ಮೇಗರವಳ್ಳಿಯ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ಡಾ.ಅರವಿಂದ್ ರವರಿಗೆ ಆತ್ಮೀಯ ಬೀಳ್ಕೊಡುಗೆ..!

ಸೇವಾ ಕ್ಷೇತ್ರವಾಗಿರುವ ವೈದ್ಯಕೀಯ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ವ್ಯಾಪಾರೀಕರಣವಾಗುತ್ತಿದೆ ಎಂಬ ಆತಂಕ ಸಮಾಜದಿಂದ ವ್ಯಕ್ತವಾಗುತ್ತಿರುವ ಕಾಲಘಟ್ಟದಲ್ಲಿ ವೈದ್ಯ ವೃತ್ತಿಯ ಪಾವಿತ್ರ್ಯತೆಯ ಘನತೆ ಹೆಚ್ಚಿಸುವಂತೆ,ಮೌಲ್ಯ ಎತ್ತಿ ಹಿಡಿಯುವಂತೆ ನೈತಿಕ ಬದ್ದತೆ ಕಾಳಜಿಗಳಿಂದ ವೈದ್ಯಕೀಯ ಸೇವೆಯನ್ನು ಮುನ್ನಡೆಸುವ ವೈದ್ಯರು ಸಮಾಜದಲ್ಲಿ ಭರವಸೆ ಮೂಡಿಸುತ್ತಾರೆ. ಇಂತಹ ವೈದ್ಯರ ಮುಂಚೂಣಿ ಸಾಲಿನಲ್ಲಿ ಕಾಣಿಸಿಕೊಳ್ಳಬಲ್ಲ ಡಾ.ಅರವಿಂದ್ ರವರು ಅಪರೂಪದ ಸಂಸ್ಕಾರಯುತ ನಡವಳಿಕೆ,ಸಮಾಜಮುಖಿ ಕಾಳಜಿ,ಸಮರ್ಪಣಾ ಮನೋಭಾವದ ವೃತ್ತಿ ನಿಷ್ಟೆ,ಶ್ರದ್ದೆ,ಪ್ರಾಮಾಣಿಕ ನಡೆನುಡಿಗಳ ಇವರ ವ್ಯಕ್ತಿತ್ವ ನಿಜಕ್ಕೂ ಮಾದರಿ ಎಂದು ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ನುಡಿದರು.
ಉನ್ನತ ವ್ಯಾಸಾಂಗಕ್ಕೆ ತೆರಳುತ್ತಿರುವ ಪ್ರಾ.ಆ.ಕೇಂದ್ರ ಮೇಗರವಳ್ಳಿಯ ವೈದ್ಯಾಧಿಕಾರಿ ಡಾ.ಅರವಿಂದ್ ರವರನ್ನು ಅವರ ಸ್ವಗೃಹದಲ್ಲಿ ಆತ್ಮೀಯವಾಗಿ ಗೌರವಿಸಿ,ಅಭಿನಂದಿಸಿ ಅವರು ಮಾತನಾಡಿದರು.
ಮುಂದುವರೆದು, ಯಥೇಚ್ಚ ಔಷಧಿಗಳ ಸೇವನೆಯೊಂದೇ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಎಂಬ ಭಾವನೆ ಸಮಾಜದ ನಡುವೆ ಹೆಚ್ಚುತ್ತಿರುವ ಸಮಯದಲ್ಲಿ ಅಧಿಕ ಅನಗತ್ಯ ಔಷಧಿಗಳ ಅಡ್ಡ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ನಿಜಕ್ಕೂ ಬಹು ದೊಡ್ಡ ಸವಾಲು.ಅಂತಹ ಸವಾಲನ್ನು ಸ್ವೀಕರಿಸಿ ಆ ಬಗ್ಗೆ ಅರಿವು ಮೂಡಿಸಲು ಅವರು ಶಕ್ತಿ ಮೀರಿ ನಡೆಸಿದ ಪ್ರಯತ್ನ ಪ್ರೇರಣಾಧಾಯಕ. ಸಮಾಜದ ನೈಜ ಆಸ್ತಿಯಾಗಿರುವ ಇವರಿಂದ ಇನ್ನಷ್ಟು ಹೆಚ್ಚಿನ ಸೇವೆ ದೊರಕಲಿ.ಇಂತವರ ಸಂಖ್ಯೆ ಯಥೇಚ್ಚವಾಗಲಿ ಎಂದರು.
