ಹಿರಿಯರಿಗೆ ಗೌರವ ಕೊಡುವ ಪರಂಪರೆ ಎಲ್ಲಾ ಕಡೆಯಿದೆ. ಗೌರವದೊಂದಿಗೆ ಅವರ ಅಗತ್ಯಗಳನ್ನು ಪೂರೈಸುವುದೂ ಅಷ್ಟೇ ಮುಖ್ಯ. ಈ ದೃಷ್ಟಿಯಲ್ಲಿ ನಮ್ಮ ಪ್ರಧಾನಮಂತ್ರಿ ಮೋದಿಯವರ ಹೊಸ ಕೊಡುಗೆ” ಆಯುಷ್ಮಾನ್ ವಯೋವಂದನ ಕಾರ್ಡ್”. ಅಂದರೆ ಎಪ್ಪತ್ತು ವರ್ಷ ತುಂಬಿದ ಎಲ್ಲಾ ಹಿರಿಯನಾಗರಿಕರಿಗೆ, ಜಾತಿ, ಮತ, ಲಿಂಗ ವರಮಾನದ ಭೇದ ಮಾಡದೆ ಐದುಲಕ್ಷ ರೂಪಾಯಿಗಳ ಆರೋಗ್ಯ ವಿಮೆ. ನಿನ್ನೆ ಅಂದರೆ ನವೆಂಬರ್ ಹದಿನೈದು, ಶುಕ್ರವಾರ ಸಂಜೆ ಸಾಗರದ ವಿಜಯನಗರ ಬಡಾವಣೆಯ ” ಶ್ರೀ ರಾಮ ನವಮಿ” ಮನೆಯ ಮಾಲಿಕರಾದ ರಂಜನಾ ಸುರೇಶ ಇವರು ಈ ಕಾರ್ಡ್ ಗಳನ್ನು ಅಗತ್ಯ ಇರುವ ಹಿರಿಯರಿಗೆ ತಲುಪಿಸಲು ಅನುಕೂಲ ಮಾಡಿರುತ್ತಾರೆ. ನಮ್ಮ ಬಡಾವಣೆಯ ಈ ರಂಜನಾ ಮೇಡಂ ಸದಾ ಕ್ರಿಯಾಶೀಲರಾಗಿರುವ ಪರಿಸರ ಪ್ರೇಮಿ ಗೃಹಿಣಿ. ಮನೆಯ ಸುತ್ತಮುತ್ತ ಹಸಿರು ಗಿಡ- ಮರಗಳಿರುವ ಇವರ ಮನೆಯೇ ಒಂದು ಚೆಂದದ ಹಸಿರುಮನೆ. ನಿನ್ನೆ ಸುಮಾರು ಐವತ್ತು ಹಿರಿಯರು ಈ ಕಾರ್ಡ್ ಪಡೆದೆವು. ಹತ್ತಿರ, ದೂರದ ಬಡಾವಣೆ ಮತ್ತು ಹಳ್ಳಿಗಳಿಂದಲೂ ಕೆಲವು ಹಿರಿಯರು ಬಂದಿದ್ದರು.
ರಂಜನಾರ ಮನೆಯಲ್ಲಿ ಹಬ್ಬದ ಸಡಗರ- ಸಂಭ್ರಮ. ನಮ್ಮೆಲ್ಲರನ್ನು ಸ್ವಾಗತಿಸಿ ನೋಂದಣಿ ಮಾಡಿಕೊಳ್ಳಲು ನಮ್ಮ ಬೀದಿಯ ಯಕ್ಷಗಾನ ಕಲಾವಿದೆ ವೀಣಕ್ಕ ಕೂಡ ಸಹಕರಿಸಿದ್ದು ಗಮನಾರ್ಹ. ಪ್ರತಿ ಬಡಾವಣೆಯಲ್ಲಿಯೂ ಇಂಥ ಸೇವೆ ಸಿಕ್ಕರೆ ಮಾನ್ಯ ಮೋದಿಯವರಿಗೆ ಸಹಕಾರ ಕೊಟ್ಟಂತೆ. ನಮ್ಮೆಲ್ಲರಿಗೂ ಈ ಆಯುಷ್ಮಾನ್ ವಯೋವಂದನ ಕಾರ್ಡ್ ಕೊಡಿಸಿದ ರಂಜನಾ ಮತ್ತು ಅವರ ಬಾಳ ಸಂಗಾತಿ ಬೇದೂರು ಸುರೇಶ ಅವರಿಗೂ ಎಲ್ಲ ಹಿರಿಯರ ಪರವಾಗಿ ಧನ್ಯವಾದಗಳು. ನಮ್ಮ ರಾಜ್ಯದ ಪ್ರತಿ ಪೇಟೆ- ಹಳ್ಳಿಗಳಲ್ಲಿ ಇಂಥ ಸೇವಾ ಮನೆಗಳು ಸಾವಿರ ಸಾವಿರವಾಗಲಿ.