
ರಾಜ್ಯ 7ನೇ ವೇತನ ಆಯೋಗದಿಂದ ಶೀಘ್ರ ವರದಿ ಪಡೆದು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಷ್ಕರಿಸಿ ಆದೇಶ ಹೊರಡಿಸುವುದು. ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಲು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ತೀರ್ಥಹಳ್ಳಿ ವತಿಯಿಂದ ಶಾಸಕ ಆರಗ ಜ್ಞಾನೇಂದ್ರರವರಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಟಿ ವಿ ಸತೀಶ ಮಾತನಾಡಿ,
ವೇತನ ಆಯೋಗ ರಚನೆಯಾಗಿ ಹದಿಮೂರು ತಿಂಗಳಾಗಿದ್ದರೂ ಸರ್ಕಾರ ಇನ್ನೂ ವರದಿಯನ್ನು ಪಡೆದುಕೊಂಡಿಲ್ಲ.ಈಗಾಗಲೇ ಎರಡು ಬಾರಿ ಆಯೋಗದ ಅವಧಿ ವಿಸ್ತರಿಸಿ ಆದೇಶಿಸಲಾಗಿದೆ. ವರದಿಯನ್ನು ಕೂಡಲೇ ಪಡೆದುಕೊಂಡು ಅನುಷ್ಟಾನಗೊಳಿಸಬೇಕಿದೆ. ರಾಜ್ಯದ ಎನ್.ಪಿ.ಎಸ್. ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್.ಪಿ.ಎಸ್. ನೌಕರರನ್ನು ಓ.ಪಿ.ಎಸ್. ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ,ಚತ್ತಿಸ್‌ಘಡ, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುವಂತೆ ಹಾಗೂ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಕರ್ನಾಟಕದಲ್ಲೂ ಸಹ ಎನ್.ಪಿ.ಎಸ್. ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕಿದೆ. ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ”ಯ ಆದೇಶವಾಗಿದ್ದು ಅದನ್ನು ಕೂಡಲೇ ಜಾರಿಗೊಳಿಸಬೇಕಿದೆ. ರಾಜ್ಯ ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆಗಳನ್ನು ಜಾರಿಗೊಳಿಸಲು ಈಗಾಗಲೇ ಬಹಳಷ್ಟು ವಿಳಂಬವಾಗಿರುವುದರಿಂದ, ಶೀಘ್ರ ಸರ್ಕಾರಿ ಆದೇಶವನ್ನು ಹೊರಡಿಸುವ ಮೂಲಕ ಜಾರಿಗೊಳಿಸುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ತೀರ್ಥಹಳ್ಳಿ ತಾಲ್ಲೂಕಿನ ನೌಕರರ ಪರವಾಗಿ ಒತ್ತಡ ತರುವಂತೆ ಹಾಗೂ ಶಿಫಾರಸ್ಸು ಮಾಡುವಂತೆ ಸಂಘವು ಶಾಸಕರಿಗೆ ಮನವಿ ಮಾಡುತ್ತದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ, ಸಂಘದ ಬೇಡಿಕೆಗಳು ನ್ಯಾಯಯುತವಾಗಿದ್ದು ಅದನ್ನು ಈಡೇರಿಸುವುದು ಸರ್ಕಾರದ ಕರ್ತವ್ಯವಾಗಿದೆ.ಈ ದಿಸೆಯಲ್ಲಿ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯವನ್ನು ಮಾಡುವುದಾಗಿಯೂ ಮುಂಬರುವ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ನೌಕರರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನೂ ಮಾಡುವುದಾಗಿ ತಿಳಿಸಿದರು. ಸಂಘದ ಕಾರ್ಯದರ್ಶಿ ರಾಮು ಬಿ, ಖಜಾಂಚಿ ಪವಿತ್ರ ಹೆಚ್ ಸಿ,ಹಿರಿಯ ಉಪಾಧ್ಯಕ್ಷ ರಾಘವೇಂದ್ರ ಎಸ್, ಉಪಾಧ್ಯಕ್ಷರಾದ ಎಲ್ಲಪ್ಪ ವಡ್ಡರ್, ಸುಷ್ಮ ಎಸ್ ಪಿ,ಸತೀಶ್ ಟಿ ಆರ್ ಮತ್ತಿತರ ಪದಾಧಿಕಾರಿಗಳೂ, ನಿರ್ದೇಶಕರೂ,ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ, ಅರಣ್ಯ ಇಲಾಖಾ ಸಂಘ, ಪ್ರೌಢಶಾಲಾ ಸಹಶಿಕ್ಷಕರ ಸಂಘ, ಆರೋಗ್ಯ ಇಲಾಖಾ ಅಧಿಕಾರಿಗಳೂ ಮತ್ತು ನೌಕರರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಕೃಷಿ ಅಧಿಕಾರಿಗಳ ಸಂಘ, ಮುಖ್ಯೋಪಾಧ್ಯಾಯರ ಸಂಘ, ದೈಹಿಕ ಶಿಕ್ಷಕರ ಸಂಘ,ಲಿಪಿಕ ನೌಕರರ ಸಂಘ,ಎನ್‌ಪಿಎಸ್ ಸಂಘ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ಸಂಘ, ಆರ್‌ಡಿಪಿಆರ್ ಸಂಘ, ಕಂದಾಯ ಇಲಾಖೆ ನೌಕರರ ಸಂಘ ಸೇರಿದಂತೆ ವಿವಿಧ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳೂ, ಸಿಬ್ಬಂದಿಗಳೂ ಇದ್ದರು.