ರೇಡಿಯಾಲಜಿಸ್ಟ್ ತಜ್ಞ ವೈದ್ಯಾಧಿಕಾರಿಗಳಾಗಿ ಜೆ ಸಿ ಆಸ್ಪತ್ರೆಗೆ ನೂತನವಾಗಿ ನೇಮಕವಾಗಿರುವ ಡಾ.ಅಕ್ಣತ ವಿ ಮತ್ತು ಪ್ರಾ.ಆ.ಕೇಂದ್ರ ಕಟಗಾರಿಗೆ ಗುತ್ತಿಗೆ ಆಧಾರದ ವೈದ್ಯಾಧಿಕಾರಿಯಾಗಿ ನೇಮಕವಾಗಿರುವ ಡಾ.ವಿಜಯ ರಾಜ್ ರನ್ನು ಜೆ ಸಿ ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ಜೆ ಸಿ ಆಸ್ಪತ್ರೆಯಲ್ಲಿ ಬಹಳ ಕಾಲದಿಂದ ಖಾಲಿಯಿದ್ದ ರೇಡಿಯಾಲಜಿಸ್ಟ್ ಹುದ್ದೆಗೆ ನೇಮಕವಾಗಿರುವ ಡಾ.ಅಕ್ಷತಾರವರು ಈ ಹಿಂದೆ ಸೊರಬ ತಾಲ್ಲೂಕಿನ ಪ್ರಾ ಆ ಕೇಂದ್ರದ ವೈದ್ಯಾಧಿಕಾರಿಗಳಾಗಿ, ಅಲ್ಲಿನ ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಜನಪರ ಕಾಳಜಿಯಿಂದ ಒಳ್ಳೆಯ ಹೆಸರು ಸಂಪಾದಿಸಿದ್ದಾರೆ. ಪ್ರಾ.ಆ.ಕಟಗಾರಿಗೆ ಆಗಮಿಸಿರುವ ಡಾ.ವಿಜಯ್ ರಾಜ್ ಕೂಡ ಯುವ ಉತ್ಸಾಹಿಗಳಿದ್ದಾರೆ. ಇವರಿಂದ ನಮ್ಮ ತಾಲ್ಲೂಕಿನ ಬಡ ವರ್ಗ,ಅಸಹಾಯಕ ಸಮುದಾಯಕ್ಕೆ ಉತ್ತಮ ಸೇವೆ ದೊರಕುವ ವಿಶ್ವಾಸವಿದೆ. ನೂತನ ವೈದ್ಯಾಧಿಕಾರಿಗಳಿಂದ ಜನರಿಗೆ ಹೆಚ್ಚಿನ ವೈದ್ಯಕೀಯ ಸೇವೆ ದೊರಕಲಿ. ಅದರಿಂದ ಒಳ್ಳೆಯ ಹೆಸರು ಗಳಿಸಿ ಜನ ಮನ್ನಣೆ ಪಡೆಯಲಿ ಎಂದು ಹಾರ್ದಿಕವಾಗಿ ಶುಭ ಹಾರೈಸುತ್ತಾ ಆತ್ಮೀಯವಾಗಿ ಸ್ವಾಗತಿಸುವುದಾಗಿ ತಿಳಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಕೇತನ್ ಮಾತನಾಡಿ ರೇಡಿಯಾಲಜಿಸ್ಟ್ ಹುದ್ದೆ ಪ್ರಥಮ ಬಾರಿ ಭರ್ತಿಯಾಗಿರುವುದರಿಂದ ಅಗತ್ಯ ಸೌಲಭ್ಯಗಳನ್ನು ಹೊಂದಿಸಲು ಒಂದಿಷ್ಟು ಕಾಲಾವಕಾಶ ಬೇಕಾಗಬಹುದು. ಮುಂದಿನ ದಿನಗಳಲ್ಲಿ ಇವರಿಂದ ಉತ್ತಮ ಸೇವೆ ದೊರಕಲಿ, ಆ ಮೂಲಕ ಒಳ್ಳೆಯ ಹೆಸರು ಸಂಪಾದಿಸಲಿ ಎಂದು ಶುಭ ಹಾರೈಸಿದ ಅವರು ಕಟಗಾರಿನಲ್ಲಿ ಕೆಲ ಕಾಲ ವೈದ್ಯರಿಲ್ಲದೆ ಸಮಸ್ಯೆಯಾಗಿತ್ತು. ಹುದ್ದೆ ಭರ್ತಿಯಾಗಿದ್ದು ಖುಷಿಯಾಗಿದೆ.ನೂತನ ವೈದ್ಯಾಧಿಕಾರಿಗಳಿಗೆ ಉತ್ತಮ ಸೇವೆ ಒದಗಿಸಲು ಸರ್ವ ಸಹಕಾರವನ್ನೂ ನೀಡಲಾಗುವುದು ಎಂದರು.
