
ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಯು ದಿನಾಂಕ:14-08-2023 ರ ಸೋಮವಾರದಂದು ಬೆಳಿಗ್ಗೆ 9-30 ಗಂಟೆಯಿಂದ ಸೊಪ್ಪುಗುಡ್ಡೆಯ ಐಎಂಎ- ರೋಟರಿ ರಕ್ತನಿಧಿಯಲ್ಲಿ ರಕ್ತದಾನ ಮಾಡುವ ಮೂಲಕ 76 ನೇ ಸ್ವಾತಂತ್ರೋತ್ಸವನ್ನು ಸಂಭ್ರಮಿಸುತ್ತಿದೆ.
ತಾಲ್ಲೂಕಿನ ವಿವಿಧ ಇಲಾಖೆಗಳ ಸಹೃದಯಿ ಸರ್ಕಾರಿ ನೌಕರರು ಹಾಗೂ ನಾಗರಿಕ ಬಂಧುಗಳ ಸಹಕಾರದಿಂದ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ದ ಸಂದರ್ಭಗಳಲ್ಲಿ ನಿರಂತರ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವ ಸಂಘದ ಹನ್ನೊಂದನೇ ರಕ್ತದಾನ ಶಿಬಿರ ಇದಾಗಿದ್ದು ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರನ್ನೂ ಸಂಘವು ಕೃತಜ್ಞತೆಯಿಂದ ಸ್ಮರಿಸುತ್ತದೆ.
ಅಗತ್ಯವಿದ್ದವರಿಗೆ ಪೂರೈಸಲು ರಕ್ತದ ಲಭ್ಯತೆ ಕಡಿಮೆ ಇರುವುದರಿಂದ ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಪಾಲ್ಗೊಳ್ಳುವ ಮೂಲಕ ರೋಗಿಗಳ ಜೀವ ಉಳಿಸುವ ಮಹತ್ವದ ಕಾರ್ಯಕ್ಕೆ ಕೈ ಜೋಡಿಸುವಂತೆ ಸಂಘವು ಕೋರಿದೆ.
ರಕ್ತದಾನದ ಬಗ್ಗೆ ಅನೇಕರಲ್ಲಿ ಗೊಂದಲ, ಆತಂಕಗಳು ಈಗಲೂ ಇದೆ. ಅವಶ್ಯಕತೆಯಷ್ಟು ರಕ್ತದ ಪೂರೈಕೆಯ ಅಲಭ್ಯತೆಗೆ ಇದು ಪ್ರಮುಖ ಕಾರಣ. ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಸರಾಸರಿ 5.5 ರಿಂದ 6 ಲೀಟರ್ ನಷ್ಟು ರಕ್ತವಿರುತ್ತದೆ. ರಕ್ತದಾನ ಪ್ರಕ್ರಿಯೆಯಲ್ಲಿ ಕೇವಲ 350 ಮಿ.ಲೀನಷ್ಟೇ ರಕ್ತವನ್ನು ಸ್ವೀಕರಿಸುವುದರಿಂದ ದಾನಿಗೆ ಯಾವುದೇ ಅಪಾಯವಾಗುವುದಿಲ್ಲ. 18 ರಿಂದ 60 ವರ್ಷದೊಳಗಿನ, 45 ಕೆ.ಜಿ.ಗಿಂತಲೂ ಹೆಚ್ಚು ತೂಕವಿರುವ 12.5 ಗ್ರ್ಯಾಮ್‌ಗಿಂತಲೂ ಹೆಚ್ಚು ಹಿಮೋಗ್ಲೋಬಿನ್ ಅಂಶ ಹೊಂದಿರುವ ಎಲ್ಲಾ ಆರೋಗ್ಯವಂತರೂ ರಕ್ತದಾನ ಮಾಡಬಹುದು. ಲಿವರ್, ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು, ಗರ್ಭಿಣಿಯರು, ಋತುಸ್ರಾವದಲ್ಲಿರುವವರು, ಹಾಲುಣಿಸುವ ತಾಯಂದಿರು, ರಕ್ತ ಹೀನತೆ, ಕ್ಯಾನ್ಸರ್, ಕ್ಷಯ, ಅಧಿಕ ರಕ್ತದೊತ್ತಡ, ಅಪಸ್ಮಾರ ಮುಂತಾದ ತೊಂದರೆಗಳಿರುವವರು ರಕ್ತದಾನ ಮಾಡಬಾರದು.
ರಕ್ತದಾನದ ಬಳಿಕ ಹೆಚ್ಚೆಂದರೆ ಒಂದು ತಾಸಿನ ವಿಶ್ರಾಂತಿ ಸಾಕು. ಮೂರು ತಿಂಗಳೊಳಗಾಗಿ ದಾನಿಯ ದೇಹದಲ್ಲಿ ರಕ್ತವು ಮರು ಉತ್ಪತ್ತಿಯಾಗುತ್ತದೆ. ದಾನಿಯಿಂದ ಪಡೆದ ರಕ್ತವನ್ನು ಸಾಮಾನ್ಯವಾಗಿ 35 ದಿನಗಳವರೆಗೆ ಮಾತ್ರ ವಿಶೇಷ ಶೀತಲೀಕರಣ ವ್ಯವಸ್ಥೆಯಲ್ಲಿ ಕಾಪಾಡಿ ಉಪಯೋಗಿಸಲು ಸಾಧ್ಯ. ರಕ್ತವನ್ನು ಕೇವಲ ದಾನದಿಂದಷ್ಟೇ ಪಡೆಯಬಹುದು.
ಆದ್ದರಿಂದ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಹಾಗೂ ಇತರರನ್ನೂ ರಕ್ತದಾನಕ್ಕಾಗಿ ಪ್ರೇರೇಪಿಸುವಂತೆ ಸರ್ವರನ್ನೂ ಕೋರಿರುವ ಸಂಘದ ಅಧ್ಯಕ್ಚ ಟಿ ವಿ ಸತೀಶ ಮತ್ತು ಕಾರ್ಯದರ್ಶಿ ರಾಮು ಬಿ ಅಗಷ್ಟ್ 14 ರಂದು ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಬಂಧುಗಳು ತಮಗೆ ಅನುಕೂಲವಾದ ಸಮಯಕ್ಕೆ ತಮ್ಮ ಸಮೀಪದ ರಕ್ತನಿಧಿ ಕೇಂದ್ರಕ್ಕೆ ತೆರಳಿ ರಕ್ತದಾನ ಮಾಡುವಂತೆ ಎಲ್ಲರನ್ನೂ ಕೋರಿದ್ದಾರೆ.