
ಕಳೆದ ಕೆಲವು ವರ್ಷಗಳಲ್ಲಿ ಜಗತ್ತಿನಾದ್ಯಂತ ಭಾರತದ ಸ್ಥಾನಮಾನ ಸುಧಾರಿಸಿದೆ. ಸಾಮಾನ್ಯ ದೇಶಪ್ರೇಮಿ ವ್ಯಕ್ತಿಗಳಿಂದ ಉಚ್ಚಮಟ್ಟದ ಹುದ್ದೆಯಲ್ಲಿರುವ ವ್ಯಕ್ತಿಗಳವರೆಗೆ ಅನೇಕ ಜನರು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುವ ಕನಸು ಕಾಣುತ್ತಿದ್ದಾರೆ; ಆದರೆ ಜಾತ್ಯತೀತ ಭಾರತದಲ್ಲಿ ಈ ಕನಸು ನನಸಾಗಲು ಅಸಾಧ್ಯವಾಗಿದೆ. ಅದು ಹಿಂದೂ ರಾಷ್ಟ್ರವಾದರೆ ಮಾತ್ರ ಭಾರತವು ಮಹಾಧಿಕಾರ ಅಥವಾ ವಿಶ್ವಗುರು ಆಗಬಹುದು. ಹಿಂದೂ ರಾಷ್ಟ್ರವೆಂಬುದು ಇಸ್ಲಾಮೀ ಅಥವಾ ಕ್ರೈಸ್ತ ದೇಶಗಳ ಹಾಗೆ ಸಂಕುಚಿತ ಕಲ್ಪನೆಯಲ್ಲ, ಅದು ವಿಶ್ವಕಲ್ಯಾಣದ ವಿಚಾರ ಮಾಡುವ, ಪ್ರತಿಯೊಬ್ಬ ನಾಗರಿಕನ ಐಹಿಕ ಹಾಗೂ ಪಾರಲೌಕಿಕ ಉನ್ನತಿಯ ವಿಚಾರ ಮಾಡುವ ಒಂದು ಸತ್ತ್ವಪ್ರಧಾನ ವ್ಯವಸ್ಥೆಯಾಗಿದೆ.
೧. ಹಿಂದುತ್ವದ ವ್ಯಾಪಕ ಸಂಕಲ್ಪನೆ : ಮೇರುತಂತ್ರವೆಂಬ ಧರ್ಮಗ್ರಂಥದಲ್ಲಿ ‘ಹೀನಂ ದೂಷಯತಿ ಇತಿ ಹಿಂದೂಃ’ ಈ ರೀತಿಯಲ್ಲಿ ಹಿಂದೂ ಶಬ್ದದ ವ್ಯಾಖ್ಯೆಯನ್ನು ನೀಡಲಾಗಿದೆ. ಇದರ ಅರ್ಥ, ಯಾರು ತನ್ನಲ್ಲಿನ ಹೀನ ಅಥವಾ ಕನಿಷ್ಠವಾದ ರಜ-ತಮ ಗುಣಗಳನ್ನು ನಾಶ ಮಾಡುತ್ತಾನೊ, ಅವನೇ ಹಿಂದೂ. ಇಂತಹ ಸಾತ್ತ್ವಿಕ ಆಚರಣೆಯನ್ನು ಮಾಡುವ ವ್ಯಕ್ತಿಯು ಕೇವಲ ತನ್ನ ಬಗೆಗಿನ ಸಂಕುಚಿತ ವಿಚಾರವನ್ನು ಮಾಡುವುದಿಲ್ಲ. ಅವನು ವಿಶ್ವ ಕಲ್ಯಾಣದ ವಿಚಾರ ಮಾಡುತ್ತಾನೆ. ಇತಿಹಾಸದಲ್ಲಿ ಇದರ ಅನೇಕ ಉದಾಹರಣೆಗಳಿವೆ. ಋಗ್ವೇದದಲ್ಲಿ ‘ಕೃಣ್ವಂತೋ ವಿಶ್ವಂ ಆರ್ಯಮ್ |’ ಅಂದರೆ ‘ಸಂಪೂರ್ಣ ವಿಶ್ವವನ್ನು ಆರ್ಯ ಅಂದರೆ ಸುಸಂಸ್ಕೃತಗೊಳಿಸುವೆವು, ಎಂದು ಹೇಳಲಾಗಿದೆ. ಉಪನಿಷತ್ತಿನಲ್ಲಿ ‘ವಸುಧೈವ ಕುಟುಂಬಕಂ’ ಎಂಬ ಸಂಕಲ್ಪನೆಯನ್ನು ಮಂಡಿಸಲಾಗಿದೆ. ಇದರ ಅರ್ಥ ‘ಇದು ನನ್ನದು, ಇದು ನನ್ನದಲ್ಲ’, ಎನ್ನುವ ವಿಚಾರಗಳು ಕ್ಷುದ್ರಬುದ್ಧಿಯವರದ್ದಾಗಿರುತ್ತದೆ. ಉದಾರ ಚಾರಿತ್ರ್ಯದ ಜನರಿಗೆ ಸಂಪೂರ್ಣ ಪೃಥ್ವಿಯು ತನ್ನ ಕುಟುಂಬವೇ ಆಗಿದೆ ಎಂದು ಅನಿಸುತ್ತದೆ.’ ಸಂತಜ್ಞಾನೇಶ್ವರರು ಜ್ಞಾನೇಶ್ವರಿಯಲ್ಲಿ ‘ಈ ವಿಶ್ವವೇ ನನ್ನ ಮನೆ’, ಎಂದು ಹೇಳಿದ್ದಾರೆ ಮತ್ತು ‘ಪಸಾಯದಾನ’ ಈ ಪ್ರಾರ್ಥನೆಯಲ್ಲಿ ವಿಶ್ವಕಲ್ಯಾಣವಾಗಬೇಕೆಂಬ ದಾನವನ್ನು ಬೇಡಿದ್ದಾರೆ. ‘ಹಿಂದೂ ರಾಷ್ಟ್ರ’ ಎಂಬ ಸಂಕಲ್ಪನೆಯು ಇದೇ ಆಧಾರದಲ್ಲಿರುವುದರಿಂದ ಈ ಸಂಕಲ್ಪನೆಯನ್ನು ತಿಳಿದುಕೊಂಡರೆ, ಹಿಂದೂ ರಾಷ್ಟ್ರದ ವಿಷಯದಲ್ಲಿರುವ ಅನಾವಶ್ಯಕ ಆಕ್ಷೇಪಗಳು ತನ್ನಿಂತಾನೇ ನಿವಾರಣೆಯಾಗುವವು.
೨. ಹಿಂದೂ ರಾಷ್ಟ್ರದ ಅವಶ್ಯಕತೆ : ವಾಸ್ತವದಲ್ಲಿ ಭಾರತ ಒಂದು ಸ್ವಯಂಭೂ ಹಿಂದೂ ರಾಷ್ಟ್ರವೇ ಆಗಿತ್ತು. 1947 ರಲ್ಲಿ ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾದ ನಂತರ ಇಸ್ಲಾಂನ ಅನುಯಾಯಿಗಳಿಗೆ ಪಾಕಿಸ್ತಾನವೆಂಬ ದೇಶ ನಿರ್ಮಾಣವಾಯಿತು. ಅದೇ ವೇಳೆಗೆ ನಿಜವಾಗಿಯೂ ಉಳಿದ ಹಿಂದೂಸ್ಥಾನವು ಅಂದರೆ ಭಾರತವು ‘ಹಿಂದೂ ರಾಷ್ಟ್ರ’ವೆಂದು ಘೋಷಣೆಯಾಗಬೇಕಿತ್ತು; ಆದರೆ ಹಾಗಾಗಲಿಲ್ಲ. ತದ್ವಿರುದ್ಧ 1976 ರ ತುರ್ತುಪರಿಸ್ಥಿತಿಯ ಕಾಲದಲ್ಲಿ ಎಲ್ಲ ವಿರೋಧಿಗಳನ್ನು ಸೆರೆಮನೆಗೆ ತಳ್ಳಿ ಸಂವಿಧಾನವನ್ನು ತಿದ್ದುಪಡಿ ಮಾಡಿ ಅಂದಿನ ಕಾಂಗ್ರೆಸ್ ಸರಕಾರವು ‘ಸೆಕ್ಯುಲರ್’ ಈ ಶಬ್ದವನ್ನು ಸಂವಿಧಾನದಲ್ಲಿ ತುರುಕಿತು. ಆದರೆ ಈ ‘ಸೆಕ್ಯುಲರ್’ ಶಬ್ದದ ಯಾವುದೇ ಅಧಿಕೃತ ವ್ಯಾಖ್ಯೆಯನ್ನು ಇಂದಿನವರೆಗೆ ಮಾಡಿಲ್ಲ. ಈ ಸೆಕ್ಯುಲರ್ ವಾದದ ಹೆಸರಲ್ಲಿ ಇಂದಿನ ವರೆಗೆ ಅಲ್ಪಸಂಖ್ಯಾತರ ಓಲೈಕೆ ಹಾಗೂ ಹಿಂದೂಗಳ ದಮನವೇ ಆಗುತ್ತಿದೆ. ಒಂದು ವೇಳೆ ಸಂವಿಧಾನವನ್ನು ತಿದ್ದುಪಡಿ ಮಾಡಿ ಭಾರತವನ್ನು ಅನ್ಯಾಯದಿಂದ ‘ಸೆಕ್ಯುಲರ್’ ದೇಶವೆಂದು ಘೋಷಿಸಲು ಸಾಧ್ಯವಿದೆ ಎಂದಾದರೆ, ಈಗ ಪುನಃ ಹೀಗೆಯೆ ಸಂವಿಧಾನವನ್ನು ತಿದ್ದುಪಡಿ ಮಾಡಿ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಏಕೆ ಸಾಧ್ಯವಿಲ್ಲ ?
೩. ಹಿಂದೂಗಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ : ಇಂದು ಕೇಂದ್ರದಲ್ಲಿ ಅಧಿಕಾರ ಬದಲಾವಣೆಯಾಗಿದ್ದರೂ, ಹಿಂದೂಗಳ ಮೇಲಿನ ಆಘಾತಗಳು ನಿಂತಿಲ್ಲ. ಅನೇಕ ಮುಸಲ್ಮಾನೇತರ ಯುವತಿಯರು ‘ಲವ್ ಜಿಹಾದ್’ಗೆ ಬಲಿಯಾಗುತ್ತಿದ್ದಾರೆ. ಕಮಲೇಶ್ವರ ತಿವಾರಿ, ಚಂದನ್ ಗುಪ್ತಾ, ಹರ್ಷ ಇವರಂತಹ ಹಿಂದುತ್ವನಿಷ್ಠರನ್ನು ರಾಜಾರೋಷವಾಗಿ ಹತ್ಯೆಗೈಯ್ಯಲಾಗುತ್ತಿದೆ. ತಮಿಳುನಾಡಿನ ‘ಲಾವಣ್ಯಾ’ ಇವರಂತಹ ಹಿಂದೂ ಯುವತಿ, ಮಹಿಳೆಯರಿಗೆ ಕ್ರೈಸ್ತರ ಮತಾಂತರದ ಒತ್ತಡದಿಂದಾಗಿ ಜೀವವನ್ನು ಕಳೆದುಕೊಳ್ಳಬೇಕಾಗುತ್ತಿದೆ. ಭಾರತ ಮತ್ತು ಹಿಂದುತ್ವವನ್ನು ಅವಮಾನಿಸಲು ‘ಹಿಜಾಬ್’, ರೈತರ ಆಂದೋಲನ’ ಇತ್ಯಾದಿಗಳಂತಹ ಟೂಲ್‌ಕಿಟ್’ನ್ನು ಉಪಯೋಗಿಸಲಾಗುತ್ತದೆ. ‘ಉಗುಳು ಜಿಹಾದ್’, ‘ನಾರ್ಕೋಟಿಕ್ ಜಿಹಾದ್’ ಇತ್ಯಾದಿ ಹೊಸ ಹೊಸ ಜಿಹಾದ್‌ನ ಮಾರ್ಗ ತಯಾರಾಗುತ್ತಿವೆ. ‘ಕಾಮೇಡಿ’ (ಹಾಸ್ಯದ) ಹೆಸರಿನಲ್ಲಿ ಹಿಂದೂ ದೇವತೆಗಳನ್ನು ಅಶ್ಲಾಘ್ಯವಾಗಿ ಟೀಕಿಸಲಾಗುತ್ತದೆ. ಇಂದು 32 ವರ್ಷಗಳು ಕಳೆದರೂ ಜಿಹಾದೀ ಉಗ್ರವಾದದಿಂದಾಗಿ ಕಾಶ್ಮೀರದಿಂದ ಸ್ಥಳಾಂತರಿತ ಕಾಶ್ಮೀರಿ ಹಿಂದೂಗಳನ್ನು ಕಾಶ್ಮೀರದಲ್ಲಿ ಪುನಃರ್ವಸತಿಗೊಳಿಸಲು ಸಾಧ್ಯವಾಗಿಲ್ಲ. ಕಲಮ್ 370 ರದ್ದುಪಡಿಸಿದ ಕಾರಣ ಕಾಶ್ಮೀರಿ ಹಿಂದೂಗಳಿಗೆ ಕಾಶ್ಮೀರಕ್ಕೆ ಹಿಂತಿರುಗುವ ಮಾರ್ಗವು ಸ್ವಲ್ಪ ಪ್ರಮಾಣದಲ್ಲಿ ಅನುಕೂಲವಾಗಿದ್ದರೂ ಅದು ಇದುವರೆಗೆ ಸುರಕ್ಷಿತವಾಗಿಲ್ಲವೆಂಬುದು ವಾಸ್ತವವಾಗಿದೆ. ಹಿಂದೂಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳ ಮೇಲಾಗುವ ಅತ್ಯಾಚಾರಗಳಿಗೆ ಕಡಿವಾಣ ಹಾಕಲು ‘ಹಿಂದೂ ರಾಷ್ಟ್ರ’ವು ಏಕೈಕ ಪರ್ಯಾಯವಾಗಿದೆ.
೪. ರಾಷ್ಟ್ರದ ಮೇಲಿನ ಸಂಕಟಗಳು : ಇಂದು ಭಾರತದಲ್ಲಿ 9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಪಂಜಾಬನಿಂದ ಪ್ರತ್ಯೇಕ ಖಲಿಸ್ತಾನದ, ತಮಿಳುನಾಡಿನಿಂದ ದ್ರವಿಡಸ್ತಾನದ ಬೇಡಿಕೆ ಬರುತ್ತಿದೆ. ಕೇರಳ, ಪಶ್ಚಿಮ ಬಂಗಾಲದಂತಹ ರಾಜ್ಯಗಳಲ್ಲಿ ಹಿಂದೂ ಧರ್ಮ ಮತ್ತು ರಾಷ್ಟ್ರವಿರೋಧಿ ಕಾರ್ಯಾಚರಣೆಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಅಸ್ಸಾಂನಲ್ಲಿ ಲಕ್ಷಗಟ್ಟಲೆ ಬಾಂಗ್ಲಾದೇಶಿ ನುಸುಳುಕೋರರಿದ್ದಾರೆ. ‘ಹಲಾಲ್’ ಅರ್ಥವ್ಯವಸ್ಥೆಯ ಮೂಲಕ ಒಂದು ಸಮಾಂತರ ಇಸ್ಲಾಮಿಕ್ ಅರ್ಥ ವ್ಯವಸ್ಥೆಯನ್ನು ರಚಿಸುವ ಷಡ್ಯಂತ್ರ ಬೆಳಕಿಗೆ ಬಂದಿದೆ. ಭಾರತದ ಪ್ರಾಣವಾಗಿರುವ ಸನಾತನ ಧರ್ಮವು ರಾಜ್ಯವ್ಯವಸ್ಥೆಯಿಂದ ಲುಪ್ತವಾಗಿರುವುದರಿಂದ ಇಂದು ಈ ಸ್ಥಿತಿ ಉದ್ಭವಿಸಿದೆ. ಈ ಕಾರಣಕ್ಕಾಗಿಯೇ ಹಿಂದವೀ ಸ್ವರಾಜ್ಯದ ಮಾದರಿಯಲ್ಲಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಅವಶ್ಯಕತೆಯಿದೆ.
೫. ಭೌತಿಕ ವಿಕಾಸದ ಜೊತೆಗೆ ಆಧ್ಯಾತ್ಮಿಕ ವಿಕಾಸವೂ ಅವಶ್ಯಕವಾಗಿದೆ : ಇಂದು ದೇಶವು ವಿಕಾಸದ ದೃಷ್ಟಿಯಲ್ಲಿ ಹೆಜ್ಜೆಯಿಡುತ್ತಿದೆ. ಆದರೆ ಸಮಾಜವ್ಯವಸ್ಥೆ ಮತ್ತು ರಾಷ್ಟ್ರ ರಚನೆಯು ಆದರ್ಶವಾಗಲು ಭೌತಿಕ ವಿಕಾಸದ ಜೊತೆಗೆ ಆಧ್ಯಾತ್ಮಿಕ ವಿಕಾಸವೂ ಆವಶ್ಯಕವಾಗಿದೆ. ಕೊರೊನಾದ ಕಾಲದಲ್ಲಿ ವೈಜ್ಞಾನಿಕ ಪ್ರಗತಿಯ ಮಿತಿಯನ್ನು ಎಲ್ಲರೂ ಅನುಭವಿಸಿದ್ದಾರೆ. ಆದ್ದರಿಂದ ಶಾಶ್ವತವಾದ ವಿಕಾಸವನ್ನು ಸಾಧಿಸಲಿಕ್ಕಿದ್ದರೆ, ಅಧ್ಯಾತ್ಮ ಮತ್ತು ಸನಾತನ ಧರ್ಮದ ಆಶ್ರಯವನ್ನು ಪಡೆಯದೆ ಪರ್ಯಾಯವಿಲ್ಲ. ಧರ್ಮಾಧಿಷ್ಠಿತ ರಾಜ್ಯಗಳ ಆದರ್ಶ ಉದಾಹರಣೆಗಳು ನಮ್ಮಲ್ಲಿ ಅನೇಕ ಇವೆ, ಆದ್ದರಿಂದ ಹಿಂದೂ ರಾಷ್ಟ್ರ ಹೇಗಿರುತ್ತದೆ, ಎನ್ನುವುದರ ಮಾದರಿಯು ನಮ್ಮ ಇತಿಹಾಸದಲ್ಲಿ ನೋಡಲು ಸಿಗುತ್ತದೆ. ಭೌತಿಕ ವಿಕಾಸವಾಗಿದ್ದರೂ, ನಾವು ಯಾವ ಸಮಾಜಕ್ಕಾಗಿ ಅದನ್ನು ಮಾಡುತ್ತಿದ್ದೇವೆಯೊ, ಆ ಸಮಾಜವನ್ನೂ ಉನ್ನತವನ್ನಾಗಿಸಲು ಪ್ರಯತ್ನಿಸಬೇಕಾಗಿದೆ. ಆದರ್ಶ ವ್ಯಕ್ತಿತ್ವವನ್ನು ಸಾಕಾರಗೊಳಿಸಲು ಅಂದರೆ ಆದರ್ಶ ಸಮಾಜರಚನೆಗಾಗಿ ಅಂದರೆ ಭೌತಿಕ ವಿಕಾಸದ ಜೊತೆಗೆ ಆಧ್ಯಾತ್ಮಿಕ ವಿಕಾಸವನ್ನೂ ಸಾಧಿಸಲು ಭಾರತದಲ್ಲಿ ಹಿಂದೂ ರಾಷ್ಟ್ರ ಬರುವುದು ಆವಶ್ಯಕವಾಗಿದೆ. ಈ ದೃಷ್ಟಿಯಲ್ಲಿ ಕೂಲಂಕುಷವಾಗಿ ಚರ್ಚಿಸಲು, ದಿಶೆಯನ್ನು ನೀಡಲು ಹಾಗೂ ಕೃತಿಶೀಲರಾಗುವ ಸಲುವಾಗಿಯೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವನ್ನು ಆಯೋಜಿಸಲಾಗಿದೆ.
