
ಬೆಂಗಳೂರು: ಸೆಪ್ಟೆಂಬರ್:23>ಶರಾವತಿ ಮುಳುಗಡೆ ಪ್ರದೇಶಗಳ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವ ಸಂಬಂಧ 1978 ರ ಅರಣ್ಯ ಕಾಯ್ದೆ ಅನ್ವಯ ಕೇಂದ್ರ ಸರ್ಕಾರದ ಪೂರ್ವ ಅನುಮತಿ ಪಡೆಯಲು ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕಳುಹಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚಿಸಿದರು.
ಅವರು ಇಂದು ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದಂತೆ ಶರಾವತಿ ಮುಳುಗಡೆಗೆ ಒಳಗಾದ ರೈತರ ಸಮಸ್ಯೆಗಳು, ಶರಾವತಿ ಆಭಯಾರಣ್ಯ, ಅರಣ್ಯ ಕಾಯ್ದೆ ಹಾಗೂ ಸಿ& ಡಿ ಭೂಮಿಯ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಈ ಸಂಬಂಧ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿ ಸೂಚಿಸಿರುವಂತೆ ಅನುಸೂಚಿತ ಮೀಸಲು ಅರಣ್ಯ ಪ್ರದೇಶ ಡಿನೋಟಿಫಿಕೇಷನ್ ನಿರ್ಧಾರ ಕೈಗೊಳ್ಳುವ ಮುನ್ನ ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿಗಳು ರಚಿಸಿದ್ದ ಟಾಸ್ಕ್ ಫೋರ್ಸ್ ಕ್ರಿಯಾಶೀಲಗೊಳಿಸಲು ಟಾಸ್ಕ್ ಫೋರ್ಸ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದು
ಮುಖ್ಯಮಂತ್ರಿಗಳು ತಿಳಿಸಿದರು.
ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲು ಹೊಸ ಸಮೀಕ್ಷೆಯನ್ನು ನಡೆಸಬೇಕಿದ್ದು, ಈ ಕಾರ್ಯವನ್ನು 3-5 ತಿಂಗಳೊಳಗಾಗಿ ಮುಕ್ತಾಯ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇದಕ್ಕಾಗಿ ವಿಶೇಷ ಜಿಲ್ಲಾಧಿಕಾರಿ, ಅರಣ್ಯ ವ್ಯವಸ್ಥಾಪನಾಧಿಕಾರಿಗಳನ್ನು ತಕ್ಷಣವೇ ನೇಮಿಸಲಾಗುವುದೆಂದು ಮುಖ್ಯಮಂತ್ರಿಗಳು ತಿಳಿಸಿದರು.
ಶೆಟ್ಟಿಹಳ್ಳಿ ಅಭಯಾರಣ್ಯ ಗಡಿಗಳನ್ನು ಪುನರ್ ನಿಗದಿಪಡಿಸುವ ಬಗ್ಗೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ ಶಿವಮೊಗ್ಗ ನಗರದ ಪ್ರಮುಖ ಭಾಗಗಳು ಸೇರಿದಂತೆ ಜನವಸತಿ ಹಾಗೂ ಸರ್ಕಾರಿ ಕಟ್ಟಡಗಳಿರುವ ಪ್ರದೇಶಗಳು ಅಭಯಾರಣ್ಯದ ವ್ಯಾಪ್ತಿಗೆ ಬರುತ್ತಿದ್ದು, ಗಡಿ ಪುನರ್ ನಿಗದಿಪಡಿಸುವುದರಿಂದ ಸಮಸ್ಯೆ ಬಗೆಹರಿಸಬಹುದು ಎಂದರು.
ಈ ಬಗ್ಗೆ ಈಗಾಗಲೇ ಕ್ರಮ ಜರುಗಿಸಲಾಗಿದ್ದು, ವನ್ಯಜೀವಿ ಪ್ರದೇಶವನ್ನು ನಿಗದಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಗಡಿ ನಿಗದಿಪಡಿಸುವ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಕಲ್ಲು ಗಣಿಗಾರಿಕೆ ಅನುಮತಿ ನೀಡಿದ ಮುಖ್ಯಮಂತ್ರಿಗಳು: ಕಲ್ಲು ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕುಂಟಾಗಿದೆ ಎಂದು ಜಿಲ್ಲೆಯ ಶಾಸಕರು ಮಾಡಿದ ಮನವಿಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಿ ಜಿಲ್ಲೆಯಲ್ಲಿ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬಾರದ ಪರವಾನಗಿ ಹೊಂದಿರುವ ಕಲ್ಲು ಗಣಿಕಾರಿಕೆಗಳನ್ನು ಪ್ರಾರಂಭಿಸಲು ಅನುಮತಿ ನೀಡುವಂತೆ ಸೂಚಿಸಿದರು. ವಾರದೊಳಗೆ ಸಾಧ್ಯವಿರುವಲ್ಲಿ ಕಲ್ಲು ಗಣಿಗಾರಿಕೆಯನ್ನು ಪ್ರಾರಂಭಿಸಲು ಅನುಮತಿ ನೀಡಲು ಅವರು ಸೂಚಿಸಿದರು.
ಸಂರಕ್ಷಿತ ಅರಣ್ಯ: ಸಂರಕ್ಷಿತ ಅರಣ್ಯಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸಭೆ ನಡೆಸಿ ಜನರಿಗೆ ಅನುಕೂಲ ಕಲ್ಪಿಸುವಂತೆ ಅವರು ತಿಳಿಸಿದರು.
ಶಿವಮೊಗ್ಗ, ಶಿಕಾರಿಪುರ –ರಾಣೆಬೆನ್ನೂರು ಹೊಸ ರೈಲ್ವೆ ಮಾರ್ಗದ ಅರಣ್ಯ ಇಲಾಖೆ ಯೋಜನೆಗಳ ಪ್ರಗತಿಯ ವೇಗ ಹೆಚ್ಚಿಸುವ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಶಿವಮೊಗ್ಗ ಜಿಲ್ಲೆಗೆ ವಿಶೇಷ ಅರಣ್ಯ ಅಧಿಕಾರಿಗಳನ್ನು ನೇಮಿಸಲು ಮುಖ್ಯಮಂತ್ರಿಗಳು ಸೂಚಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಅರಣ್ಯ ಭೂಮಿ ಗುತ್ತಿಗೆ ನವೀಕರಣಕ್ಕೆ ಅರಣ್ಯ ಮತ್ತು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.
ಸಚಿವರಾದ ಅರಬೈಲ್ ಶಿವರಾಮ್, ಆರಗ ಜ್ಞಾನೇಂದ್ರ, ಉಮೇಶ್ ಕತ್ತಿ, ಸುನಿಲ್ ಕುಮಾರ್, ಎಂ.ಎಸ್.ಐ.ಎಲ್ ಅಧ್ಯಕ್ಷ ಹರತಾಳು ಹಾಲಪ್ಪ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ:9449553305/7892830899…