ಬೆಂಗಳೂರು: ಚಾರ್ಟೆಡ್ ಅಕೌಂಟೆಂಟ್( CA )ಫೌಂಡೇಶನ್ ಪರೀಕ್ಷೆಗೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ಮುಂದೂಡಲಾಗಿದ್ದ ಬಿ.ಕಾಂ ಪರೀಕ್ಷೆಗಳನ್ನು ನಿಗದಿಯಂತೆ ನಾಳೆಯಿಂದ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠವು ಇಂದು ಮಹತ್ವದ ತೀರ್ಪು ನೀಡಿದೆ .
ಬಿ.ಕಾಂ ಪರೀಕ್ಷೆ ಗೊಂದಲ ಸಂಬಂಧ ಈ ಮೊದಲು ಪರೀಕ್ಷೆ ಮುಂದೂಡುವಂತೆ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬೆಂಗಳೂರು ವಿ.ವಿ. ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆ ನಡೆಸಿರುವ ವಿಭಾಗೀಯ ಪೀಠ ಈ ಆದೇಶವನ್ನು ನೀಡಿದೆ.
ವಿಶ್ವವಿದ್ಯಾನಿಲಯದ ಪರಮಾಧಿಕಾರ :
ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿರುವ ನ್ಯಾ.ಅನು ಶಿವರಾಮನ್, ನ್ಯಾ.ಎಂ.ಐ.ಅರುಣ್ ಅವರ ವಿಭಾಗೀಯ ಪೀಠವು ಬಿ.ಕಾಂ ಪರೀಕ್ಷೆ ಮುಂದೂಡಿಕೆಯಿಂದ 35 ಸಾವಿರ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದೆ.
ಕೇವಲ 5 ವಿದ್ಯಾರ್ಥಿಗಳು ಸಲ್ಲಿಸಿರುವ ಮನವಿಯಿಂದ ಪರೀಕ್ಷೆ ಮುಂದೂಡಲಾದು ಎಂದಿರುವ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಬಿ.ಕಾಂನ 1,2,3ನೇ ಸೆಮಿಸ್ಟರ್ ಪರೀಕ್ಷೆಯನ್ನು ನಿಗದಿತ ದಿನಾಂಕಕ್ಕೆ (ಜ.13ರಿಂದ) ನಡೆಸುವಂತೆ ಅನುಮತಿಸಿದೆ. ವಿ.ವಿ.ಪರೀಕ್ಷೆ ಮರು ನಿಗದಿ ಮಾಡುವುದು ಸರಿಯುಲ್ಲ. ಪರೀಕ್ಷೆ ನಡೆಸುವುದು , ನಿಗದಿ ಮಾಡುವುದು ವಿಶ್ವವಿದ್ಯಾಲಯದ ಪರಮಾಧಿಕಾರವಾಗಿರುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.