
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನ, ಯಾತ್ರೆ ಮತ್ತು ಅಂತ್ಯಕ್ರಿಯೆಯ ವೇಳೆ ಶಾಂತಿ ಕಾಪಾಡಿದ ಸಾರ್ವಜನಿಕರು ಮತ್ತು ಶಾಂತಿ ಕಾಪಾಡಲು ಸಹಕರಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಸಚಿವ ಆರಗ ಜ್ಞಾನೇಂದ್ರ, ”ನಮ್ಮೆಲ್ಲರ ನೆಚ್ಚಿನ ನಟರೂ, ಕನ್ನಡ ಚಿತ್ರರಂಗದ ಮುಕುಟ ಮಣಿಯೂ ಆಗಿದ್ದ ಪುನೀತ್ ರಾಜಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿಧಿ ವಿಧಾನಗಳು, ಅತ್ಯಂತ ಶಾಂತಿಯುತವಾಗಿ, ಸಕಲ ಸರಕಾರಿ ಗೌರವಳೊಂದಿಗೆ ನೆರವೇರಿದೆ.ನೆಚ್ಚಿನ ನಟನ ಅಕಾಲಿಕ ನಿಧನದ ದುಃಖದ ಸಂದರ್ಭದಲ್ಲಿ, ಸಾರ್ವಜನಿಕರು, ಅತ್ಯಂತ, ಶಾಂತಿ ಹಾಗೂ ತಾಳ್ಮೆಯನ್ನು, ಪ್ರದರ್ಶಿಸಿ ಅಗಲಿದ ಚೈತನ್ಯಕ್ಕೆ ಲಕ್ಷಾಂತರ ಜನರು ಗೌರವ ಸಲ್ಲಿಸಿದ್ದಾರೆ. ಅತ್ಯಂತ ಶಿಸ್ತು ಬದ್ಧವಾಗಿ, ಎಷ್ಟೇ ಕಷ್ಟ ಗಳಿದ್ದರೂ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ, ನಿಭಾಯಿಸಿದ, ನಮ್ಮ ಪೊಲೀಸ್, ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಗೂ ಇತರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ” ಎಂದು ಬರೆದಿದ್ದಾರೆ.
ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್‌ಕುಮಾರ್ ಸಮಾಧಿ ಪಕ್ಕದಲ್ಲಿಯೇ ಪುನೀತ್ ರಾಜ್‌ಕುಮಾರ್ ಅಂತ್ಯಕ್ರಿಯೆ ನಡೆದಿದ್ದು, ಕುಟುಂಬಸ್ಥರು, ಚಿತ್ರರಂಗದ ಅನೇಕ ಗಣ್ಯರು ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿದರು.

ಪುನೀತ್‌ರಾಜ್‌ಕುಮಾರ್‌ಗೆ ಗಂಡು ಮಕ್ಕಳು ಇಲ್ಲದ ಕಾರಣ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಚಿತ್ರರಂಗದ ಗಣ್ಯರು ವಿವಿಧ ಸಚಿವರು, ಶಾಸಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಪುನೀತ್‌ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು.
ಅಪ್ಪು ಕುಟುಂಬದ ಜೊತೆ ನಾವಿದ್ದೇವೆ ಚಿಂತಿಸಬೇಡಿ ಶಿವಣ್ಣ:
ಅಪ್ಪು ನನಗಿಂತ ಸುಮಾರು ಹದಿಮೂರು ವರ್ಷ ಚಿಕ್ಕವನು ಅವನ ಸಾವಿನ ನೋವನ್ನು ನಮಗೆ ತಡೆದುಕೊಳ್ಳಲು ಆಗುತ್ತಿಲ್ಲ ಅಭಿಮಾನಿಗಳಿಗೆ ಇನ್ನೂ ಹೆಚ್ಚಿನ ನೋವಾಗಿರುತ್ತದೆ. ಎಲ್ಲರೂ ಸಹನೆಯಿಂದ ಸಹಕರಿಸಿ ಪುನೀತ್ ಕುಟುಂಬದ ಜೊತೆ ನಾವಿದ್ದೇವೆ. ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಹಾಗೆಯೇ ಅಂತಿಮ ಯಾತ್ರೆಗೆ ಸಹಕರಿಸಿದ ಸರ್ಕಾರಕ್ಕೆ ಅಭಿಮಾನಿಗಳಿಗೂ ಎಲ್ಲಾ ಇಲಾಖೆಯವರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ….