

ಸಮುದ್ರವಸನೇ ದೇವಿ
ಪರ್ವತಸ್ಥನ ಮಂಡಿತೇ |
ವಿಷ್ಣುಪತ್ನಿ ನಮಸ್ತುಭ್ಯಂ
ಪಾದಸ್ಪರ್ಶಂ ಕ್ಷಮಸ್ವ ಮೇ ||
ನಿತ್ಯ ಕೆಲವು ಸ್ತೋತ್ರ ಪಠಣ ಮಾಡುವ ಮಗನಿಗೆ ಇಂದು ಸ್ನಾನ ಮುಗಿಸಿದ ನಂತರ ಭೂಮಿ ಹುಣ್ಣಿಮೆ ಊರಲ್ಲಿ ಭೂಮಿ ಪೂಜೆ ಮಾಡ್ತಾರೆ ದೇವರಿಗೆ ನಮಸ್ಕರಿಸು ಎಂದೆ..ಅಮ್ಮ ನಾನು ಹೇಳುವ ಸ್ತೋತ್ರದಲ್ಲಿ ನಿತ್ಯ ಭೂಮಿಗೆ ನಮಸ್ಕಾರ ಮಾಡಿ ಕ್ಷಮೆ ಕೇಳುವ ಅರ್ಥ ಎಂದು ಹೇಳಿದ್ದೆ.ಇವತ್ತು ಮಾತ್ರ ಪೂಜೆ ಮಾಡುವುದು ಎಂದರೆ ? ಮಕ್ಕಳಿಗೆ ಪ್ರತಿ ಸ್ತೋತ್ರ ಹೇಳಿಕೊಡುವ ಮೊದಲು ನನಗೆ ಅರ್ಥ ಮಾಡಿಸುವಷ್ಟು ಹಾಗೂ ಮಕ್ಕಳಿಗೆ ಅರ್ಥವಾಗುವ ಹಾಗೆ ಹೇಳಿ ಕೊಡುವುದು ನನ್ನ ಅಭ್ಯಾಸ..ಅಂದು ಪುಟ್ಟ ತಲೆಗೆ ಅರ್ಥವಾಗುವ ಹಾಗೆ ಹೇಳಿದ್ದು ತಲೆಗೆ ಹೋಗಿದೆ ಎಂದು ಒಂದಷ್ಟು ಪ್ರಶ್ನೆ ಕೇಳಿ ಇವತ್ತು ರುಜುವಾತು ಮಾಡಿದ್ದ ಮಗ..
ಹೌದು.ನಿತ್ಯ ನಮಸ್ಕರಿಸುವ ಭೂಮಿಗೆ ಇಂದು ಮಲೆನಾಡಿನಲ್ಲಿ ವಿಶೇಷ ಪೂಜೆ.ಭೂಮಿ ಹುಣ್ಣಿಮೆ ಮಲೆನಾಡಿನ ಮಂದಿಗೆ ವಿಶೇಷ ಹಬ್ಬ ಎಂದರೂ ಸರಿಯೇ..
ಭೂಮಿ ತಾಯಿ ಬಸುರಿ ಎಂದು ಆಕೆಗೆ ಮಡಿಲು ತುಂಬುವ ಹಬ್ಬ. ಹಸಿರುಟ್ಟ ಭೂಮಿಗೆ ಮಡಿಲು ತುಂಬಿ ನಂತರ ಕೊಯ್ಲು ಮಾಡುವ ಪದ್ಧತಿ ಭೂಮಿ ಹುಣ್ಣಿಮೆ..
ಮೊದಲೆಲ್ಲ ಭೂಮಿ ಹುಣ್ಣಿಮೆ ಅಂದರೆ ಸಂಭ್ರಮ.ಮಕ್ಕಳು ತೋಟದಲ್ಲಿ ಓರಗೆಯವರ ಜೊತೆಯಲ್ಲಿ ಕುಳಿತು ಊಟ ಮಾಡುವುದು ಎಂದರೆ ಅವರ ಖುಷಿಗೆ ಪಾರವೇ ಇರಲಿಲ್ಲ.ಇಂದು ಅದೇ ತೋಟದಲ್ಲಿ ಉಂಡು ಬೆಳೆದ ಕೆಲವು ಮಕ್ಕಳಿಗೆ ತಮ್ಮ ತೋಟ ಎಲ್ಲಿದೆ ಎಂದೇ ಗೊತ್ತಿಲ್ಲದ ಸ್ಥಿತಿ ಇರುವುದು ವಿಪರ್ಯಾಸವೇ ಸರಿ.
