
ವೈದ್ಯ ವೃತ್ತಿ ಅತ್ಯಂತ ಸವಾಲಿನದ್ದು.ಜನರ ವಿಪರೀತ ನಿರೀಕ್ಷೆಗಳಂತೆ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಸೃಷ್ಟಿಸುವಂತಹುದ್ದು. ಇಂತಹ ಅನಿವಾರ್ಯತೆಗಳ ಮಧ್ಯೆ ವೃತ್ತಿ ಧರ್ಮಕ್ಕೆ ಕಿಂಚಿತ್ತೂ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುವುದು ದೊಡ್ಡ ಸಾಹಸ. ಅನೇಕ ಪ್ರತಿರೋಧ, ಸವಾಲುಗಳನ್ನು ಎದುರಿಸಿದರೂ ಎಲ್ಲಿಯೂ ರಾಜಿಯಾಗದೆ ವೈದ್ಯ ವೃತ್ತಿಯನ್ನು ವೃತ್ತಿ ಧರ್ಮ ನಿಷ್ಟೆಯಿಂದ ಮುನ್ನಡೆಸುವ, ಎಲ್ಲರನ್ನೂ ಅತ್ಯಂತ ಗೌರವದಿಂದ ನಡೆಸಿಕೊಳ್ಳುವ ಸಜ್ಜನಿಕೆ ಸಂಸ್ಕಾರಯುತ ಗುಣ ನಡತೆಯ ಡಾ.ಅರವಿಂದ್ ನಿಜಕ್ಕೂ ಅಪರೂಪದ ವೈದ್ಯರು ಎಂದು ಪ್ರಾ.ಆ.ಕೇಂದ್ರ ಆಗುಂಬೆಯ ವೈದ್ಯಾಧಿಕಾರಿ ಡಾ.ಅನಿಕೇತನ್ ಶ್ಲಾಘಿಸಿದರು. ಅವರು ಉನ್ನತ ವ್ಯಾಸಾಂಗಕ್ಕೆ ತೆರಳಿದ ಪ್ರಾ.ಆ.ಕೇಂದ್ರ ಮೇಗರವಳ್ಳಿಯ ವೈದ್ಯಾಧಿಕಾರಿ ಡಾ.ಅರವಿಂದ್ ರವರ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ, ಹಲವು ಸಂದರ್ಭಗಳಲ್ಲಿ ರೋಗಕ್ಕೆ ಯಾವ ಚಿಕಿತ್ಸೆ ಬೇಕು ಎಂಬ ಬಗ್ಗೆ ವೈದ್ಯರು ನಿರ್ಧರಿಸುವುದಕ್ಕಿಂತ ಇಂಜೆಕ್ಷನ್ ಬೇಕು, ಡ್ರಿಪ್ ಬೇಕು, ಔಷಧಿ ಮಾತ್ರೆಗಳು ಬೇಕು, ಎಕ್ಸರೇ, ಸ್ಕಾನಿಂಗುಗಳೆಲ್ಲಾ ಬೇಕು ಎಂಬುದನ್ನು ಜನರೇ ನಿರ್ಧರಿಸಿರುತ್ತಾರೆ. ಅವರ ನಿರೀಕ್ಷೆಯಂತೆ ಚಿಕಿತ್ಸೆ ನೀಡಿದರೆ ಡಾಕ್ಟ್ರು ಒಳ್ಳೆಯವರಾಗಬಹುದು. ಇಲ್ಲದಿದ್ದರೆ, ಏನೂ ಪ್ರಯೋಜನ ಇಲ್ಲದ ಡಾಕ್ಟ್ರು ಎನಿಸಬಹುದು. ತೆಗೆದುಕೊಳ್ಳುವ ಅನಗತ್ಯ ಔಷಧಗಳೇ ಮುಂದೆ ಬಹು ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ ಎಂಬ ಅರಿವಿಲ್ಲದ ಇಂತಹ ಮನಸ್ಥಿತಿ ಬದಲಿಸುವ ಪ್ರಯತ್ನ ಸುಲಭದ್ದಲ್ಲ.ಆದರೂ ಅಂತಹ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸು ಕಂಡ ಡಾ.ಅರವಿಂದ್ ರವರ ವ್ಯಕ್ತಿತ್ವ ನಿಜಕ್ಕೂ ಮಾದರಿಯಾದದ್ದು. ಇಂತಹ ಜನಪರ ಕಾಳಜಿಯ ವೈದ್ಯರು ಸಮಾಜದ ನೈಜ ಆಸ್ತಿ ಎಂದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ನೀಲಮ್ಮ ಮಾತನಾಡಿ ಡಾ.ಅರವಿಂದ್ ರವರ ಉನ್ನತ ವ್ಯಾಸಾಂಗದಿಂದ ಸಮಾಜಕ್ಕೆ ಇನ್ನಷ್ಟು ಹೆಚ್ಚು ಲಾಭವಾಗಲಿದೆ. ಯಾವುದೇ ರೋಗಿಗಳಿಗೂ ಇವರ ಬಳಿ ಉತ್ತಮ ಗುಣಮಟ್ಟದ ಉಚಿತ ಚಿಕಿತ್ಸೆ ಸಿಗುವುದರಿಂದ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ರೋಗಿಗಳನ್ನು ನಾವು ನಮ್ಮ ಡಾಕ್ಟ್ರು ಎಂಬ ಅಭಿಮಾನದಿಂದ ಕಳುಹಿಸಬಹುದು ಎಂದರು.
