
ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮಕ್ಕೆ ಹೊಂದಿಕೊಂಡ ಹನುಮನಕೊಪ್ಪದಲ್ಲಿ ಹಿಂದಿನ ಕಾಲದಿಂದಲೂ ಅಂದರೆ 1936 ರಿಂದ ಇಲ್ಲಿಯವರೆಗೂ ಪ್ರತಿ ವರ್ಷ ಯುಗಾದಿಯ ಹಿಂದಿನ ದಿನ ಅಮಾವಾಸ್ಯೆ ದಿನದಂದು ಗೊಂಬೆಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ.
ನಾಲ್ಕು ದಿಕ್ಕುಗಳಿಗೂ ನಾಲ್ಕು ಗೊಂಬೆಗಳನ್ನು ಗ್ರಾಮಸ್ಥರು ಪ್ರತಿಷ್ಠಾಪನೆ ಮಾಡುತ್ತಾರೆ. ಗ್ರಾಮದ ಹಳ್ಳದ ದಂಡೆಯಲ್ಲಿ ಈ ಪ್ರತಿಷ್ಠಾಪನೆ ನಡೆಯುತ್ತದೆ ನಂತರದ ದಿನ ಬೆಳಗಿನ ಜಾವ ಈ ಸ್ಥಳಕ್ಕೆ ಬಂದು ಗ್ರಾಮದ ಹಿರಿಯರು ಗೊಂಬೆಗಳನ್ನು ಪರೀಕ್ಷಿಸುತ್ತಾರೆ.
ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯವನ್ನು ಅವಲೋಕಿಸಲಾಗುತ್ತದೆ.
ಗ್ರಾಮಸ್ಥರ ಪ್ರಕಾರ ಬೊಂಬೆಯ ಅಂಗಾಂಗಗಳಿಗೆ ಧಕ್ಕೆಯಾದರೆ ನಾಯಕತ್ವ ಹೋಗುತ್ತದೆ ಎಂಬುದು ಸಾಮಾನ್ಯ ಭವಿಷ್ಯ. ಅದೇ ರೀತಿ ಕಳೆದ ಬಾರಿ ಗೊಂಬೆಯ ಅಂಗಾಂಗಗಳಿಗೆ ಧಕ್ಕೆಯಾಗಿದ್ದು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು ಭವಿಷ್ಯ ನಿಜವಾಗಿತ್ತು. ಈ ಬಾರಿ ಗೊಂಬೆಗೆ ಯಾವುದೇ ಧಕ್ಕೆಯಾಗಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಆಗುವುದಿಲ್ಲ ಎಂಬ ಭವಿಷ್ಯ ನುಡಿಯಲಾಗಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿ ಬದಲಾವಣೆ ಇಲ್ಲ ಎನ್ನುವ ಸಂದೇಶವನ್ನು ಗೊಂಬೆ ನೀಡಿದೆ ಎನ್ನಲಾಗುತ್ತಿದೆ. ಹಾಗಾಗಿ ಗೊಂಬೆ ಭವಿಷ್ಯದ ಪ್ರಕಾರ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.