
ಹೊನ್ನಾಳಿ: ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ನಾಪತ್ತೆಯಾಗಿದ್ದು, ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.
ರೇಣುಕಾಚಾರ್ಯ ಸಹೋದರ ಎಂ.ಪಿ. ರಮೇಶ್ ಅವರ ಹಿರಿಯ ಪುತ್ರ ಎಂ.ಆರ್. ಚಂದ್ರಶೇಖರ್ ಕಾಣೆಯಾಗಿದ್ದಾರೆ. ಇದರಿಂದ ಇಡೀ ಕುಟುಂಬಕ್ಕೆ ಆಘಾತವಾಗಿದ್ದು, ಅಣ್ಣನ ಮಗನ ಹುಡುಕಾಟದಲ್ಲಿ ಶಾಸಕ ರೇಣುಕಾಚಾರ್ಯ ಇದ್ದಾರೆ. ಕಳೆದ ಭಾನುವಾರ ಗೌರಿಗದ್ದೆಗೆ ಕಾರಿನಲ್ಲಿ ತೆರಳಿದ್ದ ಚಂದ್ರಶೇಖರ್ ವಿನಯ್ ಗುರೂಜಿ ಆಶೀರ್ವಾದ ಪಡೆದಿದ್ದರು. ನಂತರ ಚಂದ್ರು, ಶಿವಮೊಗ್ಗದಲ್ಲಿ ಸ್ನೇಹಿತರನ್ನು ಮಾತನಾಡಿಸಿ ಸ್ವಲ್ಪ ಕಾಲ ಅವರ ಜೊತೆ ಕಾಲ ಕಳೆದು ಹೊನ್ನಾಳಿಗೆ ಹಿಂದಿರುಗಿದ್ದರು.
ತಮ್ಮ ಸ್ನೇಹಿತ ಕಿರಣ್ ಎಂಬುವರ ಜೊತೆ ತೆರಳಿದ್ದ ಚಂದ್ರು ಶಿವಮೊಗ್ಗದಿಂದ ವಾಪಸ್ ಆಗಿ ನ್ಯಾಮತಿವರೆಗೂ ಬಂದಿದ್ದಾರೆ. ಆನಂತರ ನಾಪತ್ತೆಯಾಗಿದ್ದಾರೆ. ಚಂದ್ರು ಪ್ರಯಾಣಿಸುತ್ತಿದ್ದ ಕಾರು ಶಿವಮೊಗ್ಗದ ಮೂಲಕ ಹಾದು ಹೋಗುವ ದೃಶ್ಯಗಳು ಪತ್ತೆಯಾಗಿವೆ, ಭಾನುವಾರ ರಾತ್ರಿ ೧೧.೫೬ ರ ಸುಮಾರಿಗೆ ಚಂದ್ರಶೇಖರ್ ಮೆಬೈಲ್ ಆನ್ ನಲ್ಲಿತ್ತು, ಆದರೆ ಬೆಳದ್ದೆ ೬.೪೮ ಕ್ಕೆ ಸ್ವಿಚ್ ಆಫ್ ಆಗಿದೆ, ಚಂದ್ರಶೇಖರ್ ಪ್ರಯಾಣಿಸುತ್ತಿದ್ದ ಕಾರು ಕೂಡ ನಾಪತ್ತೆಯಾಗಿದ್ದು, ಕಿಡ್ನಾಪ್ ಆಗಿರುವ ಅನುಮಾನ ಮೂಡುತ್ತಿದೆ.
ತಮ್ಮ ಸಹೋದರನ ಪುತ್ರ ನಾಪತ್ತೆಯಾಗಿರುವ ಸಂಬಂಧ ಮಾತನಾಡಿರುವ ರೇಣುಕಾಚಾರ್ಯ, ಮಗನನ್ನು ಹುಡುಕಿಕೊಡುವಂತೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡುತ್ತಲೇ ರೇಣುಕಾಚಾರ್ಯ ಕಣ್ಣೀರು ಹಾಕಿದರು. ಪುತ್ರ ಚಂದ್ರಶೇಖರ್ ತುಂಬಾ ಸೌಮ್ಯ ಸ್ವಭಾವದವನು. ಆತನ ಮೊಬೈಲ್ ಸಹ ಸ್ವಿಚ್ಛ್ ಆಫ್ ಆಗಿದೆ. ಆತನ ಕಾರ್ ಸಹ ಪತ್ತೆಯಾಗಿಲ್ಲ , ನನ್ನ ಅಣ್ಣ ರಮೇಶ್‌ನನ್ನು ಸಮಾಧಾನ ಪಡಿಸಲು ಆಗುತ್ತಿಲ್ಲ, ಎಲ್ಲಿದ್ದರೂ ಬೇಗ ಮನೆಗೆ ಬಾ ಮಗನೆ ಎಂದು ರೇಣುಕಾಚಾರ್ಯ ಮನವಿ ಮಾಡಿದ್ದಾರೆ.
ಚಂದ್ರಶೇಖರ್ ಇಶಾ ಫೌಂಡೇಶನ್ ಮತ್ತು ಗೌರಿಗದ್ದೆ ವಿನಯ್ ಗುರೂಜಿ ಅವರ ಅನುಯಾಯಿಯಾಗಿದ್ದರು. ಚಂದ್ರ ಶೇಖರ್ ಕ್ಷೇತ್ರದ ಜನರ ಜೊತೆ ಉತ್ತಮ ಒಡನಾಟ ವಿಟ್ಟುಕೊಂಡಿದ್ದರು, ವಿಧಾನಸಭೆ ಚುನಾವಣೆ ಸಮೀಪಸುತ್ತಿರುವ ಸಮಯದಲ್ಲಿ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಎಸ್‌ಪಿ, ಡಿವೈಎಸ್‌ಪಿ ಮಾರ್ಗದಶರ್ನದಲ್ಲಿ ಮೂರು ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದೇವೆ. ಲಭ್ಯವಿರುವ ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯಾವಳಿಗಳು, ಟೋಲ್ ಗೇಟ್‌ಗಳಲ್ಲಿ ಪರಿಶೀಲನೆ ನಡಸಲಾಗುತ್ತಿದೆ ಎಂದು ಸಿಪಿಐ ಸಿದ್ದೇಗೌಡ ತಿಳಿಸಿದ್ದಾರೆ.
ಶಿವಮೊಗ್ಗ -ದಾವಣಗೆರೆ ಚಿತ್ರದುರ್ಗ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಇನ್ನು ತಮ್ಮ ನಾಯಕನಿಗೆ ಸಮಾಧಾನ ಮಾಡಲು ಎಂಪಿ ರೇಣುಕಾಚಾರ್ಯರ ನಿವಾಸಕ್ಕೆ ಅಪಾರ ಸಂಖ್ಯೆಯ ಕಾರ್ಯಕರ್ತರು ಅಭಿಮಾನಿಗಳು ಆಗಮಿಸುತ್ತಿದ್ದು, ಕೆಎ ೧೭ ಎಂಎ ೨೫೩೪ ನಂಬರಿನ ಕ್ರೇಟಾ ಕಾರು, ಚಂದ್ರಶೇಖರ್ ಮೊಬೈಲ್ ಸಂಖ್ಯೆ ೮೭೯೨೬೬೭೬೯೧ ಇದಾಗಿದ್ದು ಇದುವರೆಗು ಸ್ವಿಚ್ ಆಫ್ ಆಗಿದೆ.
ಓಂಕಾರ ಎಸ್. ವಿ. ತಾಳಗುಪ್ಪ…