ಕಳೆದ ತಿಂಗಳು ಪರಿಚಿತರೊಬ್ಬರಿಗೆ ಕರೆ ಮಾಡಿದ್ದೆ ನನ್ನದೇ ಕೆಲಸಕ್ಕೆ ಎಂದು.ಹತ್ತು ಹಲವಾರು ಕಸುಬಿನ ನಡುವೆ ನಿನ್ನ ಕರೆ ಬಂದದ್ದು ತಿಳಿಯಲಿಲ್ಲ..ನೀನು ಕರೆ ಮಾಡಿದಾಗ ತೋಟದಲ್ಲಿ ಇದ್ದೆ.ಮನೆಗೆ ಬಂದರೆ ನೆಟ್ವರ್ಕ್ ಸಮಸ್ಯೆ.ಮತ್ತೆ ಕರೆ ಮಾಡಲು ಆಗಲಿಲ್ಲ,ತುರ್ತು ಕೆಲಸ ಇತ್ತಾ ಎಂದು ಪ್ರಶ್ನಿಸಿದ್ದರು..ಮೂಲತಃ ಕೃಷಿಕ ಕುಟುಂಬದವರು ಆದರೂ ಕೃಷಿಗಿಂತ ಹೆಚ್ಚು ಆದಾಯ ಅವರ ಇತರೆ ಕೆಲಸಗಳಲ್ಲಿ ಇತ್ತು.ಸ್ವಲ್ಪ ವರ್ಷಗಳಿಂದ ಈಚೆ ಕೃಷಿ ಹಾಗೂ ಅಡಿಕೆ ಚೇಣಿ ಮಾಡುವ ಇವರು ಕರೆ ಮಾಡಿದಾಗ ಒಂದಷ್ಟು ಕೃಷಿಯ ವಿಚಾರ ಹೇಳುತ್ತಿದ್ದರು.ಮಾತನಾಡುತ್ತಾ ಸಹಜವಾಗಿ ಮೊನ್ನೆ ಒಬ್ಬರ ಮನೆಗೆ ಅಡಿಕೆ ಚೇಣಿಗೆ ಎಂದು ಹೋದರೆ ಮಗನಿಗೆ ತಮ್ಮ ಗಡಿಯ ಜಾಗದ ಮಾಹಿತಿ ಇಲ್ಲ..ಅಪ್ಪನ ಬಳಿ ಕೇಳಿ ವಿಚಾರಿಸಿ ನಿಮಗೆ ತಿಳಿಸುವೆ ಎಂದರು.ನಾನು ಅಡಿಕೆ ಚೇಣಿ ಮಾಡುವ ಬದಲು ಅಣ್ಣ ತಮ್ಮನ ಗಡಿ ತಕರಾರಿಗೆ ಸಾಕ್ಷಿ ಆಗಬೇಕಾಗುತ್ತದೆ ಎಂದು ನಿರಾಕರಿಸಿದೆ ಎಂದರು .ಸಂದರ್ಭಕ್ಕೆ ಮಾತುಕತೆಯ ನಡುವೆ ಈ ವಿಚಾರ ಬಂದರೂ ಈಗಿನ ಮಕ್ಕಳಿಗೆ ತಮ್ಮದೇ ಜಮೀನಿನ ಅರಿವು ಇಲ್ಲದೆ ಇರುವುದು ಬೇಸರ ಅನ್ನಿಸಿತು.ಓದಿ ಕೆಲಸಕ್ಕೆ ಸೇರುವ ಮಕ್ಕಳಿಗೆ ಕೃಷಿಯ ಬಗ್ಗೆ ಒಲವಿಲ್ಲ.ಕೆಲಸ ಬಿಟ್ಟು ಬರಬೇಕು ಎಂಬ ಭಾವನೆ ಇಲ್ಲದಿದ್ದರೂ ತಮ್ಮದೇ ಜಮೀನು. ತಾನುಂಡು ಆಡಿ ಬೆಳೆದ ಜಾಗದ ಬಗ್ಗೆ ಕಿಂಚಿತ್ತಾದರೂ ಪ್ರೀತಿ ಇದ್ದರೆ ಮಲೆನಾಡಿನ ಚಿತ್ರಣ ಈ ರೀತಿ ಬದಲಾಗುತ್ತಿರಲಿಲ್ಲ ..
ಭೂಮಿ ಹುಣ್ಣಿಮೆ ಕಳೆದು ಸಂಕ್ರಮಣದ ನಂತರ ಕೊನೆ ಕೊಯ್ಲು ಮಾಡುವುದು ವಾಡಿಕೆ ಆದರೆ ಈ ಬಾರಿ ಈಗಲೇ ಅಡಿಕೆ ಬೆಳೆದು ಉದುರುತ್ತಿದೆ,ಅಕಾಲಿಕ ಮಳೆ ಒಂದೆಡೆ, ಬೆಳೆದ ಅಡಿಕೆಗೆ ಕೊಳೆ ಔಷಧಿ ಹೊಡೆಸಲು ಆಗದು.ಕೊಯ್ಲು ಮಾಡಿದರೆ ಒಣಗಿಸಲು ಬಾರದು..ಅಡಿಕೆ ಅಡಕತ್ತರಿಯಲ್ಲಿ ಸಿಕ್ಕಿದ ಹಾಗೆ ಆಗಿದೆ.ಇದನ್ನೇ ನಂಬಿ ಬದುಕು ಸಾಗಿಸುವ ಮಂದಿಗೆ ಕಷ್ಟ.ಭಾವ ಮಾತನಾಡುವಾಗ ಹೇಳಿದ್ದು ಕೇಳಿ ಮಲೆನಾಡು ವಾತಾವರಣ ಬದಲಾಗಲು ನಾವು ಕಾರಣವೇ ಎಂಬ ಪ್ರಶ್ನೆ ಹುಟ್ಟಿತು.ಅಭಿವೃದ್ದಿಯ ಹೆಸರಿನಲ್ಲಿ ಕಾಡು ಕ್ರಮೇಣ ಖಾಲಿ ಆಗಿದೆ. ಶರಾವತಿ ನದಿ ನೀರು ತಿರುವು ಯೋಜನೆ ,ರಸ್ತೆ ಅಗಲೀಕರಣದ ಹೆಸರಿನಲ್ಲಿ ಕಾಡು ಖಾಲಿ ಆಗುವುದು ಗಮನಕ್ಕೆ ಬಂದರೂ ಪ್ರಶ್ನಿಸಲು ಯಾರೂ ಇಲ್ಲದ ಪರಿಸ್ಥಿತಿ..