ಜೆ ಸಿ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯಾಧಿಕಾರಿ ಡಾ.ಪ್ರಭಾಕರ್ ಮಾತನಾಡಿ, ಜೆ ಸಿ ಆಸ್ಪತ್ರೆಗೆ ನೂತನವಾಗಿ ರೇಡಿಯಾಲಜಿ ತಜ್ಞರ ಆಗಮನ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಬಡ ಜನತೆಗೆ ಇದರಿಂದ ಬಹಳ ಅನುಕೂಲವಾಗಲಿದೆ. ಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲೇ ಕಲ್ಪಿಸಿ ಎಲ್ಲಾ ಸಹಕಾರವನ್ನೂ ನೀಡಲಾಗುವುದು. ನಮ್ಮ ತಾಲ್ಲೂಕಿನಲ್ಲಿ ಉತ್ತಮ ಕ್ಷೇತ್ರ ಸಿಬ್ಬಂದಿಗಳಿರುವುದು ಡಾ. ಅಕ್ಷತಾರವರ ಸುಸಲಿತ ಕಾರ್ಯ ನಿರ್ವಹಣೆಗೆ ಸಹಕಾರಿಯಾಗಲಿದೆ ಎಂದ ಅವರು ಡಾ.ವಿಜಯ್ ರಾಜ್ ಗ್ರಾಮೀಣ ಸೇವಾ ಅವಧಿಯನ್ನು ಇದೇ ಆಸ್ಪತ್ರೆಯಲ್ಲಿ ಸಲ್ಲಿಸಿದ್ದಾರೆ. ಒಳ್ಳೆಯ ಸೇವೆ ಸಲ್ಲಿಸಿದವರನ್ನು ತಾಲ್ಲೂಕಿನ ಜನ ಬಹಳ ಗೌರವದಿಂದ ಕಾಣುತ್ತಾರೆ. ಇಬ್ಬರೂ ವೈದ್ಯರಿಗೂ ಯಶಸ್ಸು ಸಿಗಲಿ ಎಂದರು.
ಡಾ.ಅಕ್ಷತ ವಿ ಮಾತನಾಡಿ,ಉತ್ತಮ ಸೇವೆ ಸಲ್ಲಿಸುವ ಉದ್ದೇಶದಿಂದ ನಾನಿಲ್ಲಿಗೆ ಬಂದಿದ್ದೇನೆ. ಶೀಘ್ರದಲ್ಲಿ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಆಗುವ ಭರವಸೆ ಇದೆ. ನಮ್ಮ ಇಲಾಖೆ ಒಂದು ಕುಟುಂಬದಂತೆ. ಸರ್ವ ಸಹಕಾರದಿಂದ ಬಡ,ಅಸಹಾಯಕ ವರ್ಗಕ್ಕೆ ಆಧ್ಯತೆಯ ಮೇಲೆ ಸೇವೆ ಸಲ್ಲಿಸಲು ಶ್ರಮಿಸುತ್ತೇನೆ. ಆತ್ಮೀಯವಾಗಿ ಸ್ವಾಗತಿಸಿ,ಶುಭ ಹಾರೈಸಿದ ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘಕ್ಕೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದರು.
ಡಾ.ವಿಜಯ್ ರಾಜ್ ಮಾತನಾಡಿ, ನನ್ನಿಂದ ಸಾಧ್ಯವಾದಷ್ಟು ಉತ್ತಮ ಸೇವೆ ಸಲ್ಲಿಸುವ ಪ್ರಯತ್ನ ಮಾಡುತ್ತೇನೆ, ಸ್ವಾಗತಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಹಿರಿಯ ವೈದ್ಯಾಧಿಕಾರಿಗಳಾದ ಡಾ.ಶೋಭಾ ದೇವಿ, ಡಾ.ಸುರೇಶ್, ಜೆ ಸಿ ಆಸ್ಪತ್ರೆ ಸೂಪರಿಂಟೆಂಡೆಂಟ್ ಮೃತ್ಯುಂಜಯ, ವೇದಿಕೆಯಲ್ಲಿದ್ದರು.
ಸಂಘದ ಉಪಾಧ್ಯಕ್ಷೆ ಅನುಸೂಯ,ಸಂಘಟನಾ ಕಾರ್ಯದರ್ಶಿ ಉಷಾ, ಪದಾಧಿಕಾರಿಗಳಾದ ವಿನಾಯಕ ಹೆಚ್ ಜಿ, ಹನುಮಂತ ರೆಡ್ಡಿ,ಗಿರಿ,ದುಗ್ಗಣ್ಣ ಸಂತೋಷ್, ಭವ್ಯ,ಸುನೀತ, ನಾಗರತ್ನ,ವನಿತ, ಮಲ್ಲಿಕಾರ್ಜುನ್ ಸೇರಿದಂತೆ ತಾಲ್ಲೂಕಿನ ವಿವಿಧ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿದ್ದರು.