ಹಾಸನ ತಾಲ್ಲೂಕಿನ ಶಾಂತಿಗ್ರಾಮದ ಬಳಿ ಫೈರಿಂಗ್ ನಡೆದಿದ್ದು, ರೌಡಿಶೀಟರ್ ಮನುವನ್ನು ಪೊಲೀಸರು ಬಂಧಿಸಿ, ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮನು ಚೇತರಿಸಿಕೊಳ್ಳುತ್ತಿದ್ದಾನೆ,
ಎರಡು ದಿನಗಳ ಹಿಂದೆ ರಾತ್ರಿ ಬಸ್ ಅಡ್ಡಗಟ್ಟಿ ಲಾಂಗ್ ನಿಂದ ಅಟ್ಯಾಕ್ ಮಾಡಿದ್ದ ರೌಡಿ ಶೀಟರ್, ಬಸ್ ನ ಮುಂಭಾಗದ ಗಾಜನ್ನು ಪುಡಿಪುಡಿ ಮಾಡಿದ್ದ ಬಸ್ ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿತ್ತು. ತನ್ನ ಕಾರಿಗೆ ಬಸ್ ಅಡ್ಡ ಬಂದಿದೆ ಎಂದು ಆರೋಪಿಸಿ ರೌಡಿ ಶೀಟರ್ ಮನು ಬಸ್ ಗಾಜನ್ನು ಮಾರಕಾಸ್ತ್ರಗಳಿಂದ ಹೊಡೆದು ಪುಡಿ ಪುಡಿ ಮಾಡಿದ್ದ. ಈ ಸಂಬಂಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಆರೋಪಿ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ದಾಳಿ ಮಾಡಲು ಮನು ಮುಂದಾದಾಗ ಪೊಲೀಸರು ಆತನ ಕಾಲಿಗೆ ಗುಂಡಿಕ್ಕಿದ್ದಾರೆ. ಈ ಘಟನೆಯಲ್ಲಿ ಕಾನ್ಸ್ ಟೇಬಲ್ ಒಬ್ಬರಿಗೆ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಸನ ನಗರ ಠಾಣೆ ಇನ್ಸ್ ಪೆಕ್ಟರ್ ಮೋಹನ್ ಕೃಷ್ಣ ಅವರು ಫೈರಿಂಗ್ ಮಾಡಿದ್ದಾರೆ. ರೌಡಿ ಶೀಟರ್ ಮನು ವಿರುದ್ಧ ಮೂರು ಕೊಲೆ ಯತ್ನ, ಒಂದು ಕೊಲೆ ಕೇಸ್ ಇದೆ .
ಏನಿದು ಪ್ರಕರಣ :
ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಮೂರು ದಿನಗಳ ಹಿಂದೆ ಬುಧವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡಲಾಗಿ ನಿಲ್ಲಿಸಿದ ರೌಡಿಶೀಟರ್ ಮನು, ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿದ್ದಾನೆ. ಪುಡಿ ರೌಡಿಯ ಹುಚ್ಚಾಟ ಬಸ್ಸಿನಲ್ಲಿದ್ದವರು ಮೊಬೈಲಿನಲ್ಲಿ ಸೆರೆ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಬಸ್ಸಿಗೆ ಹೀಗೆ ಆದರೆ ಇನ್ನೂ ಕಾರು, ಬೈಕಿನಲ್ಲಿ ಪ್ರಯಾಣ ಮಾಡುವವರು ಏನು ಮಾಡಬೇಕು ಎಂದು ಸಾರ್ವಜನಿಕರು ಪೊಲೀಸರನ್ನು ಪ್ರಶ್ನಿಸಿದ್ದರು.