
“ಪೊಲೀಸರಿಂದ ಎಂಜಲು ಕಾಸು ತಿನ್ನುವವರ ಕುರಿತೂ ಗೃಹಸಚಿವರು ಮಾತನಾಡಬೇಕು'” ಎಂದು ಮಾಜಿ ಪೊಲೀಸ್ ಅಧಿಕಾರಿ ಹಿಂದೆ ವಿಧಾನಸೌಧಕ್ಕೆ ಬಾಂಬ್ ಇಟ್ಟು ನಂತರ ಬಿಜೆಪಿ ಪಕ್ಷ ಸೇರ್ಪಡೆಯಾಗಿ ಪ್ರಸ್ತುತ ಬಿಜೆಪಿ ಮುಖಂಡರೂ ಆಗಿರುವ ಗಿರೀಶ್ ಮಟ್ಟೆಣ್ಣವರ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.
ವರ್ಗಾವಣೆ ನಡೆಯಲು ಎಂಜಲು ಕಾಸು ತಿನ್ನುವುದು ಗೃಹಸಚಿವರಿಗೆ ಗೊತ್ತಿಲ್ಲವೇ?
ವರ್ಗಾವಣೆ ನಡೆಯಲು ಎಂಜಲು ದಂಧೆ ಗೃಹ ಸಚಿವರಿಗೆ ಗೊತ್ತಿಲವೇ? ಎಂದು ಪ್ರಶ್ನಿಸಿರುವ ಅವರು, ಬೆಂಗಳೂರಿನ ಉಪ್ಪಾರಪೇಟೆ, ಚಿಕ್ಕಪೇಟೆ, ಕಬ್ಬನ್ ಪಾರ್ಕ್ ಸೇರಿದಂತೆ ಕೆಲ ಪ್ರಮುಖ ಠಾಣೆಗಳಿಗೆ ವರ್ಗವಾಗಿ ಬರುವ ಠಾಣಾಧಿಕಾರಿಗಳು 50 ಲಕ್ಷದವರೆಗೂ ಎಂಜಲು ನೀಡಬೇಕು. ರಾಜ್ಯದ ಯಾವುದೇ ಠಾಣೆಗೆ ಪೋಸ್ಟಿಂಗ್ ಬರುವ ಅಧಿಕಾರಿ ಕನಿಷ್ಠ 25 ಲಕ್ಷ ಎಂಜಲು ನೀಡಲೇಬೇಕು.
ಪೊಲೀಸ್ ಪೇದೆಯಿಂದ ಐಪಿಎಸ್ ಅಧಿಕಾರಿ ವರ್ಗಾವಣೆವರೆಗೂ ಪ್ರತಿ ಹಂತದಲ್ಲಿಯೂ ಎಂಜಲು ಕೊಡುವುದು ಸಾಮಾನ್ಯವಾಗಿದೆ. ಶಾಸಕರು ಬೇಡ ಎಂದರೆ, ಸಚಿವರಿಗೆ, ಸಚಿವರು ಬೇಡವೆಂದರೆ, ಶಾಸಕರಿಗೆ ಈ ಇಬ್ಬರೂ ಬೇಡವೆಂದರೆ ಕೇಂದ್ರ ಕಚೇರಿಗೆ ಎಂಜಲು ಕಾಸು ಕೊಡಲೇಬೇಕಾದ ಸ್ಥಿತಿಯಿದೆ ಎಂದು ಆರೋಪಿಸಿದ್ದಾರೆ.
