ಸಿದ್ದಾಪುರ ಅಯ್ಯಪ್ಪ ಸ್ವಾಮಿ ಜಾತ್ರಾ ಮಹೋತ್ಸವ – ಭಕ್ತರ ಮೇಲೆ ಹರಿದ ಕಾರು – ಓರ್ವ ಯುವತಿ ಸಾವು 08 ಭಕ್ತರಿಗೆ ಗಂಭೀರ ಗಾಯ –
ಕಾರು ಚಾಲಕನನ್ನು ಬಂಧಿಸಿದ ಸಿದ್ದಾಪುರ ಪೊಲೀಸರು ಉತ್ತರ ಕನ್ನಡ, ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿಕೊಂಡು ಬಂದು ಜಾತ್ರಗೆ ನುಗ್ಗಿಸಿದ್ದಾನೆ.
ಪರಿಣಾಮ ಕಾರು ಭಕ್ತರ ಮೇಲೆ ಹರಿದಿದ್ದು, ಓರ್ವ ಯುವತಿ ಸಾವನ್ನಪ್ಪಿದ್ದಾಳೆ. ಇನ್ನು ಎಂಟು ಜನರಿಗೆ ಗಂಭೀರ ಗಾಯಗಳಾಗಿವೆ.
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಅಯ್ಯಪ್ಪ ದೇಗುಲದ ಬಳಿ ಈ ದುರ್ಘಟನೆ ಸಂಭವಿಸಿದೆ. ಸಿದ್ದಾಪುರದ ಕವಲಕೊಪ್ಪ ನಿವಾಸಿ ದೀಪಾ ರಾಮಗೊಂಡ(21) ಮೃತ ಯುವತಿ. ಕಲ್ಪನಾ, ಜಾನಕಿ, ಚೈತ್ರಾ, ಜ್ಯೋತಿ, ಮಾದೇವಿ, ಗೌರಿ, ರಾಮಪ್ಪ, ಗಜಾನನ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಕಲ್ಪನಾ ನಾಯ್ಕ್(5) ಸೇರಿ ಇಬ್ಬರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಇಂದು ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ರವೀಂದ್ರ ನಗರ ಸರ್ಕಲ್ ಬಳಿಯ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ಜಾತ್ರೆ ನಡೆದಿದೆ. ಈ ಜಾತ್ರೆಯಲ್ಲಿ ನೂರಾರು ಜನರು ಸೇರಿದ್ದರು.
ಈ ವೇಳೆ ರೋಶನ್ ಫೆರ್ನಾಂಡಿಸ್ ಎನ್ನುವಾತ ಫುಲ್ ಟೈಟ್ ಆಗಿ ತನ್ನ ಇಕೋ ಸ್ಪೋರ್ಟ್ಸ್ ಕಾರನ್ನು ಯರ್ರಾಬಿರ್ರಿ ಚಲಾಯಿಸಿಕೊಂಡು ಬಂದಿದ್ದು, ಏಕಾಏಕಿ ಕಾರು ದೇಗುಲದ ಮಂಟಪಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಜನರ ಮೇಲೆ ಕಾರು ಹತ್ತಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಭಕ್ತಾದಿಗಳು ಕಾರಿನ ಮೇಲೆ ಕಲ್ಲು ಎಸೆದು ಅಡ್ಡಹಾಕಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವರದಿ: ಓಂಕಾರ ಎಸ್. ವಿ. ತಾಳಗುಪ್ಪ