
ದಾವಣಗೆರೆ: ತಾಲೂಕಿನ ಚನ್ನಗಿರಿಯಲ್ಲಿ ಏಪ್ರಿಲ್ 8ರಂದು ಚುನಾವಣಾ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಗಾರದಲ್ಲಿ ಬೆಳಿಗ್ಗೆ ಹಾಜರಾಗಿ ಮಧ್ಯಾಹ್ನ ತರಬೇತಿಗೆ ಹಾಜರಾಗದೆ ಅನ್ಯ ಮಹಿಳಾ ಸಿಬ್ಬಂದಿಯೊಂದಿಗೆ ಹೊರ ಹೋದ ಶಿಕ್ಷಕನನ್ನು ಪ್ರಶ್ನಿಸಿದ ತಹಶೀಲ್ದಾರೊಂದಿಗೆ ಅನುಚಿತವಾಗಿ ವರ್ತನೆ ಮಾಡಿದ ಚನ್ನಗಿರಿ ಎಸ್.ಕೆ.ಎಂ.ಎಸ್ ಮಿಲ್ಲತ್ ಪ್ರೌಢಶಾಲೆ ಸಹ ಶಿಕ್ಷಕರಾದ ಸೈಯದ್ ಸುಲ್ತಾನ್ ಅಹಮದ್ ರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆದ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ಮತಗಟ್ಟೆ ಅಧ್ಯಕ್ಷ, ಸಹಾಯಕ ಅಧ್ಯಕ್ಷಾಧಿಕಾರಿ ಸಿಬ್ಬಂದಿಗಳಿಗೆ ಏಪ್ರಿಲ್ 8 ರಂದು ಮೊದಲ ಹಂತದ ತರಬೇತಿಯನ್ನು ಎಲ್ಲಾ ತಾಲ್ಲೂಕುಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಚನ್ನಗಿರಿಯಲ್ಲಿ ಶ್ರೀಶ್ರೀಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಬೇತಿ ನಡೆದಿರುತ್ತದೆ. ಬೆಳಿಗ್ಗೆ ತರಬೇತಿ ಮುಗಿದು ಮಧ್ಯಾಹ್ನ 3 ಗಂಟೆಗೆ ಕೊಠಡಿ ಸಂಖ್ಯೆ 10 ರಲ್ಲಿ ತರಬೇತಿ ಆರಂಭವಾಗಿತ್ತು. ಆದರೆ ಯಾವುದೇ ಅನುಮತಿ ಇಲ್ಲದೆ ತರಬೇತಿಗೆ ಹಾಜರಾದ ಅನ್ಯ ಮಹಿಳಾ ಸಿಬ್ಬಂದಿಯೊಂದಿಗೆ ತರಬೇತಿಯಿಂದ ಹೊರ ಹೋಗುತ್ತಿರುವಾಗ ಇದನ್ನು ಪ್ರಶ್ನಿಸಿದ ತಹಶೀಲ್ದಾರ್ ಅವರೊಂದಿಗೆ ಮಹಿಳಾ ಸಿಬ್ಬಂದಿ ಸಮ್ಮುಖದಲ್ಲಿಯೇ ಅಸಭ್ಯವಾಗಿ ವರ್ತಿಸಿದ್ದಾರೆ, ಜೊತೆಗೆ ಅನ್ಯ ಸಿಬ್ಬಂದಿಯವರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದು ಚುನಾವಣಾ ಪ್ರಾಧಿಕಾರಕ್ಕೆ ಮುಜುಗರ ಉಂಟು ಮಾಡಿರುತ್ತಾರೆ. ಇಂದು ಪ್ರಜಾಪ್ರತಿನಿಧಿ ಕಾಯ್ದೆ 1951 ರ ಕಲಂ 134 ರ ನಿಯಮ ಉಲ್ಲಂಘನೆ ಮತ್ತು ಕರ್ನಾಟಕ ನಾಗರೀಕ ಸೇವಾ ನಡತೆ ನಿಯಮಾವಳಿ 1966 ಹಾಗೂ ತಿದ್ದುಪಡಿ ನಿಯಮಗಳು 2021 ರ ನಿಯಮ ಉಲ್ಲಂಘಿಸಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಅಮಾನತು ಮಾಡಿ ಕೇಂದ್ರಸ್ಥಾನ ಬಿಡದಂತೆ ಆದೇಶಿಸಿದ್ದಾರೆ.