ಹುಮ್ನಾಬಾದ್ ತಹಶಿಲ್ದಾರರ ಮೇಲೆ ನಡೆದ ಹಲ್ಲೆ ಖಂಡಿಸಿ ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದಿಂದ ಮನವಿ..!

ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಹುಮ್ನಾಬಾದ್ ತಹಶಿಲ್ದಾರರ ಮೇಲೆ ನಡೆದ ಅಮಾನವೀಯ ಹಲ್ಲೆ ಖಂಡಿಸಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಂಡು ಸರ್ಕಾರಿ ಅಧಿಕಾರಿ,ನೌಕರರಿಗೆ ರಕ್ಷಣೆ ನೀಡುವಂತೆ ಕೋರಿ ತೀರ್ಥಹಳ್ಳಿ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಟಿ ವಿ ಸತೀಶ, ತಾಲ್ಲೂಕು ದಂಡಾಧಿಕಾರಿಗಳಿಗೇ ದುಷ್ಕರ್ಮಿಗಳು ಯಾವುದೇ ಭಯಭೀತಿ ಇಲ್ಲದೆ ಹಲ್ಲೆ ಮಾಡುತ್ತಾರೆ ಎಂದರೆ ಇನ್ನು ಸಾಮಾನ್ಯ ನೌಕರರ ಪಾಡೇನು ? ಹಲವು ಸಮಸ್ಯೆಗಳ ನಡುವೆ ಅನೇಕ ಒತ್ತಡಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ,ನೌಕರರನ್ನು ಇಂತಹ ಘಟನೆಗಳು ಭಯಭೀತರನ್ನಾಗಿಸುತ್ತಿದೆ.ತೀರಾ ಕ್ಷುಲ್ಲಕ ವಿಚಾರಗಳಿಗೂ ಸರ್ಕಾರಿ ನೌಕರರ ಮೇಲೆ ಬೆದರಿಕೆ,ಹಲ್ಲೆ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ. ಮುಖ್ಯವಾಗಿ ಕಂದಾಯ,ಭೂಮಾಪನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಇಲಾಖೆ ಸೇರಿಂದಂತೆ ವಿವಿಧ ಇಲಾಖೆಗಳ ನೌಕರರು ಈ ದೌರ್ಜನ್ಯಕ್ಕೆ ತುತ್ತಾಗುತಿದ್ದಾರೆ. ಆದ್ದರಿಂದ ಸರ್ಕಾರ ಈ ಬಗ್ಗೆ ಕಠಿಣ ಕ್ರಮವಹಿಸಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶಿಲ್ದಾರ್ ಡಾ.ಶ್ರೀಪಾದ್ ರವರು ಮಾತನಾಡಿ, ಸರ್ಕಾರಿ ನೌಕರರ ರಕ್ಷಣೆಗೆ ಈಗಿರುವ ಕಾನೂನುಗಳನ್ನು ಇನ್ನಷ್ಟು ಬಿಗಿ ಮಾಡಿ ವೈದ್ಯಕೀಯ ಸಿಬ್ಬಂದಿಗಳ ಮೇಲಿನ ಹಲ್ಲೆಗಳ ವಿರುದ್ದ ರೂಪಿಸಲಾಗಿರುವ ಬಿಗಿ ಕಾನೂನು ಕ್ರಮಗಳು ಇತರೆ ಸರ್ಕಾರಿ ನೌಕರರಿಗೂ ಅನ್ವಯವಾಗಬೇಕು ಎಂದರು.
ಸಂಘದ ಕಾರ್ಯದರ್ಶಿ ರಾಮು ಬಿ, ಉಪಾಧ್ಯಕ್ಷರಾದ ರಾಘವೇಂದ್ರ ಎಸ್, ಸುಷ್ಮ ಎಸ್ ಪಿ, ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಕಟ್ಟೆ ಮಂಜುನಾಥ್, ಶಿರಸ್ತೆದಾರ್ ಸತ್ಯಮೂರ್ತಿ, ಮೇಘರಾಜ್, ಸೂರತ್ ಕುಮಾರ್ ಸೇರಿದಂತೆ ಸರ್ಕಾರಿ ನೌಕರರ ಸಂಘ ಹಾಗೂ ಕಂದಾಯ ಇಲಾಖೆ ನೌಕರರ ಸಂಘ ಹಾಗೂ ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305