, ಖಜಾಂಚಿ ಸುದರ್ಶನ್ ನಿರೂಪಿಸಿ, ಆದಿತ್ಯ ವಂದಿಸಿದರು.