೬. ಅಧಿವೇಶನದ ಫಲಶ್ರುತಿ : ಈ ಹಿಂದೂ ರಾಷ್ಟ್ರದ ಸಂಕಲ್ಪನೆಯನ್ನು ಎಲ್ಲ ಜನಸಮುದಾಯಕ್ಕೆ ತಲುಪಿಸುವುದರಲ್ಲಿ, ಹಿಂದುತ್ವನಿಷ್ಠ ಹಾಗೂ ರಾಷ್ಟ್ರಪ್ರೇಮಿ ಸಂಘಟನೆಗಳನ್ನು ಹಿಂದೂ ರಾಷ್ಟ್ರದ ದಿಕ್ಕಿನಲ್ಲಿ ಕೃತಿಶೀಲರನ್ನಾಗಿ ಮಾಡುವುದರಲ್ಲಿ ಹಾಗೂ ಸನಾತನ ಧರ್ಮನಿಷ್ಠ ಹಿಂದೂಗಳ ವ್ಯಾಪಕ ಸಂಘಟನೆಯನ್ನು ಮಾಡುವುದರಲ್ಲಿ ಕಳೆದ 9 ವರ್ಷಗಳಿಂದ ನಡೆಯುತ್ತಿರುವ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ಗಳು ಸಿಂಹಪಾಲನ್ನು ನೀಡಿವೆ. ಕೆಲವು ವರ್ಷಗಳ ಹಿಂದಿನವರೆಗೆ ಅಸ್ಪೃಶ್ಯವಾಗಿದ್ದ ‘ಹಿಂದೂ ರಾಷ್ಟ್ರ’ ಈ ಶಬ್ದದ ಘೋಷಣೆಯು ಇಂದು ಎಲ್ಲೆಡೆ ಆಗುತ್ತಿರುವುದು ಕಾಣಿಸುತ್ತಿದೆ. ಇದೊಂದು ರೀತಿಯಲ್ಲಿ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಫಲಶ್ರುತಿಯೆಂದೇ ಹೇಳಬೇಕಾಗುತ್ತದೆ. ಇಂದು ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುವ ದಿಕ್ಕಿನತ್ತ ಪ್ರಯಾಣಿಸುತ್ತಿದೆ. ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಿ ನಿಜವಾದ ಅರ್ಥದಿಂದ ಮಹಾಧಿಕಾರದೆಡೆಗೆ ಅಂದರೆ ವಿಶ್ವಗುರು ಪದವಿಯೆಡೆಗೆ ಭಾರತದ ಅಮೃತಮಯ ಪ್ರಯಾಣವಾಗಬೇಕೆಂಬ ಅಪೇಕ್ಷೆಯಿದೆ ! – ಸಂಕಲನಕಾರರು : ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ (ಸಂಪರ್ಕ : 99879 66666)

ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು,
ಹಿಂದೂ ಜನಜಾಗೃತಿ ಸಮಿತಿ (ಸಂ : 99879 66666 )
####################################
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ: 9449553305…