“ವೈದ್ಯವಿಜ್ಞಾನವು ವ್ಯಕ್ತಿಯು ಸಾವನ್ನು ಘನತೆಯಿಂದ ಸ್ವೀಕರಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ವಿಚಾರ ಮಾಡಬೇಕು” ಎಂದು ಕುವೆಂಪು ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ ಶರತ್ ಅನಂತಮೂರ್ತಿ ಹೇಳಿದರು.
ಅವರು ಭಾರತೀಯ ವೈದ್ಯಕೀಯ ಸಂಘ, ಶಿವಮೊಗ್ಗ ಶಾಖೆಯ 2024-25ನೇ ಅವಧಿಯ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು ಭಾರತೀಯ ವೈದ್ಯಕೀಯ ಸಂಘದ ಯೂಟ್ಯೂಬ್ ಚಾನೆಲ್ ಗೆ ಚಾಲನೆ ಕೊಟ್ಟರು. ಮೊದಲ ಯೂಟ್ಯೂಬ್ ವೀಡಿಯೊದಲ್ಲಿ ನಿಯೋಜಿತ ಅಧ್ಯಕ್ಷ ಡಾ ರವೀಶ್ ಕೆ ಆರ್ ನಿರೂಪಿಸಿದ ಶಿವಮೊಗ್ಗ ಐ ಎಂ ಎ ನಡೆದು ಬಂದ ದಾರಿಯ ವಿವರಣೆ ಇದ್ದು ಎಲ್ಲ ಸದಸ್ಯರೂ ಮೆಚ್ಚುಗೆ ವ್ಯಕ್ತ ಪಡಿಸಿದರು.
ಭಾರತೀಯ ವೈದ್ಯಕೀಯ ಸಂಘದ ಈ ಬಾರಿಯ ಅಧ್ಯಕ್ಷರಾಗಿರುವ ಡಾ ಶ್ರೀಧರ ಎಸ್ ನಮ್ಮ ಸಂಘವು ಸಾರ್ವಜನಿಕರಲ್ಲಿ ಆರೋಗ್ಯದ ಅರಿವನ್ನು ಹೆಚ್ಚಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದರು.
ಡಾ ಮೈಥಿಲಿಯವರ ಸುಮಧುರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂಘದ ಕಾರ್ಯದರ್ಶಿ ಡಾ ವಿನಯ ಶ್ರೀನಿವಾಸ್ ಎಲ್ಲರನ್ನು ಸ್ವಾಗತಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಡಾ ವಿಶಾಲಾಕ್ಷಿ ಮೂಗಿ ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸಂಘದ ಪೂರ್ವಾಧ್ಯಕ್ಷ ಡಾ ಸಿ ರಮೇಶ್, ಡಾ ಅರವಿಂದನ್ ಆರ್, ಡಾ ಭಾಗ್ಯಶ್ರೀ ಕಟಾರಿ ಉಪಸ್ಥಿತರಿದ್ದರು. ಡಾ ಪ್ರೀತಿ ಪೈ ಕಾರ್ಯಕ್ರಮದ ನಿರೂಪಣೆ ಮಾಡಿದರು.