
ದಾವಣಗೆರೆ: ಇಂದಿನ ಒತ್ತಡದ ಜೀವನದಲ್ಲಿ ಅರೋಗ್ಯದ ಅನಿರೀಕ್ಷತ ಸಮಸ್ಯೆಗಳು ಎದುರಾಗುತ್ತವೆ. ಈ ನಿಟ್ಟಿನಲ್ಲಿ ಜನತೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸದಾ ಜಾಗರೂಕರಾಗಿ ಇರಬೇಕೆಂದು ಭಾವಸಾರ ಇಂಡಿಯಾ ವಿಜನ್ ದಾವಣಗೆರೆ ಜಿಲ್ಲಾಧ್ಯಕ್ಷ ವಿಜಯ್‍ಕುಮಾರ್ ಕೆ.ಟಿಕಾರೆ ಅಭಿಪ್ರಾಯ ಪಟ್ಟರು.
ದಾವಣಗೆರೆಯ ಎಸ್.ಎಸ್.ನಾರಾಯಣ ಹಾರ್ಟ್ ಸೆಂಟರ್ ಹಾಗೂ ಭಾವಸಾರ ವಿಜನ್ ಇಂಡಿಯಾ, ಹಳೇ ಕುಂದುವಾಡದ ಶ್ರೀಸದ್ಗುರು ಕರಿಬಸವೇಶ್ವರ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ ಹಳೇ ಕುಂದುವಾಡದಲ್ಲಿ ಆಯೋಜಿಸಲಾಗಿದ್ದ ಉಚಿತ ಹೃದಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಅದರಲ್ಲೂ ದುಬಾರಿಯ ಇಂದಿನ ದಿನಮಾನಗಳಲ್ಲಿ ವೈದ್ಯಕೀಯ ವೆಚ್ಚಗಳನ್ನು ಭರಿಸುವುದು. ಮಧ್ಯಮ ಮತ್ತು ಬಡವರ್ಗ ಹಾಗೂ ಗ್ರಾಮೀಣ ಜನರಿಗೆ ಕಷ್ಟದ ಕೆಲಸ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಎಸ್.ಎಸ್.ನಾರಾಯಣ ಹೃದಯಾಲಯದ ವೈದ್ಯರು, ಸಿಬ್ಬಂದಿ ಅಗತ್ಯ ಇದ್ದವರಿಗೆ ಇಸಿಜಿ, 2ಡಿ ಇಕೋ ತಪಾಸಣೆ ನಡೆಸಿದ್ದಾರೆ. ಹಳೇ ಕುಂದುವಾಡ ಗ್ರಾಮದ ಗ್ರಾಮಸ್ಥರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಉಚಿತ ಹೃದಯ ರೋಗ ತಪಾಸಣೆ ಕಾರ್ಯಕ್ರಮ ಆಯೋಜಿಸಲಾಗಿದೆ. 150ಕ್ಕೂ ಹೆಚ್ಚು ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾರ್ಯಾಕಾರಿ ಮಂಡಳಿ ಸದಸ್ಯ ನಿಂಗೋಜಿರಾವ್ ಗುಜ್ಜಾರ್ ಮಾತನಾಡಿ, ಉದ್ಯೋಗದಲ್ಲಿನ ನಿರಂತರ ಒತ್ತಡ, ಅನಾರೋಗ್ಯಕರ ಆಹಾರ ಕ್ರಮಗಳು ಮತ್ತು ಅಸಮರ್ಪಕ ವಿಶ್ರಾಂತಿಯು ಆರೋಗ್ಯದ ತೊಂದರೆಗೆ ಕಾರಣವಾಗಿವೆ. ಇಂತಹ ಅನಿರೀಕ್ಷಿತ ಸಮಸ್ಯೆಗಳಿಗೆ ನಮ್ಮ ಜೀವನಶೈಲಿಯೇ ಮೂಲ ಕಾರಣ. ಈಗಲಾದರೂ ನಾವುಗಳು ಎಚ್ಚೆತ್ತುಕೊಂಡು ನಮ್ಮ ಆಹಾರ ಕ್ರಮ, ಜೀವನಶೈಲಿ ಬದಲಾಯಿಸಿ ಕೊಳ್ಳಬೇಕು.
ಇಲ್ಲವಾದಲ್ಲಿ ವಯಸ್ಸಾಗುವ ಮುನ್ನವೇ ನಮಗೆ ಮುಪ್ಪಿನಲ್ಲಿ ಬರುವ ಕಾಯಿಲೆಗಳು ಬರುವುದಂತೂ ಗ್ಯಾರೆಂಟಿ. ಇದೆಲ್ಲದಕ್ಕೂ ನಾವುಗಳು ಆಯಾ ಕಾಲದಲ್ಲಿ ಎಲ್ಲಾ ಹಂತದ ಯೋಚನೆಗಳೇ ಕಾರಣ. ಅದ್ದರಿಂದ ನಾವುಗಳು ಯೋಚನೆ ಬಿಟ್ಟು, ಅರೋಗ್ಯದತ್ತ ಗಮನ ಹರಿಸಬೇಕೆಂದು ಕರೆ ನೀಡಿದರು.
ಈ ವೇಳೆ ಕಾರ್ಯದರ್ಶಿ ನರೇಂದ್ರ ಕುಮಾರ್ ಟಿಕಾರೆ, ನಾಗವೇಣಿ ಟಿಕಾರೆ, ನಿಂಗೋಜಿರಾವ್ ಗುಜ್ಜಾರ್, ರಮೇಶ್ ತೇಲ್ಕರ್, ರಮೇಶ್ ಅಂಬರ್‍ಕರ್, ಅರುಣ್ ಗಡ್ಡಾಳೆ, ಅನಿಲ್ ಮಹಳದ್‍ಕರ್, ಕವಿತಾ ಸರ್ವದೆ, ಸುಧಾ ಟಿಕಾರೆ, ಅನ್ನಪೂರ್ಣ ಗುಜ್ಜಾರ್, ಗಣೇಶ್ ವಾದೋನೆ, ಶಂಕರ್ ಬೋಂದಾಡೆ, ಅಶೋಕ್ ನವಲೆ, ಮಂಜುನಾಥ್ ಗುಡ್ಡಾಳೆ, ಕುಂಡವಾಡ ಮಂಜುನಾಥ್, ಆಶಾ ಕಾರ್ಯಕರ್ತರು, ಎಸ್.ಎಸ್. ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ, ಶ್ರೀಸದ್ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಇತರರು ಇದ್ದರು.
#####################################
ರಘುರಾಜ್ ಹೆಚ್.ಕೆ….9449553305….