
ದಿನಾಂಕ 10.08.2021ರಂದು ಕರ್ನಾಟಕ ಸರ್ಕಾರ, ಸರ್ಕಾರದ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಸಭೆ ಸಮಾರಂಭಗಳಲ್ಲಿ ಅತಿಥಿಗಳಿಗೆ ನೆನಪಿನ ಕಾಣಿಕೆ, ಹಾರ,ಶಾಲುಗಳನ್ನು ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿರುವುದು ಈ ರಾಜ್ಯದ ಕುಶಲಕರ್ಮಿಗಳ ಮೇಲೆ ನಡೆಸಿರುವ ಗಧಾ ಪ್ರಹಾರ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಬಿ.ಆರ್. ಸಂತೋಷ್ ತಮ್ಮ ವಿಷಾದ ವ್ಯಕ್ತ ಪಡಿಸಿದ್ದಾರೆ.
ರಾಜ ಮಹಾರಾಜರ ಕಾಲದಿಂದಲೂ ಯಾವುದೇ ಗಣ್ಯ ವ್ಯಕ್ತಿ ಭೇಟಿ ನೀಡಿದಾಗ, ಅದರ ನೆನಪಿಗಾಗಿ ಸ್ಮರಣಿಕೆಗಳನ್ನು ನೀಡಿ ಗೌರವಿಸುವುದು ನಮ್ಮ ರಾಜ್ಯದ ಸತ್ಸಂಪ್ರದಾಯ. ಈ ಕರಕುಶಲ ಕಲೆಯನ್ನೇ ನಂಬಿಕೊಂಡು ಬಂದಿರುವ ಈ ರಾಜ್ಯದ ಕುಶಲಕರ್ಮಿಗಳು ತಯಾರಿಸಿಕೊಟ್ಟ ಸ್ಮರಣಿಕೆಗಳು ನಮ್ಮ ರಾಜ್ಯದ ಮತ್ತು ರಾಷ್ಟ್ರದ ಸಂಸ್ಕ್ರತಿಯ ಪ್ರತೀಕವಾಗಿ ಇಂದಿಗೂ ದೇಶ, ವಿದೇಶಗಳಲ್ಲಿ ತಮ್ಮ ಕಂಪನ್ನು ಮೂಡಿಸಿವೆ. ಅದರಲ್ಲೂ ಮಹಿಳೆಯರೇ ಹೆಚ್ಚಾಗಿ ತಯಾರಿಸುವ ಶ್ರೀಗಂಧದ ಹಾರಗಳು, ಮಣಿಪುಷ್ಪ ಹಾರಗಳು, ಏಲಕ್ಕಿ ಹಾರಗಳು ದೇಶ ವಿದೇಶಿಯರ ಮನ ಸೆಳೆದು ಇಂದಿಗೂ ಸ್ಮರಣಿಕೆಗಳಾಗಿ ಉಳಿದಿವೆ.
ಕರೋನಾ ಪೀಡಿತ ಪ್ರಸಕ್ತ ಸನ್ನಿವೇಶದಲ್ಲಿ ಇಡೀ ಕುಶಲಕರ್ಮಿ ವರ್ಗವೇ ಆರ್ಥಿಕವಾಗಿ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿರುವ ಇಂತಹ ವಿಷಮ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂತಹದ್ದೊಂದು ಆದೇಶ ಹೊರಡಿಸಿ ಗಾಯದ ಮೇಲೆ ಬರೆ ಎಳೆದಿದೆ.
ರೂ. 2.25 ಲಕ್ಷ ಕೋಟಿ ಬಜೆಟ್ ಹೊಂದಿರುವ ಕರ್ನಾಟಕ ಸರ್ಕಾರಕ್ಕೆ ಕೇವಲ ನೆನಪಿನ ಕಾಣಿಕೆ, ಹಾರ, ಶಾಲುಗಳ ಖರೀದಿಯಿಂದ ಬಹಳ ದೊಡ್ಡ ಆರ್ಥಿಕ ಉಳಿತಾಯವಾಗುವುದು ನಿಜಕ್ಕೂ ನಂಬಲು ಅನರ್ಹವಾದ ವಿಚಾರ. ಆದರೆ ಈ ಉದ್ಯೋಗದಿಂದ ದೈನಂದಿನ ಜೀವನ ಸಾಗಿಸುತ್ತಿರುವ ಬಡ ಕುಶಲಕರ್ಮಿಗಳು ಮುಂದಿನ ದಿನಗಳಲ್ಲಿ ತಮ್ಮ ಕರಕುಶಲ ವ್ರತ್ತಿಯನ್ನು ತ್ಯಜಿಸಿದಲ್ಲಿ ರಾಜ್ಯದಲ್ಲಿರುವ ಸಾಂಪ್ರದಾಯಿಕ ಕಲೆಗಳು ನಶಿಸಿ ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಈ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರೇ ತಮಗೆ ನೀಡಿರುವ ಎಲ್ಲಾ ನೆನಪಿನ ಕಾಣಿಕೆಗಳನ್ನು ಸಂಗ್ರಹಿಸುವ ಅಭ್ಯಾಸ ಹೊಂದಿದ್ದಾರೆ.
ಆದ್ದರಿಂದ ದಯವಿಟ್ಟು ರಾಜ್ಯಸರ್ಕಾರ ಪ್ರಸಕ್ತ ಆದೇಶವನ್ನು ಹಿಂಪಡೆದು ಕುಶಲಕರ್ಮಿಗಳಿಗೆ ಕನಿಷ್ಠ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ಬಿ.ಆರ್. ಸಂತೋಷ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಬಿ.ಆರ್. ಸಂತೋಷ್
9448127407…
ವರದಿ… ರಘುರಾಜ್ ಹೆಚ್. ಕೆ..
ಸುದ್ದಿ ಮತ್ತು ಜಾಹೀರಾತು ನೀಡಲು ಸಂಪರ್ಕಿಸಿ…9449553305/7892830899…