ಲ್ಯಾಬ್ ಟೆಕ್ನಿಕಲ್ ಆಫೀಸರ್ ಅನುಸೂಯ ಮಾತನಾಡಿ ಇಂತಹ ಉತ್ತಮ ವೈದ್ಯರು ನಮ್ಮ ಸಂಸ್ಥೆಯಿಂದ ತೆರಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.ಆದರೂ ಅವರ ಉನ್ನತ ವ್ಯಾಸಾಂಗದಿಂದ ಸಮಾಜದ ಅಸಹಾಯಕ ವರ್ಗಕ್ಕೆ ಇನ್ನೂ ಹೆಚ್ಚಿನ ಸೇವೆ ದೊರಕುವುದರಿಂದ, ಅವರ ಭವ್ಯ ಭವಿಷ್ಯತ್ತಿಗೆ ಶುಭ ಹಾರೈಸುವುದಾಗಿ ತಿಳಿಸಿದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ನೀಲಮ್ಮ ಮಾತನಾಡಿ ಪ್ರತಿಯೊಂದು ಕೆಲಸ ಕಾರ್ಯಗಳಲ್ಲೂ ಅವರ ಶ್ರದ್ದೆ ಆಸಕ್ತಿ ನಿಜಕ್ಕೂ ಮಾದರಿ. ಕೋವಿಡ್ ಸಮಸ್ಯೆ ಉಲ್ಬಣವಾಗಿದ್ದ ಕಾಲದಲ್ಲಿ ಹಗಲಿರುಳೆನ್ನದೆ ಅವರು ನೀಡಿದ ಸೇವೆ ಅವಿಸ್ಮರಣೀಯ ಎಂದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಅರವಿಂದ್, ನಾನು ಅಂತಹ ದೊಡ್ಡ ಕಾರ್ಯವನ್ನೇನೂ ಮಾಡಿಲ್ಕ.ಆದರೆ ನಿಮ್ಮೆಲ್ಲರ ಪ್ರೀತಿ, ಅಭಿಮಾನ ಇನ್ನಷ್ಟು ಉತ್ತಮ ಕಾರ್ಯ ಮಾಡುವ ನಿಟ್ಟಿನಲ್ಲಿ ನನ್ನನ್ನು ಪ್ರೇರೇಪಿಸಿದೆ.ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನನ್ನಿಂದ ಪ್ರಾಮಾಣಿಕ ವೈದ್ಯಕೀಯ ಸೇವೆ ದೊರಕಿಸುವತ್ತ ನನ್ನ ಪ್ರಯತ್ನ ಇದ್ದೇ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಅವರ ತಂದೆ,ತಾಯಿ ಮತ್ತು ಸಹೋದರರನ್ನೂ ಆತ್ಮೀಯವಾಗಿ ಗೌರವಿಸಲಾಯಿತು.
ಆಯುಷ್ ವೈದ್ಯಾಧಿಕಾರಿ ಡಾ.ಗೀತಾ, ತಾಲ್ಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಈಶ್ವರ, ಸಂಘಟನಾ ಕಾರ್ಯದರ್ಶಿ ಹನುಮಂತ ರೆಡ್ಡಿ, ತಾಲ್ಲೂಕು ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮತ್ತು ಆರೋಗ್ಯ ನಿರೀಕ್ಷಣಾಧಿಕಾರಿಗಳ ಸಂಘದ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಉಷಾ, ಫಾರ್ಮಸಿ ಅಧಿಕಾರಿ ಸನ್ನಿಧಿ, ಶುಶ್ರೂಷಣಾಧಿಕಾರಿ ನಿರ್ಮಲ,ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ವೀಣಾ,ನಾಗರತ್ನ, ನೇತ್ರಾವತಿ,ಬಿಪಿಎಂ ಗಿರಿ, ಡಿ ದರ್ಜೆ ನೌಕರರಾದ ಪಾರ್ವತಿ,ಗಣೇಶ,ಆಶಾ ಕಾರ್ಯಕರ್ತೆ ಯಶೋಧ ಮತ್ತಿತರರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305