ಮನೆಯ ಹಿತ್ತಲಿನಲ್ಲಿ ಪೂಜೆ ಮಾಡಿ ಇರುವ ನಾಲ್ಕಾರು ತೆಂಗು,ಅಡಿಕೆ ಮರ ಉಳಿಸಿ.ಹಸಿರು ಉಳಿಸಲು ನಿತ್ಯವೂ ಗಿಡ ಮರದ ಸುತ್ತ ಓಡಾಡುವ ಅಪ್ಪ ಮಾವ ನೆನಪಾಗುತ್ತಾರೆ.ಇರುವ ಪುಟ್ಟ ಜಾಗದಲ್ಲಿ ನಾಲ್ಕಾರು pot ಇಟ್ಟು ನನ್ನ ಖುಷಿಗೆ ಗಿಡ ನೆಟ್ಟು ಸಂಬ್ರಮಿಸಬಹುದೆ ಹೊರತು ನಾನು ಊರಲ್ಲಿ ನಿಂತು ತೋಟದ ಕೆಲಸ ಮಾಡಲಾರೆ..
ರೈತರ ಬದುಕು ಮೊದಲಿನ ಹಾಗೆ ಇಲ್ಲ.ಕೆಲಸಕ್ಕೆ ಯಾರೂ ಬರುವುದು ಇಲ್ಲ.ಹಳ್ಳಿಯಲ್ಲಿ ಇದ್ದರೆ ಬದುಕು ಪೇಟೆಯವರ ಹಾಗೆ ಸುಲಭವಲ್ಲ…ಸದಾ ಊರಿಗೆ ಹೋದಾಗ ಕೇಳುವ ಮಾತುಗಳು ಒಮ್ಮೊಮ್ಮೆ ಸತ್ಯ ಅನ್ನಿಸಿದರೂ ಹಳ್ಳಿಯಲ್ಲಿ ಇರುವ ಸಂತೃಪ್ತಿ,ಮಾನಸಿಕ ನೆಮ್ಮದಿ ಪೇಟೆಯಲ್ಲಿ ದೊರೆಯದು.
ಇಂದು ಭೂಮಿ ತಾಯಿ ಮಡಿಲು ತುಂಬುವುದು ಎಂದಾಗ ಮಗ ಕೇಳಿದ ಪ್ರಶ್ನೆ ಭೂಮಿಗೂ ನಮ್ಮ ಹಾಗೆ ಪುಟ್ಟ ಮಕ್ಕಳು ಇರ್ತಾರಾ? ಪ್ರಕೃತಿಯ ಮುಂದೆ ಮಾನವ ಎಸ್ಟೇ ಎತ್ತರಕ್ಕೆ ಏರಿದರೂ,ಸಾಧನೆ ಮಾಡಿದರೂ ತಾಯಿಯ ಮಡಿಲಲ್ಲಿ ಮಲಗುವ ಮಕ್ಕಳ ಹಾಗೆಯೇ ನಾವೆಲ್ಲರೂ.ಮಕ್ಕಳ ಹಾಗೆಯೇ ನಮ್ಮ
ಸುತ್ತಮುತ್ತಲ ಪರಿಸರ ಕಾಪಾಡುವ ಮುಗ್ಧತೆ ನಮ್ಮಲ್ಲಿಯೂ ಬರಲಿ..ಸಕಾಲಕ್ಕೆ ಮಳೆ ಬೆಳೆ ಬರುವ ಹಾಗೆ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಲಿ..ಪ್ರತಿ ಭೂಮಿ ಹುಣ್ಣಿಮೆ ಸಂಭ್ರಮ ತರುವ ಹಾಗೆ ಆಗಲಿ..
ಎಲ್ಲರ ಒಡಲು ತುಂಬುವ ರೈತರ ಮೊಗದಲಿ ನಗು ತುಂಬಿ ಬದುಕು ಹಸನಾಗಲಿ.ಸಂಭ್ರಮದ ಭೂಮಿ ಹುಣ್ಣಿಮೆಯ ಶುಭಾಶಯಗಳು..
ಆತ್ಮ ಜಿ,ಎಸ್…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…