ಲ್ಯಾಬ್ ಟೆಕ್ನಿಕಲ್ ಅಧಿಕಾರಿ ಅನುಸೂಯ ಮಾತನಾಡಿ, ಇಂತಹ ಮಾದರಿ ವೈದ್ಯರು ನಮ್ಮ ಸಂಸ್ಥೆ ಬಿಟ್ಟು ತೆರಳುತ್ತಿರುವುದು ಬೇಸರದ ಸಂಗತಿ. ಅವರಿಂದ ಸಮಾಜಕ್ಕೆ ಇನ್ನಷ್ಟು ಹೆಚ್ಚಿನ ಸೇವೆ ದೊರಕಲಿ, ಉನ್ನತ ಸಾಧನೆಗಳು ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಹಿ, ಪ್ರಾ ,ಆರೋಗ್ಯ ಸುರಕ್ಷಾಧಿಕಾರಿ ನಾಗವೇಣಿ, ಕಿ.ಪ್ರಾ.ಆರೋಗ್ಯ ಸುರಕ್ಷಾಧಿಕಾರಿಗಳಾದ ನಾಗರತ್ನ, ನೇತ್ರಾವತಿ,ವೀಣಾ ಮತ್ತು ಆಶಾ ಕಾರ್ಯಕರ್ತೆಯರು ಡಾ.ಅರವಿಂದ್ ರವರ ವ್ಯಕ್ತಿತ್ವವನ್ನು ಶ್ಲಾಘಿಸಿ, ಶುಭಹಾರೈಸಿ ಮಾತನಾಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ.ಅರವಿಂದ್, ನಾನಿಲ್ಲಿ ಅಂತಹ ದೊಡ್ಡ ಕಾರ್ಯವನ್ನೆನೂ ಮಾಡಿಲ್ಲ. ನನ್ನ ಕರ್ತವ್ಯವನ್ನು ಒಂದಿಷ್ಟು ಪ್ರಾಮಾಣಿಕವಾಗಿ ಮಾಡಲು ಪ್ರಯತ್ನ ಪಟ್ಟಿದ್ದೇನಷ್ಟೆ. ಮಾಡಿದ ಕರ್ತವ್ಯಕ್ಕೆ ಸರ್ಕಾರ ಗೌರವಯುತವಾಗಿ ವೇತನ ನೀಡುತ್ತಿದೆ. ಹಾಗಾಗಿ ಕಂಡವರ ಬಳಿ ಕೈಚಾಚುವ ಅಗತ್ಯ ಇಲ್ಲ. ಆತ್ಮಾಭಿಮಾನವನ್ನು ಉಳಿಸಿಕೊಂಡು, ವೃತ್ತಿ ಧರ್ಮದೊಂದಿಗೆ ಕರ್ತವ್ಯ ನಿರ್ವಹಿಸಿದ ಬಗ್ಗೆ ಒಂದಿಷ್ಟು ತೃಪ್ತಿ ಇದೆ. ನನ್ನೆಲ್ಲಾ ಸಹೋದ್ಯೋಗಿಗಳೂ, ಆಶಾ ಕಾರ್ಯಕರ್ತೆಯರೂ, ಜನಪ್ರತಿನಿಧಿಗಳೂ,ವಿವಿಧ ವರ್ಗಗಳ ಜನರು ನನಗೆ ಉತ್ತಮ ಸಹಕಾರ ನೀಡಿದ್ದಾರೆ.ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಆಯುಷ್ ವೈದ್ಯಾಧಿಕಾರಿ ಡಾ.ಗೀತಾ ಚಂದ್ರಮೌಳಿ, ಡಾ.ಅರವಿಂದ್ ರವರ ಸಹೋದರ ಅವಿನಾಶ್, ಪ್ರಾ.ಆ.ಕೇಂದ್ರ ಮೇಗರವಳ್ಳಿ ಮತ್ತು ಆಗುಂಬೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದ ಸಭೆಯಲ್ಲಿ.ಆಶಾ ಕಾರ್ಯಕರ್ತೆ ಸುಧಾ ಪ್ರಾರ್ಥಿಸಿ, ಹಿ ಪ್ರಾ. ಆ. ಸುರಕ್ಷಾಧಿಕಾರಿ ನೀಲಮ್ಮ ಸ್ವಾಗತಿಸಿ, ಕಿ ಪ್ರಾ ಆ ಸುರಕ್ಷಾಧಿಕಾರಿ ನಾಗರತ್ನ ನಿರೂಪಿಸಿ,ಶುಶ್ರೂಷಣಾಧಿಕಾರಿ ನಿರ್ಮಲ ವಂದಿಸಿದರು.
#####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305…