
ಸಾಗರ: ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ವತಂತ್ರ ಪಿಯು ಕಾಲೇಜಿನ ಪ್ರಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ನಗರದ ರೋಹಿತ್ ವಿ. ೨೦೨೩ನೇ ಸಾಲಿನ ರಾಷ್ಟ್ರಮಟ್ಟದ ಸಿಎನ್‌ಆರ್ ರಾವ್ ಅತಿ ವಿಶಿಷ್ಟ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಳೆದ ೧೪ ವರ್ಷಗಳಿಂದ ಭೌತಶಾಸ್ತ್ರ ಉಪನ್ಯಾಸಕರಾಗಿ ಹಾಗೂ ಹೊಂಗಿರಣ ಸಂಸ್ಥೆಯ ಅಟಲ್ ಟಿಂಕರಿಂಗ್ ಲ್ಯಾಬ್ ಸಂಯೋಜಕರಾಗಿ ರೊಬೊಟಿಕ್ಸ್ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ರೋಹಿತ್‌ರ ನಿರಂತರ ವೈಜ್ಞಾನಿಕ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ವೈಜ್ಞಾನಿಕ ಶಿಕ್ಷಣದ ಸಂಪನ್ಮೂಲ ವ್ಯಕ್ತಿಯಾಗಿ, ಹಲವು ಪತ್ರಿಕೆಗಳಿಗೆ ವೈಜ್ಞಾನಿಕ ಅಂಕಣ ಬರಹಗಾರರಾಗಿ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವೈಜ್ಞಾನಿಕ ಶಿಕ್ಷಣದ ಹಲವಾರು ಕಾರ್ಯಕ್ರಮಗಳನ್ನು ರೋಹಿತ್ ನಡೆಸುತ್ತಿದ್ದಾರೆ.
ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯವಾಗಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನ ಉಪನ್ಯಾಸಕರನ್ನು ಗುರುತಿಸುವ ಸಲುವಾಗಿ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್‌ಸಿಎಎಸ್‌ಆರ್) ಪ್ರತಿ ವರ್ಷ ರಾಷ್ಟ್ರಮಟ್ಟದಲ್ಲಿ ಸಿಎನ್‌ಆರ್ ರಾವ್ ಅತಿ ವಿಶಿಷ್ಟ ವಿಜ್ಞಾನ ಶಿಕ್ಷಕ ಪ್ರಶಸ್ತಿಯನ್ನು ನೀಡುತ್ತಿದೆ.
ಇವರ ಈ ವಿಶಿಷ್ಟ ಸಾಧನೆಗೆ ಕಾಲೇಜಿನ ಶಿಕ್ಷಕ ವೃಂದ ಪೋಷಕರು ವಿದ್ಯಾರ್ಥಿಗಳು ಸ್ನೇಹಿತರು ಬಂಧುಗಳು ಹಿತೈಷಿಗಳು ಅಭಿನಂದಿಸಿದ್ದಾರೆ.