ಪುಕ್ಕಟೆ ವರ್ಗಾವಣೆ ಎಂದರೆ ಅದು ಶಿಕ್ಷೆ:
ಪುಕ್ಕಟೆ ವರ್ಗಾವಣೆ ಎಂದರೆ ಶಿಕ್ಷೆ ರೂಪದ ವರ್ಗಾವಣೆ ಅಷ್ಟೇ. ರಾಜ್ಯದ ಯಾವ ಠಾಣೆ, ಯಾವ ಹುದ್ದೆಗೆ ಎಷ್ಟುಎಂಜಲು ನೀಡಬೇಕು ಎನ್ನುವ ಪಟ್ಟಿ ವಿಧಾನಸೌಧದ ಒಳ-ಹೊರಗೆ ಓಡಾಡುವ ದಲ್ಲಾಳಿಗಳ ಹತ್ತಿರವಿರುತ್ತದೆ. ವರ್ಷಕ್ಕೊಮ್ಮೆ ಅದಕ್ಕೂ ಬೆಲೆ ಏರಿಕೆಯ ಬಿಸಿ ತಟ್ಟುತ್ತಿರುತ್ತದೆ. ಗೃಹ ಸಚಿವರು ಆ ಎಂಜಲು ಪಟ್ಟಿಯನ್ನು ನೋಡಿದರೆ ಒಳ್ಳೆಯದು ಎಂದಿದ್ದಾರೆ.
ಈ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ವರ್ಗಾವಣೆ ಅವಧಿಯನ್ನು ಕನಿಷ್ಠ ಎರಡು ವರ್ಷಕ್ಕೆ ನಿಗದಿಗೊಳಿಸಲಾಗಿತ್ತು. ಇದು ರಾಜ್ಯದಲ್ಲಿಯೂ ಜಾರಿಗೆ ಬಂದಿತ್ತಾದರೂ ರಾಜ್ಯ ಸರ್ಕಾರ ವರ್ಗಾವಣೆ ಅವಧಿಯನ್ನು ಒಂದು ವರ್ಷಕ್ಕೆ ಇಳಿಸಿತ್ತು. ಹೀಗಾಗಿ ಪೊಲೀಸ್ ಅಧಿಕಾರಿ ಒಂದು ವರ್ಷದ ಗುತ್ತಿಗೆದಾರನಾಗಿ ಕೆಲಸ ಮಾಡುವ ಸ್ಥಿತಿಯಿದೆ.
ರಾಜ್ಯ ಗುತ್ತಿಗೆದಾರ ಸಂಘದವರು ಪರ್ಸೆಂಟೇಜ್ ಕುರಿತು ಪ್ರಧಾನಿಗೆ ಪತ್ರ ಬರೆದು ಬೇಸರ ಹೊರಹಾಕಿದ್ದಾರೆ. ಆದರೆ ಪೊಲೀಸ್ ಸಿಬ್ಬಂದಿಗೆ ಆ ಅಧಿಕಾರವಿಲ್ಲ, ಧ್ವನಿಯೂ ಇಲ್ಲ. ಈ ಸಮಸ್ಯೆಯನ್ನು ಗೃಹ ಸಚಿವರೇ ಪರಿಹರಿಸಬೇಕು ಎಂದು ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಯೋಗ್ಯತೆ ಇಲ್ಲದ ಪೊಲೀಸರು ಯೂನಿಫಾರಂ ಬಿಚ್ಚಿಟ್ಟು ಸಾಯಿರಿ ಎಂಬ ಹೇಳಿಕೆ ನೀಡಿದ್ದರು:
‘ಈ ರೀತಿ ದನ ರೆಗ್ಯುಲರ್ ಕಳ್ಳ ಸಾಗಾಣಿಕೆ ಮಾಡುವವರು ಯಾರೆಂದು ನಿಮ್ಮವರಿಗೆ ಗೊತ್ತಿರುತ್ತೆ. ಲಂಚ ತಿನ್ಕೊಂಡು ಅವರ ಜೊತೆ ಬಿದ್ದಿರ್ತಾರೆ ನಾಯಿ ಹಂಗೆ. ಎಂಜಲು ಕಾಸಿಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಯೋಗ್ಯತೆ ಇಲ್ಲ ದಿದ್ದರೆ ಯೂನಿಫಾರಂ ಬಿಚ್ಚಿಟ್ಟು ಸಾಯ್ರಿ ಮನೆ ಕಡೆ.’ ಅಕ್ರಮ ಗೋ ಸಾಗಣೆ ಮತ್ತು ಗೋ ಕಳ್ಳರು ಹೆಚ್ಚುತ್ತಿರುವ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ತರಾಟೆಗೆ ತೆಗೆದುಕೊಂಡಿದ್ದರು.
