
ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ನೌಕರರು ಮತ್ತು ಗ್ರಾಮ ಪಂಚಾಯ್ತಿ ಸಿಬ್ಬಂದಿಗಳನ್ನು ಕೋವಿಡ್-19 ಕೊರೋನಾ ವಾರಿಯರ್ಸ್ ಗಳು ಎಂಬುದಾಗಿ ಘೋಷಣೆ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಈ ಮೂಲಕ ಸೋಂಕಿನಿಂದ ಮರಣ ಹೊಂದಿದ್ದಲ್ಲಿ ಕೋವಿಡ್ ಪರಿಹಾರ, ಚಿಕಿತ್ಸೆ ಪಡೆದಿದ್ದಲ್ಲಿ ವೈದ್ಯಕೀಯ ವೆಚ್ಚ ಮರುಪಾವತಿ ಪಡೆಯುವಂತ ಅವಕಾಶವನ್ನು ನೀಡಿದ್ದಾರೆ.
ಈ ಕುರಿತಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮಹಾದೇವನ್ ನಡವಳಿಗಳನ್ನು ಹೊರಡಿಸಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಅತ್ಯಗತ್ಯ ಸೇವೆಗಳನ್ನು ನೀಡುವ ಇಲಾಖೆಯಾಗಿದ್ದು, ಈ ಇಲಾಖೆಯ ಅಧಿಕಾರಿಗಳು, ನೌಕರರು ಮತ್ತು ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಕೋವಿಡ್-19 ನಿರ್ವಹಣೆಯ ಮುಂಚೂಣಿಯಲ್ಲಿದ್ದು, ಸಾರ್ವಜನಿಕರಿಗೆ ಅವಶ್ಯಕವಿರುವ ಸೇವೆಗಳನ್ನು ನೀಡುತ್ತಿದ್ದಾರೆ.
ಈ ಅಂಶಗಳ ಹಿನ್ನಲೆಯಲ್ಲಿ, ಕೋವಿಡ್ ಕರ್ತವ್ಯಕ್ಕೆ ನಿಯೋಜನೆಗೊಂಡ ಇಲಾಖೆಯ ಅಧಿಕಾರಿ ಮತ್ತು ನೌಕರರು ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಎಂದು ಗುರುತಿಸಿ, ಸದರಿ ಅಧಿಕಾರಿ, ನೌಕರರು ಮತ್ತು ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಕೊರೋನಾ ಕರ್ತವ್ಯ ನಿರ್ವಹಣೆ ವೇಳೆ ಕೋವಿಡ್ ಸೋಂಕಿನಿಂದ ಮರಣ ಹೊಂದಿದಲ್ಲಿ, ಅವರ ಕುಟುಂಬದವರಿಗೆ ಪರಿಹಾರ ನೀಡಲು, ವೈದ್ಯಕೀಯ ವೆಚ್ಚ ಭರಿಸಲು ಅರ್ಹರಿರುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
ಈಗಾಗಲೇ ಇಂತಹ ಕರ್ತವ್ಯ ನಿರ್ವಹಿಸುತ್ತಿರುವ ಕೆಲವೊಂದು ಇಲಾಖೆ ಅಧಿಕಾರಿ, ನೌಕರರನ್ನು ಕೊರೋನಾ ವಾರಿಯರ್ಸ್ ಗಳೆಂದು ಘೋಷಿಸಲಾಗಿದೆ. ಅದರಂತೆ ಗ್ರಾಮೀಣಾಭಿವೃದ್ಧಿ, ಗ್ರಾಮ ಪಂಚಾಯ್ತಿ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಗಳೆಂದು ಘೋಷಿಸುವಂತೆ ಮುಖ್ಯಮಂತ್ರಿಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿ, ನೌಕರುಗಳಿಗೆ ನೀಡಲು ಸೂಚಿಸಿರುತ್ತಾರೆ.
ವರದಿ… ರಘುರಾಜ್ ಹೆಚ್. ಕೆ…
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305…