ಗೃಹ ಸಚಿವರ ಕ್ಷೇತ್ರದಲ್ಲಿ ಗೋ ಕಳ್ಳರನ್ನು ತಡೆಯಲು ಬಂದ ಹಿಂದೂಪರ ಸಂಘಟನೆಯ ಇಬ್ಬರು ಕಾರ್ಯಕರ್ತರ ಮೇಲೆ ವಾಹನ ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಇಲಾಖೆಯ ವಿರುದ್ಧ ಕೆಂಡಾ ಮಂಡಲವಾಗಿರುವ ವೀಡಿಯೋ ವೈರಲ್ ಕೂಡ ಆಗಿತ್ತು.
ನಿಷ್ಠಾವಂತ ಅಧಿಕಾರಿಗಳಿಗೆ ಮಾನ್ಯತೆ ನೀಡಿ ಮಾನಸಿಕ ಧೈರ್ಯ ತುಂಬಿ:
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ, ಮರಳು, ಗಣಿಗಾರಿಕೆ, ಜೂಜಾಟ, ಗಾಂಜಾ-ಅಫೀಮು ಹೇರಳವಾಗಿ ನಡೆಯುತ್ತಿದೆ. ಇದನ್ನು ಮಟ್ಟಹಾಕುವುದು ಪೊಲೀಸರಿಗೆ ಏನು ಕಷ್ಟವಲ್ಲ ಪೊಲೀಸ್ ಇಲಾಖೆಯಲ್ಲಿ ನಿಷ್ಠಾವಂತ ಅಧಿಕಾರಿಗಳಿದ್ದಾರೆ. ಆದರೆ ಅವರಿಗೆ ಅವರ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ಒಂದು ವೇಳೆ ಈ ದಂಧೆಯ ವಿರುದ್ಧ ಅವರು ನಿಂತರೆ ಅವರಿಗೆ ಪ್ರಭಾವಿ ವ್ಯಕ್ತಿಗಳು ಒತ್ತಡ ತರುತ್ತಾರೆ.
ಗೃಹಸಚಿವರ ಕ್ಷೇತ್ರದಿಂದಲೇ ಇದು ಪ್ರಾರಂಭವಾಗಲಿ:
ಇದು ನಿಲ್ಲಬೇಕು ಸಿಬ್ಬಂದಿಗಳ ಕೊರತೆ ಇದೆ ಆ ವ್ಯವಸ್ಥೆ ಆಗಬೇಕು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬಿ ಅಕ್ರಮ ಚಟುವಟಿಕೆಗಳ ವಿರುದ್ಧ ಸಮರ ಸಾರಿ ನಿಮ್ಮೊಂದಿಗೆ ನಾನಿದ್ದೇನೆ ಎನ್ನುವ ಭರವಸೆ ನೀಡಿ ಅದು ಗೃಹಸಚಿವರ ತವರೂರಾದ ತೀರ್ಥಹಳ್ಳಿ ಕ್ಷೇತ್ರದಿಂದಲೇ ಪ್ರಾರಂಭವಾಗಲಿ ಎನ್ನುವುದು ಪತ್ರಿಕೆ ಹಾಗೂ ಸಾರ್ವಜನಿಕರ ಆಶಯ.
ಗೃಹ ಮಂತ್ರಿಗಳು ಮನಸ್ಸು ಮಾಡಿದರೆ ಇದು ಸಾಧ್ಯ:
ಒಂದಷ್ಟು ಸಾಮಾಜಿಕ ಕಳಕಳಿ, ಜನಪರ ಹೋರಾಟದಿಂದಲೇ ತಳಮಟ್ಟದಿಂದ ಮೇಲೆ ಬಂದ ಗೃಹಮಂತ್ರಿಗಳು ತೀರ್ಥಹಳ್ಳಿ ಕ್ಷೇತ್ರದ ಶಾಸಕರು ಆದ ಆರಗ ಜ್ಞಾನೇಂದ್ರ ಅವರು ಈ ನಿಟ್ಟಿನಲ್ಲಿ ಯಶಸ್ಸು ಕಾಣುತ್ತಾರೆ ಎನ್ನುವ ನಂಬಿಕೆ ಕ್ಷೇತ್ರದ ಜನರದು…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…